Advertisement

ಹಾಸ್ಯದಿಂದ ಉತ್ತಮ ವ್ಯಕ್ತಿತ್ವ

03:41 PM Feb 03, 2020 | Naveen |

ಸಾಗರ: ಮನುಷ್ಯನ ನಿಷ್ಕಲ್ಮಶ ಭಾವವೇ ಹಾಸ್ಯ. ಬದುಕಿನಲ್ಲಿ ಹಾಸ್ಯ ಉತ್ತಮ ವ್ಯಕ್ತಿತ್ವ ರೂಪಿಸುತ್ತದೆ ಎಂದು ಹಾಸ್ಯ ಸಾಹಿತಿ ಎಂ.ಎಸ್‌. ನರಸಿಂಹಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ನಗರದ ಅಣಲೆಕೊಪ್ಪದ ಡಾ| ಕೆಳದಿ ವೆಂಕಟೇಶ್‌ ಜೋಯ್ಸ ಅವರ ಮನೆಯಂಗಳದಲ್ಲಿ ಕರ್ನಾಟಕ ಜಾನಪದ ಪರಿಷತ್‌, ಜಿಲ್ಲಾ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಕೆಳದಿ ರಿಸರ್ಚ್‌ ಫೌಂಡೇಶನ್‌ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಮನೆಯಂಗಳದಿ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬದುಕಿನಲ್ಲಿ ಹಾಸ್ಯ ಕುರಿತು ಮಾತನಾಡಿದ ಅವರು, ಹಾಸ್ಯಕ್ಕೆ ಪ್ರಾಚೀನ ಇತಿಹಾಸವಿದೆ. ಕನ್ನಡ ಭಾಷೆಯ ವಿವಿಧ ಸಾಹಿತ್ಯಗಳು ಹಾಸ್ಯ ಸಂಸ್ಕೃತಿಗೆ ಮುಂದುವರಿಯಲು ತಮ್ಮದೇ ಆದ ಕೊಡುಗೆ ನೀಡಿವೆ. ಹಾಸ್ಯಪ್ರಜ್ಞೆ ಇಲ್ಲದೆ ಇದ್ದರೆ ಪರಿಪೂರ್ಣ ಮನುಷ್ಯನಾಗಲು ಸಾಧ್ಯವಿಲ್ಲ. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಹಾಸ್ಯಪ್ರಜ್ಞೆ ಅತ್ಯಗತ್ಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ| ನಾ.ಡಿಸೋಜಾ, ಅಂಗಳ ಎನ್ನುವ ಶಬ್ದ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನ ಪಡೆದಿದೆ. ನಮ್ಮ ಸಂಸ್ಕೃತಿಯ ಪ್ರತೀಕವಾಗಿರುವ ಮನೆಯಂಗಳದಲ್ಲಿ ಇಂತಹ ಸಂಸ್ಕೃತಿಯ ಸೌರಭವನ್ನು ಪ್ರಸರಿಸುವ ಮೂಲಕ ಜನರಲ್ಲಿ ಸಾಂಸ್ಕೃತಿಕ ಮೌಲ್ಯವನ್ನು ಉಜ್ವಲಗೊಳಿಸುವ ಇಂತಹ ಕಾರ್ಯಕ್ರಮಗಳು ಇವತ್ತು ತೀರಾ ಅಗತ್ಯ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಮನುಷ್ಯ ನಗುವುದನ್ನು ಮರೆತಿದ್ದಾನೆ. ನಗು ಮನುಷ್ಯನಿಗೆ ಪ್ರಕೃತಿಯಿಂದ ಬಂದ ವರವಾದರೂ ಅದನ್ನು ರೂಢಿಸಿಕೊಳ್ಳುವಲ್ಲಿ ನಾವು ವಿಫಲವಾಗುತ್ತಿದ್ದೇವೆ. ಕೆಲಸ ಮಾಡಿ ದಣಿದು ಮನೆಗೆ ಬಂದಾಗ ಹೆಂಡತಿ, ಮಕ್ಕಳು ನಗದೆ ಮುಖವನ್ನು ಗಂಟಿಕ್ಕಿಕೊಂಡಿದ್ದರೆ ಶೂನ್ಯತೆ ಆವರಿಸುತ್ತದೆ. ನಗದೆ ಇರುವ ಮನುಷ್ಯನನ್ನು ಕಲ್ಪಿಸಿಕೊಂಡಾಗ ನಿಜಕ್ಕೂ ಭಯ ಆವರಿಸುತ್ತದೆ ಎಂದರು.

Advertisement

ನಗು ಮನುಷ್ಯನ ಆಭರಣ. ಕೆಲವೊಮ್ಮೆ ಸರ್ಕಾರಿ ಕಚೇರಿಗೆ ಸಾರ್ವಜನಿಕರು ಯಾವುದಾದರೂ ಕೆಲಸ ಮಾಡಿಸಿಕೊಳ್ಳಲು ಹೋದಾಗ ಅಲ್ಲಿರುವ ಅಧಿ ಕಾರಿ ಗಂಟುಮುಖ ಹಾಕಿಕೊಂಡು ನಗದೇ ಇದ್ದರೆ ಅವನ ಬಳಿ ಹೋಗಲು ಹೆದರುತ್ತಾರೆ. ಆದರೆ ನಗುವ ಅದಿ ಕಾರಿಯನ್ನು ಜನ ಹೆಚ್ಚು ಇಷ್ಟಪಡುತ್ತಾರೆ. ನಗುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.

ಪ್ರೊ| ಉಮೇಶ್‌ ಗೌಡ, ಇತಿಹಾಸ ತಜ್ಞ ಡಾ| ಕೆಳದಿ ಗುಂಡಾ ಜೋಯಿಸ್‌, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.  ರಮೇಶ್ವರಪ್ಪ,
ನಗರಸಭೆ ಸದಸ್ಯ ಆರ್‌. ಶ್ರೀನಿವಾಸ್‌, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಉಮೇಶ್‌ ಹಿರೇನೆಲ್ಲೂರು ಇದ್ದರು. ಜಾನಪದ ಕಲಾತಂಡದ ಸದಸ್ಯರು ಪ್ರಾರ್ಥಿಸಿದರು. ಡಾ| ಕೆಳದಿ ವೆಂಕಟೇಶ್‌ ಜೋಯ್ಸ ಸ್ವಾಗತಿಸಿದರು. ಪರಮೇಶ್ವರ ಕರೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಟಿ. ಸ್ವಾಮಿ ವಂದಿಸಿದರು. ಸುಮನ ಜೋಯ್ಸ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next