ಶಿರಸಿ: ಮುಂದುವರಿದ ದೇಶದಲ್ಲೂ ಹಿಂಸೆ ನಡೆಯುತ್ತಿದ್ದರೂ ಯಾರೂ ಮಾತನಾಡುತ್ತಿಲ್ಲ. ಜನರ ಮನಸ್ಸನ್ನು ಬದಲಿಸುವ ಕಾರ್ಯ ಸಾಹಿತ್ಯದಿಂದ ಸಾಧ್ಯ ಎಂದು ಹಿರಿಯ ಕವಿ ರಾಜೀವ ಅಜ್ಜೀಬಳ ಹೇಳಿದರು.
ಇಲ್ಲಿನ ರೈತ ಭವನದಲ್ಲಿ ಶನಿವಾರ ಸಾಹಿತ್ಯ ಸಿಂಚನ ಬಳಗ ನೀಡುವ ಪ್ರಥಮ ಸಾಹಿತ್ಯ ಸಿಂಚನ ಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.
ಕಾವ್ಯದಲ್ಲಿ ತೊಡಗಿಕೊಂಡರೆ ಮನುಷ್ಯ ಮನುಷ್ಯನಾಗುತ್ತಾನೆ. ಕಾವ್ಯ, ಸಾಹಿತ್ಯ ಮಾತ್ರ ಮನುಜರ ಮನಸ್ಸನ್ನು ಬದಲಿಸುವ ಕಾರ್ಯ ಮಾಡಲು ಸಾಧ್ಯ. ಅದು ಮಾತ್ರ ಜಗತ್ತನ್ನು ಶಾಂತಿಯತ್ತ ತಲುಪಿಸಬಹುದು ಎಂದರು.
ನಾವು ಇಂದು ಕೊರೋನಾ ನಂತರದ ಕಾಲದಲ್ಲಿ ಇದ್ದೇವೆ. ನೈರ್ಮಲ್ಯವೇ ಬದುಕಾಗಿದೆ. ಹಣ ಏನು ಅಲ್ಲ ಎಂಬಂತಾಗಿದೆ. ಅಂಥ ಕಾಲದಲ್ಲೂ ಸಾಹಿತ್ಯ ದೃತಿಗೆಡಲಿಲ್ಲ. ಸಾಹಿತ್ಯ, ಕಾವ್ಯಗಳು ದಿಕ್ಕೆಟ್ಟ ಬದುಕಿಗೆ ದಾರಿ ತೋರಬೇಕು. ಸಾಹಿತ್ಯ, ಕಾವ್ಯಕ್ಕೆ ಮಾನವೀಯ ಸ್ಪರ್ಷ ಇರಲೇಬೇಕು. ಈಗ ಇನ್ನಷ್ಟು ತೀವ್ರ ಆಗಬೇಕು. ಆಧುನಿಕ ಬದುಕಿಗೆ ಇದು ಅನಿವಾರ್ಯ ಎಂದೂ ಪ್ರತಿಪಾದಿಸಿದರು.
ಟಿಂ ಪರಿವರ್ತನೆ ಸಂಸ್ಥಾಪಕ ಹಿತೇಂದ್ರ ನಾಯ್ಕ್ ಉದ್ಘಾಟಿಸಿ, ಎಲ್ಲಡೆ ಜಾತಿ ಧರ್ಮದ ಮನೋಭಾವ ತೊಳೆದು ಹೋಗಬೇಕು. ಹಾಗೆ ಆದರೆ ಮಾತ್ರ ಸೌಹಾರ್ದ ವಾತಾವರಣ ಇರುತ್ತದೆ. ಸಾಹಿತ್ಯ ಎಲ್ಲರನ್ನೂ ಒಂದು ಮಾಡುತ್ತದೆ ಎಂದರು.
ಸುಮುಖ ಸಂಪಾದಕ, ಗಝಲ್ ಕವಿ ಸುಬ್ರಾಯ ಭಟ್ ಬಕ್ಕಳ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಮೋಹನ ಭರಣಿ, ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮೀ ನುಗ್ಗೆಹಳ್ಳಿ, ವೇದಿಕೆ ಅಧ್ಯಕ್ಷ ಶಿವಪ್ರಸಾದ ಹಿರೇಕೈ, ಭವ್ಯ ಹಳೆಯೂರು, ದತ್ತಗುರು ಕಂಠಿ, ಉಷಾ ಭಟ್ಟ ಇತರರು ಇದ್ದರು.