ಸಾಗರ: ತಾಲೂಕಿನ ಕಾಸ್ಪಾಡಿ ಸಮೀಪದ ಅಡ್ಡೇರಿಯ ರೈಲ್ವೆ ನಿಲ್ದಾಣದ ಹತ್ತಿರದ ಅಂಡರ್ ಪಾಸ್ ಮಳೆಗಾಲದಲ್ಲಿ ಸಂಚಾರಿಗಳಿಗೆ ಸಂಕಟಮಯವಾಗುತ್ತದೆ. ಅಂಡರ್ ಪಾಸ್‌ನ ಗೋಡೆಗಳಿಂದ ಜಲಪಾತದ ಮಾದರಿಯಲ್ಲಿ ನೀರು ಉಕ್ಕುತ್ತದೆ. 2-3 ಅಡಿ ನೀರು ನಿಲ್ಲುತ್ತದೆ. ಅಂಡರ್ ಪಾಸಿನಲ್ಲಿ ಶಾಲಾ ಮಕ್ಕಳು ಸಂಚರಿಸುತ್ತಾರೆ. ನಿತ್ಯ ದಿನಪತ್ರಿಕೆಯ ವಾಹನ ಸಂಚರಿಸುತ್ತದೆ. ಶಿಕಾರಿಪುರ, ತ್ಯಾಗರ್ತಿ, ನೀಚಡಿ ಸೇರಿದಂತೆ ಬೇಡರಕೊಪ್ಪ, ಕೆಳಗಿನಮನೆ ಮುಂತಾದ ಊರುಗಳನ್ನು ಸಂಪರ್ಕಿಸುವ ಮಾರ್ಗ ಇದಾಗಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಅಂಡರ್‌ಪಾಸ್‌ನ ನೀರಿನಿಂದಾಗಿ ಸಂಚರಿಸುವ ವಾಹನಗಳು ಸಮಸ್ಯೆ ಎದುರಿಸುತ್ತಿವೆ. ಈ ಸಮಸ್ಯೆ ಕಳೆದ ಎರಡು ವರ್ಷಗಳಿಂದ ಮುಂದುವರಿದಿದ್ದು ಈ ಬಾರಿಯ ಮಳೆಗಾಲದ ಸಂದರ್ಭದಲ್ಲಿಯೂ ಪರಿಸ್ಥಿತಿ ಸುಧಾರಿಸಿಲ್ಲ. ಆದರೆ ರೈಲ್ವೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ಕೇಂದ್ರ ಸರ್ಕಾರ ಮಾತ್ರ ಸಮಸ್ಯೆ ಬಗೆಹರಿದಿದೆ ಎಂದು ಫೈಲ್ಗೆ ಮುಕ್ತಾಯ ಹಾಡಿದೆ!
ಸಾರ್ವಜನಿಕ ದೂರು ವ್ಯವಸ್ಥೆಗೆ ಗ್ರಹಣ
ಕೇಂದ್ರ ಸರ್ಕಾರದ ಇಲಾಖೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಅಧಿಕೃತವಾಗಿ ಪಿಜಿ ಪೋರ್ಟಲ್ ಎಂಬ ಅಂತರ್ಜಾಲ ದೂರು ವ್ಯವಸ್ಥೆಯನ್ನು ನಿರ್ವಹಿಸುತ್ತಿದೆ. ಈ ವೆಬ್‌ನಲ್ಲಿ ತುಂಬಾ ಸರಳ ವಿಧಾನದಲ್ಲಿ ದೇಶದ ನಾಗರಿಕ ದೂರು ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಸಮಸ್ಯೆಯ ಅರಿವು ಕೇಂದ್ರದ ಉನ್ನತ ಅಧಿಕಾರಿಗಳಿಗೆ ನೇರವಾಗಿ ಲಭ್ಯವಾಗುವುದರಿಂದ ಅವರ ಹುಕುಂನಿಂದ ಸಮಸ್ಯೆಯನ್ನು ಕೆಳ ಹಂತದ ಅಧಿಕಾರಿಗಳು ಮುತುವರ್ಜಿಯಿಂದ ನಿರ್ವಹಿಸುತ್ತಿದ್ದುದನ್ನು ಆರಂಭಿಕ ದಿನಗಳಲ್ಲಿ ಕಾಣಬಹುದಿತ್ತು. ಸಂಬಂಧಿಸಿದ ವಿಭಾಗಕ್ಕೆ ದೂರು ಕಳುಹಿಸಿ ಅವರಿಂದ ಕ್ರಮ ತೆಗೆದುಕೊಂಡ ವರದಿ ಬಂದ ಮೇಲೆ ದೂರು ಇತ್ಯರ್ಥ ಆಗುತ್ತಿತ್ತು. ಆ ಕುರಿತ ಮಾಹಿತಿಯೂ ವೆಬ್‌ನಲ್ಲಿ ಕಾಣಿಸಲಾಗುತ್ತಿತ್ತು.
ಬಿಎಸ್‌ಎನ್‌ಎಲ್, ರೈಲ್ವೆ, ವಿಮಾನ, ಗ್ರಾಹಕ ಹಕ್ಕು ಮೊದಲಾದ ಹತ್ತಾರು ವಿಚಾರಗಳಲ್ಲಿ ದೂರು ಸಲ್ಲಿಸಬಹುದಾದ ಅವಕಾಶವನ್ನು ಬಳಸಿಕೊಂಡು ತಾಲೂಕಿನ ಕೆಳಗಿನಮನೆಯ ಉಪನ್ಯಾಸಕ ನವೀನ್ ರೈಲ್ವೆ ಅಂಡರ್‌ಪಾಸ್ ಬಗ್ಗೆ ಜೂನ್ 11ರಂದು ಆನ್‌ಲೈನ್ ದೂರು ದಾಖಲಿಸಿದ್ದಾರೆ. ಅಡ್ಡೇರಿ ಅಂಡರ್‌ಪಾಸ್‌ನ ಸಮಸ್ಯೆಯನ್ನು ಫೋಟೋ ಸಮೇತ ವಿವರಿಸಿದ್ದಾರೆ. ಪಿಜಿ ಪೋರ್ಟಲ್ನಿಂದ 57 ದಿನಗಳಲ್ಲಿಯೇ ಅವರಿಗೆ ಸಮಸ್ಯೆ ಬಗೆಹರಿಸಿ ಉತ್ತರ ಬಂದಿದೆ. ಅದರ ಪ್ರಕಾರ, 2017-18ರಲ್ಲಿ ಸಾಗರದಿಂದ ಶಿವಮೊಗ್ಗ ದಿಕ್ಕಿಗೆ ಹಳಿಗೆ ಸಮಾನಾಂತರವಾಗಿ ನೀರು ಹರಿದುಹೋಗಲು ಡ್ರೈನೇಜ್ ವ್ಯವಸ್ಥೆ ಮಾಡಲಾಗಿದೆ. ಈ ಭಾಗವು ಮಲೆನಾಡಿನ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಪ್ರದೇಶವಾಗಿದ್ದು, ಅಂಡರ್ ಪಾಸ್‌ನಲ್ಲಿ ಒಂದು ಅಡಿ ನೀರು ನಿಲ್ಲುತ್ತದೆ. ತಾತ್ಕಾಲಿಕವಾಗಿ ಪಂಪ್‌ಗ್ಳ ಮೂಲಕ ನೀರನ್ನು ತಗ್ಗುಪ್ರದೇಶಕ್ಕೆ ಹರಿಸಲು ವ್ಯವಸ್ಥೆ ಮಾಡಲಾಗಿದೆ. ಶಾಶ್ವತ ಪರಿಹಾರಕ್ಕಾಗಿ ಆಸುಪಾಸಿನ ಖಾಸಗಿ ಜಾಗದಲ್ಲಿ ಆರ್‌ಸಿಸಿ ಪೈಪ್‌ಗ್ಳನ್ನು ಅಳವಡಿಸಿ ಅಂಡರ್ ಪಾಸ್‌ನ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆಯನ್ನು ಮುಂದೆ ಮಾಡಲಾಗುತ್ತದೆ.
ದೂರು ಸಮಾಪ್ತಿ!: ಬಹುಶಃ ಮೈಸೂರು ರೈಲ್ವೆ ಕಚೇರಿಯಿಂದ ಬಂದ ಉತ್ತರವನ್ನು ನಂಬಿ ಪಿಜಿ ಪೋರ್ಟಲ್ ದೂರು ಸಮಾಪ್ತಿ ಘೋಷಿಸಿದೆ. ವಾಸ್ತವವಾಗಿ, ಹಳಿಯ ಒಂದು ಬದಿಗೆ ಕಳೆದ ವರ್ಷ ನಿರ್ಮಿಸಿದ ಡ್ರೈನೇಜ್ ಇದೆ. ಅದರಲ್ಲಿ ಹರಿಯುವ ನೀರು ಪಕ್ಕದ ಗದ್ದೆಗೆ ಹಾನಿ ಮಾಡುತ್ತಿದೆ. ಉಳಿದಂತೆ ಅಂಡರ್ ಪಾಸ್ ಬಳಿ ಯಾವುದೇ ಪಂಪ್ ವ್ಯವಸ್ಥೆ ಮಾಡಿಲ್ಲ. ಬದಿಯ ಗದ್ದೆ ಶರಾವತಿ ಯೋಜನೆಯ ಮುಳುಗಡೆ ಸಂತ್ರಸ್ತರಿಗೆ ಸೇರಿದೆ. ಒಂದು ಕಡೆ ನಂದಿಹೊಳೆ ಮತ್ತೂಂದು ಕಡೆ ಹೊಳೆಯಂತೆ ಹರಿಯುವ ಅಂಡರ್ ಪಾಸ್ ನೀರು ಈ ಗದ್ದೆಯಲ್ಲಿನ ಕೃಷಿಕಾರ್ಯಕ್ಕೆ ತೊಂದರೆ ಸೃಷ್ಟಿಸಿದೆ. ಸಮಸ್ಯೆಯ ಲವಲೇಷದ ಪರಿಹಾರವನ್ನೂ ಮಾಡದೆ ರೈಲ್ವೆ ಕೇಂದ್ರ ಸರ್ಕಾರಕ್ಕೆ ಕೊಟ್ಟಿರುವ ಉತ್ತರ ಈ ಭಾಗದ ಜನರಲ್ಲಿ ಆಕ್ರೋಶ ಹುಟ್ಟಿಸಿದೆ.
ಪಿಜಿ ಪೋರ್ಟಲ್ ಪ್ರತಿಕ್ರಿಯೆ ಓದಿದ ನವೀನ್ ಮತ್ತೂಮ್ಮೆ ಅಂಡರ್ ಪಾಸ್ ಬಳಿ ಹೋಗಿ ಪರಿಶೀಲನೆ ಮಾಡಿದ್ದಾರೆ. ಊರು ಮನೆಯಲ್ಲಿ ತಮಗೇ ಗೊತ್ತಿಲ್ಲದಂತೆ ಪರಿಹಾರ ಕಾರ್ಯ ಆಗಿಹೋಗಿದೆಯೇ ಎಂದು ಸ್ಥಳಕ್ಕೆ ಹೋದವರಿಗೆ ಸುಳ್ಳು ಮಾಹಿತಿಯ ವಂಚನೆ ಅರಿವಿಗೆ ಬಂದಿದೆ. ಅಂಡರ್‌ಪಾಸ್‌ನ ನಿರ್ಮಾಣದ ಸಂದರ್ಭದಲ್ಲಿಯೇ ನೀರು ಬಾರದಂತೆ ಯೋಜನೆ ರೂಪಿಸಬೇಕಿತ್ತು. ಅಡ್ಡೇರಿ ರೈಲ್ವೆ ನಿಲ್ದಾಣದ ಸಿಬ್ಬಂದಿ ಪ್ರಕಾರ ಸಹ ಪಂಪ್ ಅಳವಡಿಸಿ, ನೀರೆತ್ತುವ ಕಾರ್ಯ ನಡೆದಿಲ್ಲ. ಮೊದಮೊದಲು ಪಿಜಿ ಪೋರ್ಟಲ್ ಪ್ರಭಾವಶಾಲಿ ದೂರು ವ್ಯವಸ್ಥೆಯಾಗಿತ್ತು. ಇದರ ಕಾರಣದಿಂದಲೇ ನಮ್ಮ ವೇದಿಕೆ ಹಲವು ಬಿಎಸ್‌ಎನ್‌ಎಲ್ ಸ್ಥಿರ ದೂರವಾಣಿ ಮರುಸಂಪರ್ಕ ಮಾಡಿಸಿಕೊಡಲು ಸಹಾಯವಾಗಿತ್ತು. ದೂರುಗಳ ಸಂಖ್ಯೆ ಹೆಚ್ಚಿದಂತೆ ವ್ಯವಸ್ಥೆ ಹದಗೆಟ್ಟಿದೆ. ಇಲಾಖೆಗಳ ಮೇಲಿನ ದೂರುಗಳನ್ನು ಕೇವಲ ಸಂಬಂಧಿಸುವ ವಿಭಾಗಕ್ಕೆ ವರ್ಗಾಯಿಸುವ ಪೋಸ್ಟ್ ಮ್ಯಾನ್ ಕೆಲಸವನ್ನೇ ಈ ವ್ಯವಸ್ಥೆ ಮಾಡುತ್ತಿದೆ. ದೂರಿಗೆ ಸಂಬಂಧಿಸಿದ ಫಾಲೋಅಪ್, ಸತ್ಯಾಸತ್ಯತೆ ತನಿಖೆ, ದೂರುದಾರರ ಸಮಾಧಾನ ಪಡೆದು ದೂರು ಇತ್ಯರ್ಥಪಡಿಸುವ ಮಾದರಿ ಇಲ್ಲದ್ದರಿಂದ ಈ ವ್ಯವಸ್ಥೆಯೂ ಜನ ಗಾಳಿಯಲ್ಲಿ ಗುದ್ದಿದಷ್ಟೇ ಪರಿಣಾಮಕಾರಿಯಾಗಿದೆ ಎಂದು ಸಾಗರ ಬಳಕೆದಾರರ ವೇದಿಕೆ ಕಾರ್ಯದರ್ಶಿ ಕೆ.ಎನ್.ವೆಂಕಟಗಿರಿ ನಿರಾಶೆ ವ್ಯಕ್ತಪಡಿಸುತ್ತಾರೆ.