Advertisement

ಸರ್ಕಾರಿ ಶಾಲೆಗೆ ಕಾಯಕಲ್ಪ: ಸುರೇಶ್‌ಕುಮಾರ್‌

12:48 PM Feb 29, 2020 | Naveen |

ಸಾಗರ: ಬೆಂಗಳೂರಿನ ಸುಧಾಮೂರ್ತಿ ಮಾರ್ಗದರ್ಶನದ ಇನ್ಫೊಧೀಸಿಸ್‌ ನೇತೃತ್ವದಲ್ಲಿ ರಾಜ್ಯದ 1 ಸಾವಿರ ಶಾಲೆಗಳಿಗೆ ಕಂಪ್ಯೂಟರ್‌ ಸ್ಮಾರ್ಟ್‌ಕ್ಲಾಸ್‌, ಒಂದು ಸಾವಿರ ಶಿಕ್ಷಕರಿಗೆ ವಿಜ್ಞಾನ ವಿಷಯದಲ್ಲಿ ವಿಶೇಷ ತರಬೇತಿ ಮತ್ತು ಮೊದಲ ಹಂತದಲ್ಲಿ 10 ಶಾಲೆಗಳಿಗೆ ಗ್ರಂಥಾಲಯ ನಿರ್ಮಾಣ ಮಾಡಲಾಗುತ್ತಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶಕುಮಾರ್‌ ಎಸ್‌.ತಿಳಿಸಿದರು.

Advertisement

ತಾಲೂಕಿನ ಕೆಳದಿಯಲ್ಲಿ ಶುಕ್ರವಾರ ಕೆಳದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಸರಸ್ವತಿ ಪುತ್ಥಳಿ, ಸ್ಮಾರ್ಟ್‌ಕ್ಲಾಸ್‌, ನೂತನ ಮಹಾದ್ವಾರ, ಹಿರಿಯ ಶಿಕ್ಷಕರು ಹಾಗೂ ದಾನಿಗಳಿಗೆ ಸನ್ಮಾನ ಮತ್ತು ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುವಂತೆ ಆಗಬೇಕು. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳು ಲಾಸ್ಟ್‌ ಬೆಲ್‌ ಸಂದರ್ಭದಲ್ಲಿ ಸಂತೋಷ ಪಡುತ್ತಾರೆ. ಅದರ ಬದಲು ಮಕ್ಕಳು ಶಾಲಾವ ಧಿಯ ಎಲ್ಲ ಹಂತದಲ್ಲೂ ಸಂತೋಷಪಡಬೇಕು. ಲಾಸ್ಟ್‌ ಬೆಲ್‌ ಸಂದರ್ಭದಲ್ಲಿ ಮಕ್ಕಳು ಶಾಲೆಯಿಂದ ಮನೆಗೆ ಹೋಗಬೇಕಲ್ಲ ಎಂದು ಬೇಸರಪಟ್ಟುಕೊಳ್ಳುವ ವಾತಾವರಣ ನಿರ್ಮಾಣವಾಗಬೇಕು. ಸರ್ಕಾರಿ ಶಾಲೆಗಳ ಮೇಲೆ ಪೋಷಕರ ವಿಶ್ವಾಸಾರ್ಹತೆ ಹೆಚ್ಚಬೇಕು. ಜೊತೆಗೆ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಸರದಿಯಲ್ಲಿ ನಿಲ್ಲುವಂತೆ ಆಗಬೇಕು ಎಂದು ತಿಳಿಸಿದರು.

ಬೆಂಗಳೂರಿನಂತ ನಗರದಲ್ಲಿ ಕೂಲಿ ಕಾರ್ಮಿಕರ ಮಕ್ಕಳನ್ನು ಸಹ ಖಾಸಗಿ ಶಾಲೆಗೆ ಸೇರಿಸಲಾಗುತ್ತಿದೆ. ತಮ್ಮ ದುಡಿಮೆಯ ಶೇ. 40 ಭಾಗವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳನ್ನೇ ಅಭಿವೃದ್ಧಿಪಡಿಸಿ ಎಲ್ಲ ಮಕ್ಕಳು ಅಲ್ಲಿಯೇ ಶಿಕ್ಷಣ ಪಡೆಯಬೇಕು. ಕೂಲಿ ಕಾರ್ಮಿಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುವ ಶೇ. 40 ಹಣವನ್ನು ಅವರ ಕುಟುಂಬ ನಿರ್ವಹಣೆಗೆ ಬಳಸುವಂತಹ ವಾತಾವರಣ ನಿರ್ಮಾಣ ಮಾಡಬೇಕು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ಬಳಿ ಹೆಚ್ಚಿನ ಅನುದಾನ ಕೋರಿದ್ದು, ಕೊಡುವ ಭರವಸೆ ನೀಡಿದ್ದಾರೆ. ಇಂತಹ ಶತಮಾನೋತ್ಸವ ಸಂಭ್ರಮ ಆಚರಣೆ ಮಾಡುತ್ತಿರುವ ಶಾಲೆಗಳು ಇತರ ಶಾಲೆಗಳಿಗೆ ಮಾದರಿಯಾಗಬೇಕು ಎಂದು ಹೇಳಿದರು.

“ಶತಾಕ್ಷರ’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಚ್‌. ಹಾಲಪ್ಪ ಹರತಾಳು, ಶಾಲೆಯೊಂದು ನೂರು ವರ್ಷ ಪೂರೈಸಿದೆ ಎಂದರೆ ಅದು ಸದಾ ನೆನಪಿನಲ್ಲಿ ಉಳಿಯುವ ಮೈಲಿಗಲ್ಲು. ಇಂತಹ ಸಂದರ್ಭದಲ್ಲಿ ಶಾಲಾ ನಿರ್ಮಾಣಕ್ಕೆ ಶ್ರಮಿಸಿದ ಹಿರಿಯರನ್ನು ನೆನಪು ಮಾಡಿಕೊಳ್ಳುವ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಶಾಲೆಗಳಿಗೆ ದೇಣಿಗೆ ಕೊಡಲು ಹೆಚ್ಚು ಜನ ಆಸಕ್ತಿ ತೋರಿಸುತ್ತಾರೆ. ಅಂತಹವರ ಸಹಕಾರವನ್ನು ಪಡೆಯುವ ಮೂಲಕ ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ಪ್ರಯತ್ನ ನಡೆಯಬೇಕು. ಅನೇಕ ಕನಸುಗಳನ್ನು ಕಟ್ಟಿಕೊಂಡು ಶಾಲೆಗೆ ಬರುವ ಮಕ್ಕಳಿಗೆ ಸರ್ಕಾರ, ಮಂತ್ರಿಗಳು, ನಮ್ಮಂತಹ ಜನಪ್ರತಿನಿಧಿಗಳು ಶಾಲೆಗೆ ಮೂಲ ಸೌಲಭ್ಯ ಒದಗಿಸುವ ಮೂಲಕ
ಕನಸು ನನಸಾಗಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

Advertisement

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಕೆಳದಿ ರಾಜಗುರು ಹಿರೇಮಠದ ಡಾ| ಮಹೇಶ್ವರ ಶಿವಾಚಾರ್ಯ ಸ್ವಾಮಿಗಳು, ಕೆಳದಿ ನಾಡಿಗೆ ಹೆಸರು ತಂದುಕೊಟ್ಟ ಊರಾಗಿದೆ. ಇಂತಹ ಊರಿನಲ್ಲಿ ಶಾಲೆಯೊಂದು ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ ಎಂದರೆ ಅದು ಇನ್ನೊಂದು ಹೆಗ್ಗಳಿಕೆ ಸಂಗತಿ. ಶಾಲೆಯ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ತಿಳಿಸಿದರು.

ಶಾಲಾಭಿವೃದ್ಧಿ ಹಾಗೂ ಶತಮಾನೋತ್ಸವ ಸಮಿತಿ ಅಧ್ಯಕ್ಷ ರಮೇಶ್‌ ಜಿ.ಕೆ. ಕಾರ್ಯಾಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷ ಬಿ.ಎಚ್‌.ಮಲ್ಲಿಕಾರ್ಜುನ ಹಕ್ರೆ, ಉಪಾಧ್ಯಕ್ಷ ಅಶೋಕ ಬರದವಳ್ಳಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಕಲಸೆ ಚಂದ್ರಪ್ಪ, ಕೆಳದಿ ಗ್ರಾಪಂ ಅಧ್ಯಕ್ಷೆ ಲೀಲಾವತಿ ರಾಮಕೃಷ್ಣ, ಉಪಾಧ್ಯಕ್ಷ ರಾಮಚಂದ್ರ ಕೆ.ಪಿ., ಸದಸ್ಯರಾದ ಜಯಶ್ರೀ, ಶೇಕ್‌ ಅಲಿಸಾಬ್‌, ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಮೇಶ್‌ ಎಂ.ಎನ್‌. ಕ್ಷೇತ್ರ ಶಿಕ್ಷಣಾಧಿ ಕಾರಿ ಬಿಂಬಾ ಕೆ.ಆರ್‌., ತಹಶೀಲ್ದಾರ್‌ ಚಂದ್ರಶೇಖರ್‌ ನಾಯ್ಕ ಇನ್ನಿತರರು ಇದ್ದರು.

ಸುಭಾಷ್‌ ಕೆ.ಎಂ. ಸ್ವಾಗತಿಸಿದರು. ಮುಖ್ಯ ಶಿಕ್ಷಕ ಅರುಣಕುಮಾರ್‌ ಜಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಎಚ್‌.ಎಸ್‌. ರಮೇಶ್‌ ಹಾರೆಗೊಪ್ಪ ವಂದಿಸಿದರು. ರೆಹನಾ ಬಾನು ಮತ್ತು ನಳಿನಾಕ್ಷಿ ಭಟ್‌
ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next