ಸಾಗರ: ನಗರದ ಚಿಲ್ಲರೆ ಮಳಿಗೆಯಿಂದ 81 ಸಾವಿರ ರೂ. ಮೌಲ್ಯದ ವಿವಿಧ ಮಾದರಿಯ ಅಡಕೆ, ಕಾಳುಮೆಣಸು ಮತ್ತು ಗೇರು ಬೀಜಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಮಾಲು ಸಹಿತ ಬಂಧಿಸಿರುವ ಪೊಲೀಸರು ತನಿಖೆ ನಡೆಸಿದಾಗ ಆತ ಬಳಸಿದ ಕಾರು ಕೂಡ ಕಳ್ಳತನದ ಮಾಲಾಗಿರುವ ಇನ್ನೊಂದು ಪ್ರಕರಣವೂ ಬಯಲಿಗೆ ಬಂದ ಘಟನೆ ಸಾಗರದಲ್ಲಿ ನಡೆದಿದೆ.
ಕಳೆದ ಫೆಬ್ರವರಿಯಲ್ಲಿ ಪಟ್ಟಣದಲ್ಲಿ ಸೈಯದ್ ಷಫಾಜ್‌ರವರ ಅರೆಕಾನೆಟ್ ಎನ್ನುವ ಚಿಲ್ಲರೆ ಮಳಿಗೆಯಲ್ಲಿ ವಿವಿಧ ರೀತಿಯ ಅಡಕೆ, ಕಾಳುಮೆಣಸು, ಗೇರು ಬೀಜಗಳ ಕಳ್ಳತನವಾಗಿರುವ ಬಗ್ಗೆ ದೂರು ದಾಖಲಾಗಿತ್ತು.
ನಂತರದಲ್ಲಿ ಮಾ. 25ರಂದು ರಾಘವೇಂದ್ರ ಎನ್ನುವವರು ತಮ್ಮ ಹೆಸರಿನಲ್ಲಿದ್ದ ಓಮಿನಿ ವಾಹನವನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಪೇಟೆ ಠಾಣೆಯಲ್ಲಿ ದೂರು ನೀಡಿದ್ದರು.
ತನಿಖೆ ನಡೆಸಿದ್ದ ಪೊಲೀಸರು ಆರೋಪಿಯಾಗಿರುವ ಶಿವಪ್ಪ ನಾಯಕ ನಗರ ಒಂದನೇ ಕ್ರಾಸ್ ನಿವಾಸಿಯಾದ ಮಹಮದ್ ಜಾಕೀರ್‌ನನ್ನು ಬಂಧಿಸಿದ್ದಾರೆ.
81 ಸಾವಿರಕ್ಕೂ ಹೆಚ್ಚು ಮೌಲ್ಯದ ವಿವಿಧ ಮಾದರಿಯ ಅಡಕೆ, ಕಾಳುಮೆಣಸು, ಗೇರು ಬೀಜಗಳನ್ನು ವಶಪಡಿಸಿಕೊಂಡವರು ಕೃತ್ಯಕ್ಕೆ ಬಳಸಿದ ಕಾರಿನ ದಾಖಲೆಗಳನ್ನು ಪರಿಶೀಲಿಸಿದಾಗ 2 ಲಕ್ಷ ಬೆಲೆಯ ಓಮಿನಿ ಕಾರು ಕೂಡ ಕಳ್ಳತನದಿಂದ ಪಡೆದಿರುವುದು ಪತ್ತೆಯಾಗಿದೆ. ಮಾಲನ್ನು ಕಾರು ಸಹಿತ ವಶಪಡಿಸಿಕೊಂಡು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.