ಸಾಗರ: ತಾಲೂಕಿನ ನಾಡಕಲಸಿ ಗ್ರಾಮದ ಸರ್ವೇ ನಂ. 49 ರಲ್ಲಿ ಸರ್ಕಾರಿ ಗೋಶಾಲೆ ನಿರ್ಮಿಸಲು ಉದ್ದೇಶಿಸಿರುವ ಕ್ರಮವನ್ನು ಖಂಡಿಸಿ ಮಂಗಳವಾರ ರೈತ ಸಂಘದ ಸಹಕಾರದೊಂದಿಗೆ ಗ್ರಾಮ ಪಂಚಾಯ್ತಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಗ್ರಾಮಸ್ಥರು ತಮ್ಮ ನೂರಾರು ಜಾನುವಾರುಗಳನ್ನು ಗ್ರಾಮ uttaraಪಂಚಾಯ್ತಿ ಎದುರು ತಂದು ಕಟ್ಟುವ ಮೂಲಕ ಗೋಶಾಲೆಗೆ ತಮ್ಮ ವಿರೋಧವಿದೆ ಎಂದು ಪ್ರತಿಭಟನೆ ದಾಖಲು ಮಾಡಿದರು. ರೈತ ಸಂಘದ ವತಿಯಿಂದ ಸ್ಥಳದಲ್ಲಿಯೇ ಅಡುಗೆ ಮಾಡಿ ಊಟ ಮಾಡುವ ಮೂಲಕ ಗೋಶಾಲೆಯನ್ನು ನಾಡಕಲಸಿ ಗ್ರಾಮದಿಂದ ಸ್ಥಳಾಂತರಿಸುವಂತೆ ಒತ್ತಾಯಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿ, ಜಿಲ್ಲೆಗೊಂದು ಗೋಶಾಲೆ ಯೋಜನೆ ಉತ್ತಮವಾಗಿದೆ. ಆದರೆ ಅತಿಹೆಚ್ಚು ಗೋವುಗಳಿರುವ ನಾಡಕಲಸಿ ಗ್ರಾಮದಲ್ಲಿ ಗೋಶಾಲೆ ಮಾಡುವ ಉದ್ದೇಶದಿಂದ ಇಲ್ಲಿನ ಗೋಮಾಳದ ಜಾಗದ ಮೇಲೆ ಕಣ್ಣಿಟ್ಟಿರುವ ಕ್ರಮ ಅವೈಜ್ಞಾನಿಕವಾಗಿದೆ. ಜಿಲ್ಲೆಯಲ್ಲಿರುವ ಗೋಶಾಲೆಗಳನ್ನು ಸರ್ಕಾರ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ನಾಡಕಲಸಿ ಗ್ರಾಮದಲ್ಲಿ 43 ಎಕರೆ ಪ್ರದೇಶದಲ್ಲಿ ಗೋಶಾಲೆ ಮಾಡಿದರೆ ಇಲ್ಲಿರುವ ಸಾವಿರಾರು ಗೋವುಗಳಿಗೆ ಮೇಯಲು ಸ್ಥಳವಿಲ್ಲದಂತೆ ಆಗುತ್ತದೆ. ಆದ್ದರಿಂದ ಸರ್ಕಾರ ಇಲ್ಲಿಗೆ ಮಂಜೂರಾಗಿರುವ ಗೋಶಾಲೆಯನ್ನು ಬೇರೆ ಕಡೆ ವರ್ಗಾಯಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ : ಅತೀ ವೇಗದ ಅರ್ಧಶತಕ ಸಿಡಿಸಿದ ರಿಚಾ ಘೋಷ್; ಭಾರತ ವನಿತೆಯರಿಗೆ ಮತ್ತೊಂದು ಸೋಲು!
ತಾಲೂಕು ಪ್ರಗತಿಪರ ಯುವ ಒಕ್ಕೂಟದ ಅಧ್ಯಕ್ಷ ರಮೇಶ್ ಈ. ಕೆಳದಿ ಮಾತನಾಡಿ, ಗೋಶಾಲೆ ಮಾಡುವ ಮುನ್ನ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಅಭಿಪ್ರಾಯ ಸಂಗ್ರಹ ಮಾಡಿಲ್ಲ. ಗ್ರಾಮದಲ್ಲಿ ೫೦೦ಕ್ಕೂ ಹೆಚ್ಚು ಕುಟುಂಬವಿದ್ದು, ಸಾವಿರಾರು ಜಾನುವಾರುಗಳಿವೆ. ಹಾಲಿ ಗೋಶಾಲೆ ಮಾಡಲು ಉದ್ದೇಶಿಸಿದ ಜಮೀನು ನಾಡಕಲಸಿ ಸೇರಿದಂತೆ ಅಕ್ಕಪಕ್ಕದ ಹತ್ತಾರು ಹಳ್ಳಿಗಳ ಜಾನುವಾರುಗಳಿಗೆ ಮೇಯಲು ಇರುವ ಏಕೈಕ ಸ್ಥಳವಾಗಿದೆ. ಇಂತಹ ಸ್ಥಳವನ್ನು ಕಿತ್ತುಕೊಳ್ಳುವ ಆಡಳಿತದ ಕ್ರಮ ಖಂಡನೀಯ. ತಕ್ಷಣ ತಾಲೂಕು ಆಡಳಿತ ಗೋಶಾಲೆ ಯೋಜನೆಯನ್ನು ಬೇರೆ ಕಡೆ ಸ್ಥಳಾಂತರಿಸಿ ಗ್ರಾಮದ ಗೋಮಾಳ ಉಳಿಸಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಸೂರಜ್, ಹೊಯ್ಸಳ ಗಣಪತಿಯಪ್ಪ, ಭದ್ರೇಶ್ ಬಾಳಗೋಡು, ವಿಜಯ್, ಸುರೇಶ್ ಬೆಳಂದೂರು, ಗ್ರಾಮಸ್ಥರಾದ ನಾಗರಾಜ್, ರಾಮ್ ಸಾಗರ್, ಸತ್ಯನಾರಾಯಣ್, ಗೋಪಾಲ, ಮಹೇಂದ್ರ, ವೇದರಾಜ್, ವೆಂಕಟೇಶ್, ದೇವರಾಜ್, ಮೋಹನ್, ಗೋಪಾಲ್ ಕಲಸೆ ಇನ್ನಿತರರು ಹಾಜರಿದ್ದರು.