ಸಾಗರ: ವಿಶೇಷವಾಗಿ ಮಂಗಳವಾರ ಪೂರ್ಣ ದಿನ ದಾಖಲೆ ನೀಡುವ ಕಾರ‍್ಯಕ್ಕಾಗಿ ಸಾಗರ ನಗರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳು ಸಮಯ ಮೀಸಲಿಟ್ಟಿದ್ದಾರೆ.
ನಗರಸಭೆಯಿಂದ ಇದುವರೆಗೆ 1100 ಇ ಸ್ವತ್ತು ಅಧಿಕೃತಗೊಂಡು ನೀಡಲಾಗಿದೆ. ದಾಖಲೆ ಸಿದ್ದ ಮಾಡಿಕೊಂಡು, ನಾಲ್ಕಾರು ಬಾರಿ ಪೋನ್ ಮಾಡಿದರೂ ಅರ್ಜಿದಾರರು ಬಾರದಿರುವುದು ನಡೆಯುತ್ತಿದೆ ಎಂದು ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಹಾಗೂ ಉಪಾಧ್ಯಕ್ಷ ವಿ.ಮಹೇಶ್ ಅಳಲು ತೊಡಿಕೊಂಡಿದ್ದಾರೆ.
ನಗರಸಭೆಯಲ್ಲಿ ಸುಶಾಸನ ಆರಂಭಿಸಿ ಎರಡು ತಿಂಗಳಾಗಿದೆ. ಅದಕ್ಕೆ ಇನ್ನಷ್ಟು ವೇಗ ನೀಡುವುದಕ್ಕೆ ಜನ ಸಹಕರಿಸಬೇಕಿದೆ. ಸುಶಾಸನದ ಅಡಿಯಲ್ಲಿ ನಗರಸಭೆ ವ್ಯವಸ್ಥಿತವಾಗಿ ದಾಖಲೆಗಳನ್ನು ಅಧಿಕೃತಗೊಳಿಸುತ್ತಿರುವುದಲ್ಲದೆ ನಗರದ ಜನತೆಗೆ ಅನುಕೂಲಕರವಾಗುವ ರೀತಿಯಲ್ಲಿ ಮನೆ, ವ್ಯಾಪಾರ ಮತ್ತು ಜನನ-ಮರಣ ದಾಖಲೆಗಳನ್ನು ಏಕಗವಾಕ್ಷಿಯಲ್ಲಿ ಕಲ್ಪಿಸಿಕೊಡುವ ಕಾರ‍್ಯವನ್ನು ಕಳೆದ ಎರಡು ತಿಂಗಳಿಂದಲೂ ಮಾಡುತ್ತಿದೆ. ಆರಂಭದಲ್ಲಿ ಜನ ಇದರ ಉಪಯೋಗವನ್ನು ಚೆನ್ನಾಗಿ ಪಡೆದುಕೊಂಡರೂ ಇದೀಗ ದಾಖಲೆ ಸಿದ್ದವಾಗಿರುವ ಮಾಹಿತಿ ನೀಡಿದರೂ ಬರುವುದಕ್ಕೆ ವಿಳಂಬ ಮಾಡುತ್ತಿದ್ದಾರೆ. ಇದು ಅಚ್ಚರಿ ಮೂಡಿಸಿದೆ ಎಂದು ಗಾಂಧಿ ಮೈದಾನದ ಸಭಾಂಗಣದಲ್ಲಿ ಮಂಗಳವಾರ ಸುಶಾಸನ ಯೋಜನೆ ಅನ್ವಯ ಏಕಗಾವಕ್ಷಿಯಲ್ಲಿ ಇ ಸ್ವತ್ತು ದಾಖಲೆ ಪತ್ರ ಮಾಲೀಕರಿಗೆ ನೀಡಿದ ಮಧುರಾ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನೂ ಕೂಡ ಇದರ ವೇಗ ಹೆಚ್ಚಿಸಬೇಕು. ನಗರ ವ್ಯಾಪ್ತಿಯಲ್ಲಿರುವ ಎಲ್ಲರಿಗೂ ಇದರ ಅನುಕೂಲವಾಗಬೇಕು ಎನ್ನುವುದು ನಮ್ಮ ಉದ್ದೇಶ. ಆದರೆ ಕೆಲವರು ಮೂಲ ದಾಖಲೆಯ ಮಾಹಿತಿ ಕೊಡುವುದಕ್ಕೂ ಬಾರದಿರುವುದು, ಇನ್ನು ಮಾಹಿತಿ ನೀಡಿದವರು, ತಮ್ಮ ಅಧಿಕೃತ ದಾಖಲೆ ಪಡೆದು ಹೋಗುವುದಕ್ಕೆ ಬಾರದಿರುವುದು ಈ ಕಾರ‍್ಯ ವಿಳಂಬವಾಗುವುದಕ್ಕೆ ಕಾರಣವಾಗುತ್ತಿದೆ. ಇನ್ನಾದರೂ ಜನತೆ ಸ್ಪಂದಿಸಬೇಕಿದೆ ಎಂದರು.
ಉಪಾಧ್ಯಕ್ಷ ವಿ. ಮಹೇಶ್ ಮಾತನಾಡಿ, ಸಿಬ್ಬಂದಿ ಕಾದು ಸುಮ್ಮನೆ ಕುಳಿತುಕೊಳ್ಳುವುದು ಕ್ರಮವಲ್ಲ. ಹಾಗಾಗಿ ಜನತೆ ಇದನ್ನು ಗಮನಿಸಬೇಕು ಎಂದರು.
ಆಯುಕ್ತ ರಾಜು ಡಿ. ಬಣಕರ್, ಸದಸ್ಯರಾದ ಅರವಿಂದ ರಾಯ್ಕರ್, ಮೈತ್ರಿ ಪಾಟೀಲ್, ಕುಸುಮಾ ಸುಬ್ಬಣ್ಣ, ಲಿಂಗರಾಜು, ನಾದಿರಾ, ನಗರ ಸಭೆಯ ಎಂಜಿನಿಯರ್ ಎಚ್.ಕೆ. ನಾಗಪ್ಪ, ಮದನ್, ಸಂತೋಷ್ ಕುಮಾರ್, ರಚನಾ ಮತ್ತಿತರರು ಇದ್ದರು.