Advertisement

ಕಳಪೆ ಆಹಾರ ಒದಗಿಸಿದರೆ ಕ್ರಮ

05:11 PM Jun 17, 2019 | Naveen |

ಸಾಗರ: ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿಗಳಿಗೆ ಶುಚಿ ಮತ್ತು ರುಚಿಯಾದ ಆಹಾರ ನೀಡಬೇಕು. ವಿದ್ಯಾರ್ಥಿಗಳ ಆರೋಗ್ಯ ನಿಮ್ಮ ಕೈನಲ್ಲಿರುತ್ತದೆ. ಕಳಪೆ ಆಹಾರ ಸೇವನೆ ಮಾಡುವುದರಿಂದ ವಿದ್ಯಾರ್ಥಿಗಳ ಆರೋಗ್ಯ ಹಾಳಾಗುವುದರ ಜೊತೆಗೆ ಅವರ ವಿದ್ಯಾಭ್ಯಾಸಕ್ಕೆ ಸಹ ತೊಂದರೆಯಾಗುತ್ತದೆ. ಈ ಮುಂಜಾಗ್ರತೆ ನಿಮಗೆ ಇರಲಿ ಎಂದು ಶಾಸಕ ಎಚ್. ಹಾಲಪ್ಪ ಎಚ್ಚರಿಕೆ ನೀಡಿದರು.

Advertisement

ನಗರದ ವರದಹಳ್ಳಿ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್‌ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭಾನುವಾರ ಮಧ್ಯಾಹ್ನ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಊಟ ಮಾಡಿದ ನಂತರ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ದಿಢೀರ್‌ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಸ್ಯೆ ಕುರಿತು ಚರ್ಚಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಕಳಪೆ ಆಹಾರ ನೀಡಿದರೆ ಅಂತಹ ವಿದ್ಯಾರ್ಥಿ ನಿಲಯದ ವಾರ್ಡನ್‌ ಮತ್ತು ಅಡುಗೆಯವರ ಮೇಲೆ ಸೂಕ್ತ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ತಾಲೂಕಿನ ಎಲ್ಲ ವಿದ್ಯಾರ್ಥಿ ನಿಲಯಗಳಿಗೆ ಹಂತಹಂತವಾಗಿ ದಿಢೀರ್‌ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಸಮಾಲೊಚನೆ ನಡೆಸಿ ಹಾಸ್ಟೆಲ್ಗಳ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಪ್ರಯತ್ನ ನಡೆಸಲಾಗುತ್ತದೆ. ಯಾವುದೇ ಕಾರಣಕ್ಕೂ ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿಗಳಿಗೆ ಅರೆಹೊಟ್ಟೆ ಊಟ ಹಾಕಬೇಡಿ. ಇದು ಮಕ್ಕಳ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಡ್ಡಿ ಉಂಟು ಮಾಡುತ್ತದೆ. ಹಾಸ್ಟೆಲ್ಗಳಿಗೆ ಆಹಾರ ಧಾನ್ಯ ಪೂರೈಕೆ ಮಾಡುವ ಗುತ್ತಿಗೆದಾರರು ಕಡಿಮೆ ದರದ ಸಾಮಗ್ರಿಗಳನ್ನು ಪೂರೈಕೆ ಮಾಡುತ್ತಾರೆ ಎನ್ನುವ ದೂರುಗಳಿದೆ. ಇದನ್ನು ಸಹಿಸಿಕೊಳ್ಳುವುದಿಲ್ಲ. ವಿದ್ಯಾರ್ಥಿಗಳ ಆರೋಗ್ಯದ ಜೊತೆ ಚೆಲ್ಲಾಟವಾಡಲು ಬಿಡುವುದಿಲ್ಲ. ಸರ್ಕಾರ ನಿಗಪಡಿಸಿದ ಗುಣಮಟ್ಟದ ಆಹಾರ ಧಾನ್ಯ ಪೂರೈಕೆ ಮಾಡುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಿದರು.

ಕೆಲವು ಹಾಸ್ಟೆಲ್ಗಳಲ್ಲಿ ಸಣ್ಣಪುಟ್ಟ ಸಮಸ್ಯೆ ಇರುವುದು ನನ್ನ ಗಮನಕ್ಕೆ ಬಂದಿದೆ. ಸದ್ಯದಲ್ಲಿಯೇ ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ವಾರ್ಡನ್‌ ಮತ್ತು ಅಡುಗೆಯವರ ಸಭೆ ಕರೆದು ಸೂಕ್ತ ಸೂಚನೆ ನೀಡಲಾಗುತ್ತದೆ. ಅನೇಕ ಹಾಸ್ಟೆಲ್ಗಳಲ್ಲಿ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆ ಇದೆ. ಇದನ್ನು ಹಂತಹಂತವಾಗಿ ಸರಿಪಡಿಸಲಾಗುತ್ತದೆ. ಜೊತೆಗೆ ಹಾಸ್ಟೆಲ್ ಅಕ್ಕಪಕ್ಕದಲ್ಲಿ ಖಾಲಿ ಜಾಗ ಇದ್ದರೆ ಅಲ್ಲಿ ಕ್ರೀಡಾಂಗಣ ನಿರ್ಮಿಸಿ, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಬಗ್ಗೆ ವಿಧಾನಸಭೆ ಅಧಿವೇಶನ ಸಂದರ್ಭದಲ್ಲಿ ಸರ್ಕಾರದ ಗಮನ ಸೆಳೆಯಲಾಗುತ್ತದೆ ಎಂದು ತಿಳಿಸಿದರು. ಶೀಘ್ರದಲ್ಲಿಯೇ ಎಲ್ಲ ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿ ಪ್ರತಿನಿಗಳ ಸಮಿತಿ ರಚನೆ ಮಾಡಲಾಗುತ್ತದೆ. ಎಲ್ಲ ವಿದ್ಯಾರ್ಥಿಗಳು ಅಗತ್ಯ ಇದ್ದ ಸಂದರ್ಭದಲ್ಲಿ ಹಾಸ್ಟೆಲ್ನಲ್ಲಿ ಆಗುತ್ತಿರುವ ಸಮಸ್ಯೆ ಕುರಿತು ನನ್ನ ಆಪ್ತ ಸಹಾಯಕನಿಗೆ ದೂರು ನೀಡಬಹುದು. ಅತಿ ಅಗತ್ಯ ಎಂದ ಸಂದರ್ಭದಲ್ಲಿ ನನಗೆ ಕರೆ ಮಾಡಿ ನಿಮ್ಮ ಸಮಸ್ಯೆ ಹೇಳಿಕೊಳ್ಳಬಹುದು. ದೂರು ನೀಡಿದ ವಿದ್ಯಾರ್ಥಿಗಳ ಹೆಸರನ್ನು ಗೌಪ್ಯವಾಗಿ ಇರಿಸಲಾಗುತ್ತದೆ. ಒಟ್ಟಾರೆ ತಾಲೂಕಿನಲ್ಲಿರುವ ಹಾಸ್ಟೆಲ್ ಅವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಸರಿಪಡಿಸಲಾಗುತ್ತದೆ ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಲಕ್ಷ್ಮೀನಾರಾಯಣ, ಪ್ರಮುಖರಾದ ಗಿರೀಶ್‌ ಗೌಡ, ಹರೀಶ್‌ ಮೂಡಳ್ಳಿ ಇನ್ನಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next