ಸಾಗರ: ತಾಲೂಕಿನ ಮಾಲ್ವೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುಂಡಿಗೆಸರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮೂಲಭೂತ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಶಾಲಾಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ತೇಜಸ್ವಿ, ಶಾಲೆಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಅನೇಕ ಬಾರಿ ಗ್ರಾಮ ಪಂಚಾಯ್ತಿಗೆ ಮನವಿ ಸಲ್ಲಿಸಿದ್ದಾಗ್ಯೂ ಯಾವುದೇ ಪ್ರಯೋಜನವಾಗಿಲ್ಲ. ಶಾಲೆಯ ಪಕ್ಕದಲ್ಲಿ ಬಾವಿಯಲ್ಲಿ ಶಾಶ್ವತ ನೀರು ಇರಲಿ ಎನ್ನುವ ಕಾರಣಕ್ಕೆ ಇಂಗುಗುಂಡಿಯನ್ನು ನಿರ್ಮಿಸಲಾಗಿದೆ. ವಿಪರೀತ ಮಳೆ ಹಿನ್ನೆಲೆಯಲ್ಲಿ ಇಂಗುಗುಂಡಿ ತುಂಬಿ ಬಾವಿಗೆ ನೀರು ತುಂಬಿಕೊಂಡಿದೆ. ಜೊತೆಗೆ ನೆರೆಯಿಂದ ಇಂಗುಗುಂಡಿ ಅಕ್ಕಪಕ್ಕ ಕುಸಿದು ಹೋಗಿ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ದೂರಿದರು.
ಮಳೆಗಾಲ ಪ್ರಾರಂಭಕ್ಕೂ ಮೊದಲೇ ಗ್ರಾಮ ಪಂಚಾಯ್ತಿಗೆ ಇಂಗುಗುಂಡಿ ದುಸ್ಥಿತಿಯಲ್ಲಿದ್ದು ರಿಪೇರಿ ಮಾಡಿಕೊಡುವಂತೆ ಮನವಿ ಸಲ್ಲಿಸಲಾಗಿತ್ತು. ಒಂದು ವಾರದಲ್ಲಿ ರಿಪೇರಿ ಮಾಡಿಕೊಡುತ್ತೇವೆ ಎಂದು ಹೇಳಿದ್ದ ಗ್ರಾಮ ಪಂಚಾಯ್ತಿ ಒಂದು ತಿಂಗಳು ಕಳೆದರೂ ರಿಪೇರಿ ಮಾಡಿಲ್ಲ. ಬಾವಿಯಲ್ಲಿ ನೀರು ತುಂಬಿರುವುದು, ಇಂಗುಗುಂಡಿ ಶಿಥಿಲಾವಸ್ಥೆಯಲ್ಲಿರುವುದರಿಂದ ವಿದ್ಯಾರ್ಥಿಗಳು ಆತಂಕದ ನಡುವೆ ಶಾಲೆಗೆ ಬರಬೇಕಾದ ಸ್ಥಿತಿ ಇರುವುದರಿಂದ ಬೀಗ ಜಡಿದು ಪ್ರತಿಭಟನೆ ನಡೆಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ : ಉಡುಪಿ: ಇಂದ್ರಾಳಿ ರೈಲ್ವೇ ಸೇತುವೆ ಬಳಿ ಯುವಕನ ಮೃತದೇಹ ಪತ್ತೆ
ಒಂದು ವಾರದಲ್ಲಿ ಪರಿಹಾರ: ಸ್ಥಳಕ್ಕೆ ಬಂದ ಮಾಲ್ವೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಮಹಾಬಲೇಶ್ವರ್ ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹರ್ಷವರ್ಧನ್, ಮುಂದಿನ ಒಂದು ವಾರದೊಳಗೆ ಇಂಗುಗುಂಡಿ ರಿಪೇರಿ ಮಾಡುವ ಜೊತೆಗೆ ಶಾಲೆಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ ಮೇಲೆ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.
ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ಮಂಜುನಾಥ್, ಶಾಲಾಭಿವೃದ್ಧಿ ಸಮಿತಿಯ ಮಧುಕರ, ಶಿವಕುಮಾರ್, ನವ್ಯ, ಶ್ರೀಕಾಂತ್, ಭಾರತಿ, ಶಿಲ್ಪ, ಸೌಮ್ಯ ಇನ್ನಿತರರು ಹಾಜರಿದ್ದರು.