ಸಾಗರ: ಕಳೆದ ಎರಡು ಮೂರು ದಿನಗಳಿಂದ ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೆ ಗ್ರಾಮಾಂತರ ಪ್ರದೇಶಗಳ ರಸ್ತೆ, ಗುಡ್ಡ, ಮೋರಿಗಳಲ್ಲಿ ನೀರಿನ ಸೆಲೆ ಉಕ್ಕುತ್ತಿರುವುದರಿಂದ ಮುಂದಿನ ನಾಲ್ಕು ದಿನ ರಿಪೇರಿ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಮಲೆನಾಡಿನ ಪರಿಸ್ಥಿತಿಯಲ್ಲಿ ಈ ಹಂತದಲ್ಲಿ ಪರಿಹಾರ ಕಾಮಗಾರಿ ಕೈಗೊಳ್ಳುವುದರಿಂದ ಮತ್ತಷ್ಟು ಸಮಸ್ಯೆ ಬಿಗಡಾಯಿಸುತ್ತದೆ. ಈ ಅಂಶವನ್ನು ಅರಿತು ಸಾರ್ವಜನಿಕರು ಸಹಕರಿಸಬೇಕು ಎಂದು ಶಾಸಕ ಎಚ್. ಹಾಲಪ್ಪ ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ಮಳೆ ನಿಂತರೂ ಹಾನಿಗೊಳಗಾದ ಕಾಮಗಾರಿಗಳ ಪುನರ್ನಿರ್ಮಾಣ ಕಾರ್ಯ ನಡೆದಿಲ್ಲ ಎಂದು ಅಧಿಕಾರಿಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಆದರೆ ನೀರಿನ ತೇವಾಂಶ ಕಡಿಮೆಯಾಗುವವರೆಗೂ ಕಾಮಗಾರಿ ಪ್ರಾರಂಭ ಮಾಡಬೇಡಿ ಎಂದು ನಾನು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ತೂಕದ ಲಾರಿ, ಜೆಸಿಬಿಗಳಿಂದ 30 ಅಡಿ ದಂಡೆ ಹಾಕಲು 400 ಮೀಟರ್ ರಸ್ತೆ ಹಾಳು ಮಾಡಿಕೊಳ್ಳುವ ಸಾಧ್ಯತೆಯನ್ನು ನಾನು ಪರಿಗಣಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಪ್ರತಿಪಾದಿಸಿದರು.
ಸಾಗರ, ಹೊಸನಗರ, ತೀರ್ಥಹಳ್ಳಿಗಳಲ್ಲಿ ಈ ಸಂದರ್ಭದಲ್ಲಿ ಮರಳು ಸಿಗುವುದಿಲ್ಲ. ಮರಳು ತೆಗೆಯಲು ಈ ವೇಳೆ ಸಾಧ್ಯವೂ ಆಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ 20 ಹಾಕಿ 200ರ ಲೆಕ್ಕ ಬರೆಯುವುದಕ್ಕೆ ನಾನು ಅವಕಾಶ ಕೊಡುವುದಿಲ್ಲ. ಈಗಾಗಲೇ ಈ ಕುರಿತು ಮುಖ್ಯಮಂತ್ರಿಗಳು, ಸರ್ಕಾರದ ಉಸ್ತುವಾರಿ ಕಾರ್ಯದರ್ಶಿ ಮಣಿವಣ್ಣನ್ ಜೊತೆ ಮಾತನಾಡಿದ್ದೇನೆ. ಪರಿಹಾರ ಕೆಲಸಕ್ಕೆ ನೌಕರಶಾಹಿ ಸರ್ವ ಸನ್ನದ್ಧವಾಗಿದೆ. ಇಂತಹ ಸಂದರ್ಭದಲ್ಲಿ ಆಪಾದನೆ ಸರಿಯಲ್ಲ. ಕಳೆದ ಮೂರು ದಿನಗಳಲ್ಲಿ ರಜೆಯಲ್ಲಿಯೂ ಅಧಿಕಾರಿಗಳಿಂದ ಕೆಲಸ ಮಾಡಿಸಲಾಗಿದೆ ಎಂದು ಹಾಲಪ್ಪ ಪ್ರತಿಪಾದಿಸಿದರು.
ಈಗಾಗಲೇ ಶಾಲಾ- ಕಾಲೇಜು ಪ್ರಾರಂಭವಾಗಿದೆ. ಪೋಷಕರು ಶಾಶ್ವತ ಕಾಮಗಾರಿ ಮಾಡುವವರೆಗೂ ಮಕ್ಕಳನ್ನು ಶಾಲೆಗೆ ಕಳಿಸದಿದ್ದರೂ ತಪ್ಪಿಲ್ಲ. ಸರ್ಕಾರದ ಲೆಕ್ಕದಲ್ಲಿ ಪ್ರಗತಿ ಎಂದರೆ ಯೋಜನೆಯ ಹಣ ಖರ್ಚು ಮಾಡುವುದು ಎಂದಿರುತ್ತದೆ. ಆದರೆ ನಾನು ಖರ್ಚಾಗುವ ಹಣದಿಂದ ಆಸ್ತಿ ನಿರ್ಮಾಣವಾಗುವಂತಾಗಬೇಕು ಎಂಬ ನಂಬಿಕೆಯಿಂದ ಕೆಲಸ ಮಾಡುತ್ತೇನೆ. ಈ ವಿಚಾರಗಳೆಲ್ಲ ನಮ್ಮನ್ನು ಟೀಕಿಸುವವರಿಗೂ ಗೊತ್ತು. ಆದರೆ ನಿದ್ದೆ ಬಂದಂತೆ ನಟುಸುವವರನ್ನು ಹೇಗೆ ಎಚ್ಚರಿಸುವುದು ಎಂದು ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಅವರ ಹೆಸರು ಪ್ರಸ್ತಾಪಿಸದೆ ಛೇಡಿಸಿದರು.
ತಮ್ಮೊಂದಿಗೆ ವಿವಿಧ ಅಧಿಕಾರಿಗಳು ಇರಲೇಬೇಕು ಎಂದು ಕಡ್ಡಾಯ ಮಾಡಿ ಆದೇಶ ನೀಡಿದ ತಾಪಂ ಅಧ್ಯಕ್ಷರ ನೊಟೀಸ್‌ನ್ನು ಪ್ರದರ್ಶಿಸಿ, ನಾನೇ ಪ್ರವಾಸ ಸಂದರ್ಭದಲ್ಲಿ ಅಧಿಕಾರಿಗಳನ್ನು ಜೊತೆಯಲ್ಲಿಟ್ಟುಕೊಳ್ಳುವುದಿಲ್ಲ. ಸ್ಥಳೀಯವಾಗಿ ಲಭ್ಯವಿರುವ ಗ್ರಾಪಂ ಪಿಡಿಒ, ಕಾರ್ಯದರ್ಶಿ, ಇಲಾಖೆಯ ಜೂನಿಯರ್ ಸಾಕಾಗುತ್ತಾರೆ. ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸುವವರೇ ತಮ್ಮ ಹಿಂದೆ ಅವರು ಇರಬೇಕು ಎಂದು ಒತ್ತಡ ಹೇರುವುದು ಎಂತಹ ವಾದ ಎಂದು ಪ್ರಶ್ನಿಸಿದರು.
ಶಾಶ್ವತ ನಿಲ್ಲಿಸಲು ಪ್ರಯತ್ನ: ಈಗಾಗಲೇ ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಪ್ರಸ್ತಾಪ ಸರ್ಕಾರದ ಎದುರು ಇಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. ಹಿಂದೆಯೇ ನಾನು ನೀರು ಒಯ್ಯುವ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದೇನೆ. ಇದೊಂದು ಕಾರ್ಯಸಾಧುವಲ್ಲದ ಯೋಜನೆ. ಯೋಜನೆ ಕುರಿತು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದು, ಅವರಿಗೂ ಇದು ಅಸಾಧ್ಯ ಎನ್ನುವುದು ಅರಿವಾಗಿದೆ. ಈ ಹಿನ್ನೆಲೆಯಲ್ಲಿ ಹಿಂದಿನ ಸರ್ಕಾರ ಡಿಪಿಆರ್ ಮಾಡಲು ಸೂಚಿಸಿರುವುದನ್ನು ರದ್ದು ಮಾಡುವ ಜೊತೆಗೆ ಶಾಶ್ವತವಾಗಿ ಈ ಯೋಜನೆಯ ಕುರಿತು ಪ್ರಸ್ತಾಪವಾಗದಂತೆ ನಿಗಾ ವಹಿಸಲಾಗುತ್ತದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಆರ್. ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಡಿ. ಮೇಘರಾಜ್, ಪ್ರಮುಖರಾದ ಚೇತನರಾಜ ಕಣ್ಣೂರು, ಕೆ.ಆರ್. ಗಣೇಶಪ್ರಸಾದ್, ಬಿ.ಟಿ. ರವೀಂದ್ರ, ದೇವೇಂದ್ರಪ್ಪ, ಲೋಕನಾಥ್ ಬಿಳಿಸಿರಿ, ವ.ಶಂ. ರಾಮಚಂದ್ರ ಭಟ್, ಅರುಣ ಕುಗ್ವೆ, ಆನಂದ ಮೇಸ್ತ್ರಿ ಇನ್ನಿತರರು ಇದ್ದರು.