ಸಾಗರ: ರಾಜ್ಯದ ಅತಿ ಮಹತ್ವದ ಜಲ ವಿದ್ಯುತ್ ಉತ್ಪಾದನೆಯ ಉದ್ದೇಶದ ಲಿಂಗನಮಕ್ಕಿ ಜಲಾಶಯದ ನೀರಿನ ಸಂಗ್ರಹ ಮಟ್ಟ 1,795 ಅಡಿ ತಲುಪಿದ್ದು, ಇದು ಜಲಾಶಯದ ಪಾಲಿಗೆ ಮಹತ್ತರ ಮೈಲುಗಲ್ಲು ಎಂದು ಕೆಪಿಸಿ ಮೂಲಗಳು ತಿಳಿಸಿವೆ.
ಎರಡು ಸಾವಿರ ಚ.ಕಿ.ಮೀ ಜಲಾಯನಯನ ಪ್ರದೇಶದ ವ್ಯಾಪ್ತಿ ಇರುವ ಲಿಂಗನಮಕ್ಕಿ ಜಲಾಶಯ ಗರಿಷ್ಠ 1,819 ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಅಣೆಕಟ್ಟೆಯ 11 ಕ್ರೆಸ್ಟ್ ಗೇಟಿನ ತಳದ ಮಟ್ಟಕ್ಕೆ ನೀರು ತಲುಪಿದಾಗ ಅದನ್ನು ಬೆಡ್ ಲೆವೆಲ್ ಎಂದು ಕೆಪಿಸಿ ಅಧಿಕಾರಿಗಳು ಗುರುತಿಸುತ್ತಾರೆ.
ಈ ಮಟ್ಟದಿಂದ 24 ಅಡಿ ಎತ್ತರವನ್ನು ಪ್ರತಿಯೊಂದು ಕ್ರೆಸ್ಟ್ ಗೇಟ್‌ಗಳು ಹೊಂದಿರುತ್ತವೆ. ಕೆಪಿಸಿ ಇಲಾಖೆ ಅಧಿಕಾರಿಗಳ ಅಂದಾಜಿನ ಪ್ರಕಾರ, ಬೆಡ್ ಲೆವೆಲ್ ಮಟ್ಟಕ್ಕೆ ಜಲ ಸಂಗ್ರಹಗೊಂಡರೆ ಒಂದು ವರ್ಷ ಪೂರ್ತಿ ಸಾಧಾರಣ ಮಟ್ಟದಲ್ಲಿ ಜಲವಿದ್ಯುದಾಗಾರಗಳನ್ನು ನಿರ್ವಹಣೆ ಮಾಡಲು ಸಾಧ್ಯ. ಹಾಗಾಗಿ 1,795 ಅಡಿ ತಲುಪಿರುವುದು ಅಣೆಕಟ್ಟೆಯ ಪಾಲಿಗೆ ಮೈಲುಗಲ್ಲು ಎನ್ನಲಾಗುತ್ತದೆ.
ಇದನ್ನೂ ಓದಿ:ಪುನೀತ್ ರಾಜಕುಮಾರ್ ಟ್ವಿಟ್ಟರ್ ಅಕೌಂಟ್ ಗೆ ಮತ್ತೆ ನೀಲಿ ಟಿಕ್!
ಶರಾವತಿ ಜಲಾನಯನ ಪ್ರದೇಶಗಳಲ್ಲಿ ಮಳೆ ಹೆಚ್ಚಾಗಿದ್ದು, ಜಲಾಶಯದ ಒಳ ಹರಿವಿನಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯನ್ನು ಕಾಣುತ್ತಿದೆ. ಪ್ರಸ್ತುತ ಲಿಂಗನಮಕ್ಕಿ ಜಲಾಶಯದಲ್ಲಿ ಕಳೆದ ವರ್ಷದ ಇದೇ ದಿನಕ್ಕೆ ಹೋಲಿಸಿದಾಗ 4 ಅಡಿಗಳಷ್ಟು ಹೆಚ್ಚಿನ ನೀರು ಸಂಗ್ರಹವಾಗಿದೆ. ಸೋಮವಾರದಿಂದ ಮಳೆಯ ಪ್ರಮಾಣ ಕುಸಿದಿದ್ದರೂ ಜಲಾಶಯಕ್ಕೆ ಹರಿದು ಬರುವ ನೀರು ಮುಂದುವರೆದಿದೆ.