Advertisement

Sagara: ಪೌಷ್ಟಿಕ ಆಹಾರ ಪೂರೈಕೆ ವ್ಯತ್ಯಯ… ಜೂ.19ರಿಂದ ಅನಿರ್ದಿಷ್ಟಾವಧಿ ಧರಣಿ

04:37 PM Jun 14, 2024 | sudhir |

ಸಾಗರ: ಅರಣ್ಯಮೂಲ ಬುಡಕಟ್ಟು ಜನರಿಗೆ ಪೌಷ್ಟಿಕ ಆಹಾರ ಪೂರೈಕೆ ಮಾಡದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಜೂ. 19ರಿಂದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಅರಣ್ಯಮೂಲ ಬುಡಕಟ್ಟು ಒಕ್ಕೂಟದ ಜಿಲ್ಲಾ ಸಂಚಾಲಕ ರಾಮಣ್ಣ ಹಸಲರು ತಿಳಿಸಿದ್ದಾರೆ.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 27ರಂದು ಪೌಷ್ಟಿಕ ಆಹಾರ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಅಂತಿಮ ಗಡುವು ನೀಡಲಾಗಿತ್ತು. ಸರ್ಕಾರ ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಕರೆ ನೀಡಲಾಗುತ್ತಿದೆ ಎಂದರು.

ರಾಜ್ಯ ಸರ್ಕಾರವು 2019ರಲ್ಲಿ ಅರಣ್ಯಮೂಲ ಬುಡಕಟ್ಟು ಜನರಿಗೆ ಪೌಷ್ಟಿಕ ಆಹಾರವನ್ನು ವರ್ಷದಲ್ಲಿ ಆರು ತಿಂಗಳು ನೀಡುವ ಯೋಜನೆ ಅನುಷ್ಟಾನಕ್ಕೆ ತಂದಿದೆ. ಕೊರಗ, ಕಾಡುಕುರುಬ, ಜೇನುಕುರುಬ, ಸೋಲಿಗ, ಎರವ, ಗೊಂಡ, ಮಲೈಕುಡಿ, ಗೌಡಲು ಮತ್ತು ಹಸಲರು ಜನಾಂಗದವರು ಯೋಜನೆ ಫಲಾನುಭವಿಗಳಾಗಿದ್ದಾರೆ. ಮಳೆಗಾಲದಲ್ಲಿ ಕೂಲಿ ಕೆಲಸ ಸಿಗದ ಹಿನ್ನೆಲೆಯಲ್ಲಿ ಸರ್ಕಾರದ ಯೋಜನೆ ನಮಗೆ ಹೆಚ್ಚು ಉಪಯುಕ್ತವಾಗಿತ್ತು. ಕಳೆದ ಹತ್ತು ವರ್ಷಗಳಿಂದ ಯೋಜನೆ ಜಾರಿಯಲ್ಲಿತ್ತು. ಆದರೆ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಸಲರಿಗೆ ಯೋಜನೆ ತಲುಪಿರಲಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಯೋಜನೆಯನ್ನು ಹಸಲರಿಗೂ ವಿಸ್ತರಿಸಲಾಗಿತ್ತು ಎಂದು ಹೇಳಿದರು.

ಜಿಲ್ಲೆಯ 7 ಸಾವಿರ ಕುಟುಂಬಗಳಿಗೆ ಯೋಜನೆ ಮಂಜೂರಾಗಿದ್ದು, ಸಾಗರ, ಹೊಸನಗರ, ತೀರ್ಥಹಳ್ಳಿ, ಸೊರಬ, ಶಿಕಾರಿಪುರ ತಾಲೂಕುಗಳಲ್ಲಿರುವ ಹಸಲರು, ಗೊಂಡರು ಯೋಜನೆಯ ಫಲಾನುಭವಿಗಳಾಗಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಬಂದಾಗ ವರ್ಷಪೂರ್ತಿ ಪೌಷ್ಟಿಕ ಆಹಾರ ನೀಡಲು ಆದೇಶ ಮಾಡಿದ್ದಾರೆ. ಆದರೆ ಮಾರ್ಚ್‌ನಿಂದ ಜೂನ್‌ವರೆಗೆ ಆಹಾರ ಪೂರೈಕೆ ಮಾಡಿಲ್ಲ. ಜೊತೆಗೆ ಅಂಗನವಾಡಿ ಕೇಂದ್ರಗಳಲ್ಲಿಯೆ ಪೌಷ್ಟಿಕ ಆಹಾರ ವಿತರಣೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಮಾತನಾಡಿ, 2019ರಲ್ಲಿ ಜಿಲ್ಲೆಯ ಹಸಲರು, ಗೊಂಡರಿಗೆ ಪೌಷ್ಟಿಕ ಆಹಾರ ನೀಡುವ ಯೋಜನೆ ಜಾರಿಗೆ ಬಂದಿತು.

Advertisement

ಗುಡ್ಡಗಾಡಿನಲ್ಲಿದ್ದು ಅಪೌಷ್ಟಿಕತೆಯಿಂದ ಬಳಲಬಾರದು ಎನ್ನುವ ಉದ್ದೇಶದಿಂದ ಯೋಜನೆ ಜಾರಿಗೆ ತಂದಿದ್ದು, ರಾಜ್ಯದ 10 ಬುಡಕಟ್ಟು ಜನರಿಗೆ 20 ವರ್ಷದಿಂದ ಯೋಜನೆ ಚಾಲ್ತಿಯಲ್ಲಿದೆ. ಜಿಲ್ಲೆಯ ಬುಡಕಟ್ಟು ಜನರಿಗೆ ಪೌಷ್ಟಿಕ ಆಹಾರ ನೀಡಬೇಕು ಎಂದು 2007 ರಲ್ಲಿ ರಾಮಣ್ಣ ಹಸಲರು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರು. ೨೦೧೯ರಿಂದ ಯೋಜನೆ ಜಿಲ್ಲೆಯ ಎರಡು ಸಮುದಾಯಕ್ಕೆ ತಲುಪುತ್ತಿದೆ. ಮೊದಲು ಆರು ತಿಂಗಳು ಇತ್ತು. ಸಿದ್ದರಾಮಯ್ಯ ಸರ್ಕಾರ ಒಂದು ವರ್ಷ ಪೌಷ್ಟಿಕ ಆಹಾರ ಪೂರೈಸುವ ಭರವಸೆ ನೀಡಿತ್ತು. ಆದರೆ ಕಳೆದ ಕೆಲವು ತಿಂಗಳಿನಿಂದ ಪೌಷ್ಟಿಕ ಆಹಾರ ಕೊಡುವುದನ್ನೆ ನಿಲ್ಲಿಸಿ ಅರಣ್ಯಮೂಲ ಬುಡಕಟ್ಟು ಜನರಿಗೆ ಅನ್ಯಾಯ ಮಾಡಿದೆ. ತಕ್ಷಣ ಸರ್ಕಾರ ಜಿಲ್ಲೆಯ ಅರಣ್ಯಮೂಲ ಬುಡಕಟ್ಟು ಕುಟುಂಬಗಳಿಗೆ ತಕ್ಷಣ ಪೌಷ್ಟಿಕ ಆಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಲಕ್ಷ್ಮಮ್ಮ ಹಿರೇಮನೆ, ನರಸಿಂಹ ಹೊಸನಗರ, ಅಣ್ಣಪ್ಪ, ಹರೀಶ ಹಾಜರಿದ್ದರು.

ಇದನ್ನೂ ಓದಿ: Laptop ಕಳವು ಮಾಡಿ 2 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸಿಮ್ ಖರೀದಿಸಿ ಸಿಕ್ಕಿಬಿದ್ದ

Advertisement

Udayavani is now on Telegram. Click here to join our channel and stay updated with the latest news.

Next