ಸಾಗರ: ಅರಣ್ಯ ಇಲಾಖೆ ದೌರ್ಜನ್ಯ ಖಂಡಿಸಿ ಜನಪರ ಹೋರಾಟ ವೇದಿಕೆ ಮತ್ತಿತರೆ ಸಂಘಟನೆಗಳು ಶುಕ್ರವಾರ ಹಮ್ಮಿಕೊಂಡಿದ್ದ ಬಿಳಿಗಾರಿನಿಂದ ಕಾರ್ಗಲ್‌ವರೆಗಿನ ಪಾದಯಾತ್ರೆ ಮತ್ತು ಅರಣ್ಯ ಇಲಾಖೆ ಎದುರಿನ ಪ್ರತಿಭಟನೆ ಶುಕ್ರವಾರ ತಡರಾತ್ರಿ 12 ಘಂಟೆಗೆ ಜಿಲ್ಲಾಧಿಕಾರಿಗಳ ಭರವಸೆ ಮೇರೆಗೆ ಹಿಂದಕ್ಕೆ ಪಡೆಯಲಾಗಿದೆ.
500 ಕ್ಕೂ ಹೆಚ್ಚು ಪ್ರತಿಭಟನಾಕಾರರು ಕಾರ್ಗಲ್ ಅರಣ್ಯ ಇಲಾಖೆ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ತಮ್ಮ ಅಹವಾಲು ಆಲಿಸಿ, ಪರಿಹಾರ ಕಲ್ಪಿಸಬೇಕು ಎನ್ನುವುದು ಪ್ರತಿಭಟನಾಕಾರರ ಉದ್ದೇಶವಾಗಿತ್ತು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ತಹಶೀಲ್ದಾರರರು ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ಜಿಲ್ಲಾಧಿಕಾರಿಗಳ ಅನಾರೋಗ್ಯ ಕಾರಣದಿಂದ ಶುಕ್ರವಾರ ಸ್ಥಳಕ್ಕೆ ಬರಲು ಸಾಧ್ಯವಾಗುವುದಿಲ್ಲ ಎಂದು ಪ್ರತಿಭಟನಾಕಾರರಿಗೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಭೇಟಿಗೆ ಇನ್ನೊಂದು ದಿನಾಂಕ ನಿಗದಿಪಡಿಸಲು ತಹಶೀಲ್ದಾರ್ ಮೇಲೆ ಒತ್ತಡ ಹಾಕಿದ್ದಾರೆ. ಈ ಸಂದರ್ಭದಲ್ಲಿ ಆ. ೧೨ರಂದು ಉರುಳುಗಲ್ಲು ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಭಾನ್ಕುಳಿ ಗ್ರಾಮ ಪಂಚಾಯ್ತಿಯಲ್ಲಿ ಗ್ರಾಮಸ್ಥರ ಜೊತೆ ಸಭೆ ನಡೆಸಲು ಪ್ರತಿಭಟನಾಕಾರರು ಒತ್ತಾಯಿಸಿದ್ದಕ್ಕೆ ಜಿಲ್ಲಾಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ.
ಇದರ ಜೊತೆಗೆ ಗ್ರಾಮಸ್ಥರ ಮೇಲೆ ದೌರ್ಜನ್ಯ ನಡೆಸಿರುವ ಅರಣ್ಯಾಧಿಕಾರಿ ವಿರುದ್ಧ ಸೂಕ್ತ ತನಿಖೆ ನಡೆಸಿ ಆ. ೧೨ರೊಳಗೆ ವರದಿ ಸಲ್ಲಿಸಿ ಗ್ರಾಮಸ್ಥರಿಗೆ ತಿಳಿಸಬೇಕು. ವರದಿಯಲ್ಲಿ ಕೈಗೊಂಡ ಕ್ರಮದ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುತ್ತದೆ. ಇದಕ್ಕೆ ತಹಶೀಲ್ದಾರ್ ಒಪ್ಪಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ತಮ್ಮ ಹೋರಾಟವನ್ನು ಹಿಂದಕ್ಕೆ ಪಡೆದಿದ್ದಾರೆ. ಒಂದೊಮ್ಮೆ ತಮ್ಮ ಬೇಡಿಕೆ ಈಡೇರಿಸದೆ ಹೋದಲ್ಲಿ ಪುನಃ ಹೋರಾಟಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜನಪರ ಹೋರಾಟ ವೇದಿಕೆ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ, ಪ್ರಮುಖರಾದ ಡಾ. ರಾಜನಂದಿನಿ, ತೀ.ನ.ಶ್ರೀನಿವಾಸ್, ಮಲ್ಲಿಕಾರ್ಜುನ ಹಕ್ರೆ, ಪ್ರಭಾವತಿ ಚಂದ್ರಕಾಂತ್, ಗಣೇಶ್ ತುಮರಿ, ರೈತ ಸಂಘದ ಪ್ರಮುಖರು, ಗ್ರಾಮಸ್ಥರು ಹಾಜರಿದ್ದರು.