Advertisement

ಇಂದಿನಿಂದ ಸಾಗರ ಮಾರಿಕಾಂಬಾ ಜಾತ್ರೆ

01:24 PM Feb 07, 2023 | Pranav MS |

ಸಾಗರ: ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ನಗರದ ಮಾರಿಕಾಂಬಾ ಜಾತ್ರೆ ಹತ್ತು ಹಲವು ಧಾರ್ಮಿಕ ಆಚರಣೆಗಳನ್ನು ಒಂದಿನಿತೂ ವ್ಯತ್ಯಯಗಳಿಲ್ಲದೆ ನಡೆಸುವ ವ್ಯವಸ್ಥೆ. ಇದರಲ್ಲಿ ಭಕ್ತರು ಇನ್ನಿಲ್ಲದ ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಇಂದೂ ಜನರಲ್ಲಿರುವ ಧಾರ್ಮಿಕ ನಂಬಿಕೆಗಳಿಗೆ ಮಂಗಳವಾರದಿಂದ ಆರಂಭವಾಗಲಿರುವ ಮಾರಿಕಾಂಬಾ ಜಾತ್ರೆ ಮತ್ತೂಮ್ಮೆ ಸಾಕ್ಷಿಯಾಗಲಿದೆ. ಒಂಬತ್ತು ದಿನಗಳ ಜಾತ್ರಾ ಅವ ಧಿಯಲ್ಲಿ ಮೊದಲ ದಿನ ತವರುಮನೆಯಲ್ಲಿ ಹಾಗೂ ಉಳಿದ ಎಂಟು ದಿನ ಗಂಡನ ಮನೆಯಲ್ಲಿ ದೇವಿಯ ದರ್ಶನ ಪಡೆಯಲು ಭಕ್ತರ ಸಾಲು ಸಾಲು ಪ್ರತಿ ದಿನ ನಿರ್ಮಾಣವಾಗುವುದನ್ನು ಊಹಿಸಬಹುದು. ನಗರದ ಹೃದಯ ಭಾಗದಲ್ಲಿನ ಮಾರಿಕಾಂಬಾ ದೇವಾಲಯಗಳೆರಡರ ಆಜುಬಾಜಲ್ಲಿ ಹೆಚ್ಚು ಸ್ಥಳಾವಕಾಶವಿಲ್ಲ.

Advertisement

ಈ ಇಕ್ಕಟ್ಟಿನಲ್ಲಿಯೇ ಸಾವಿರಾರು ಜನ ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ವಿಧಿ ಗಳು ನಡೆಯುವುದು ಕೂಡ ಸಂಪ್ರದಾಯವೇ ಆಗಿದೆ. ಬೇರೆಲ್ಲ ಸಂದರ್ಭಗಳಲ್ಲಿ ಜನ ಈ ಕಿಷ್ಕಿಂಧೆಗೆ ಕಿರಿಕಿರಿಗೊಳ್ಳಬಹುದು, ಆಜುಬಾಜಿ ಅಂಗಡಿಯವರು ವ್ಯಾಪಾರಕ್ಕೆ ಕಸಿವಿಸಿಯಾಗುವ,ಧಕ್ಕೆಯಾಗುವ ಕುರಿತಾಗಿ ಅಸಮಾಧಾನಗೊಳ್ಳಬಹುದು. ಆದರೆ ಮಾರಿಕಾಂಬಾ ಜಾತ್ರೆಯ ಸಂದರ್ಭದಲ್ಲಿ ಮಾತ್ರ ಅವರೆಲ್ಲರೂ ಇವನ್ನೆಲ್ಲ ಮರೆತು ಖುಷಿಯಿಂದ ಪಾಲ್ಗೊಳ್ಳುವಂತಾಗುವುದು ವಿಶೇಷವೇ ಸರಿ.

ಗಾಂಧಿ  ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ:

ಪ್ರತಿ ಬಾರಿ ಮಾರಿಕಾಂಬಾ ಗಂಡನ ಮನೆ ದೇವಾಲಯದ ಬಲ ಪಕ್ಕದ ರಸ್ತೆಯಲ್ಲಿಯೇ ಸಾಂಸ್ಕೃತಿಕ ಕಾರ್ಯಕ್ರಮಗಳುನಡೆಯುತ್ತಿದ್ದವು. ಕಳೆದ ಬಾರಿ ಇದನ್ನು ಅಶೋಕ ರಸ್ತೆಯ ಖಾಲಿ ಜಾಗಕ್ಕೆ ಸ್ಥಳಾಂತರಿಸಲಾಗಿತ್ತು. ಇದು ಒಂದು ರೀತಿಯಲ್ಲಿ ಜಾತ್ರೆಯಿಂದ ಹೊರಗೆ ಎಂಬ ಭಾವ ಮೂಡಲು ಕಾರಣವಾಗಿತ್ತು. ಶಾಶ್ವತವಾದ ಛಾವಣಿ ನಿರ್ಮಿಸಿಕೊಂಡಿರುವ ಹಿನ್ನೆಲೆಯಲ್ಲಿ ಗಾಂಧಿ  ಮೈದಾನದಲ್ಲಿ ಈ ವರ್ಷ ಅಮ್ಯೂಸ್‌ಮೆಂಟ್‌ ಪಾರ್ಕ್‌ ರೂಪಿಸಲು ಅವಕಾಶವಿಲ್ಲ. ಇದರಿಂದ ಇನ್ನೊಂದು ಅನುಕೂಲ ಏರ್ಪಟ್ಟಿದೆ. ಈ ಬಾರಿಯ ಮಾರಿಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ನಡೆಯಲಿವೆ. ಜಾತ್ರೆಯ ಗೌಜಿನ ಜೊತೆಗೆ ಸಾಂಸ್ಕೃತಿಕ ಕಲರವವೂ ನಡೆಯುವುದರಿಂದ ಹಾಗೂ ಇದರ ಪಕ್ಕದಲ್ಲಿಯೇ ಆಹಾರ ಮೇಳವನ್ನೂ ಹಮ್ಮಿಕೊಂಡಿರುವುದರಿಂದ ಜಾತ್ರೆಗೆ ಹೊಸದಾದ ಮುಖ ಬಂದಂತಾಗಲಿದೆ.

ಜಾತ್ರೆಯ ಸಂದರ್ಭದಲ್ಲಿ ಮಾತ್ರ ಗಾಂಧಿ ಮೈದಾನದಸ್ವರೂಪವನ್ನೇ ಬದಲಿಸುತ್ತಿದ್ದ ಅಮ್ಯೂಸ್‌ಮೆಂಟ್‌ ಪಾರ್ಕ್‌ ಈ ಬಾರಿ ನೆಹರೂ ಮೈದಾನಕ್ಕೆಪಲ್ಲಟಗೊಂಡಿದೆ. ಸ್ಥಳಾವಕಾಶದ ದೃಷ್ಟಿಯಿಂದ ಬೃಹತ್ತಾದ ನೆಹರೂ ಮೈದಾನ ಹೆಚ್ಚು ಹೆಚ್ಚು ಮನರಂಜನಾ ಪರಿಕರಗಳನ್ನು ಅಳವಡಿಸುವುದಕ್ಕೆ ತೆರೆದುಕೊಂಡಂತಾಗಿದೆ. ಈ ಮೊದಲು ನೆಹರೂ ಮೈದಾನವೆಂಬುದು ಜಾತ್ರಾ ಸಂದರ್ಭದ ಯಕ್ಷಗಾನ ಪ್ರದರ್ಶನಗಳ ಜಾಗವಾಗಿತ್ತು. ಕಳೆದ ಬಾರಿ ವಾಹನ ನಿಲುಗಡೆಗೆ ಇಲ್ಲಿ ಅವಕಾಶ ಕಲ್ಪಿಸಲಾಗಿತ್ತು.

Advertisement

ಎಲ್ಲ ಧರ್ಮೀಯರಿಗೂ ಅವಕಾಶ

ಜಾತ್ರೆಗಳ ಸಂದರ್ಭದಲ್ಲಿ ನಿರ್ದಿಷ್ಟ ಕೋಮಿನ ಜನರ ಅಂಗಡಿ- ಮುಂಗಟ್ಟುಗಳಿಗೆ ಅವಕಾಶ ಕೊಡಬಾರದು ಎಂಬ ಕೂಗು ಕೇಳುತ್ತದೆ. ಮಾರಿಕಾಂಬಾ ಜಾತ್ರೆಯ ಸಂದರ್ಭದಲ್ಲೂ ಅಂತದೊಂದು ಮಾತು ಕೇಳಿಬಂದಿತ್ತು. ಆದರೆ ಮಾರಿಕಾಂಬೆಯನ್ನು ನಗರದ ಗ್ರಾಮ ದೇವತೆಯಾಗಿ ಪರಿಗಣಿಸುವುದರಿಂದ ಇಲ್ಲಿ ಎಲ್ಲ ಧರ್ಮೀಯರೂ ಪಾಲ್ಗೊಳ್ಳುವುದರಿಂದ ಅಂತಹ ಯಾವುದೇ ನಿರ್ಬಂಧಗಳು ಸಮ್ಮತವಲ್ಲ ಎಂದು ಶಾಸಕ ಎಚ್‌. ಹಾಲಪ್ಪ ಹರತಾಳು ಈ ಮುನ್ನವೇ ಹೇಳಿದ್ದರು.

ಅಮ್ಯೂಸ್‌ಮೆಂಟ್‌ ಪಾರ್ಕ್‌ 50 ರೂ. ಷರತ್ತು ಕೆಲಸ ಮಾಡೀತೇ?
ಸಮಿತಿ ಕೂಡ ಆ ಮಾತು ಹೇಳಿದೆ. ಹಾಗಾಗಿ ಸಾಗರದ ಮಾರಿಜಾತ್ರೆ ಸರ್ವಜನರ ಜಾತ್ರೆಯಾಗಿ ದಾಖಲಾಗಲಿದೆ.ಶಾಸಕ ಹಾಲಪ್ಪ ಅವರ ಒತ್ತಡದಿಂದಾಗಿ ಜಾತ್ರಾಅಮ್ಯೂಸ್‌ಮೆಂಟ್‌ ಪಾರ್ಕ್‌ನ ಎಲ್ಲ ಆಟಗಳ ಪ್ರವೇಶ ಶುಲ್ಕ ಗರಿಷ್ಠ 50 ರೂ. ಆಗಿರಲಿದೆ. 50 ರೂ.ಗೆ ಹೆಚ್ಚುವರಿಯಾಗಿ ಜಿಎಸ್‌ಟಿ ಸೇರುತ್ತದೆ, ಅದರಿಂದ ಶುಲ್ಕ 70ರಿಂದ 80 ರೂ. ಆಗಬಹುದು ಎಂಬುದನ್ನು ನಿರಾಕರಿಸಿರುವ ಮಾರಿಕಾಂಬಾ ಸಮಿತಿ ಪ್ರಧಾನ ಕಾರ್ಯದರ್ಶಿ ಗಿರಿಭಟ್‌, 50 ರೂ.ಗಳ ಒಳಗೇ ಯಾವುದೇ ರೀತಿಯ ತೆರಿಗೆಯಿದ್ದರೂ ಸೇರಿರುತ್ತದೆ. ಯಾವುದೇ ರೀತಿಯಲ್ಲಿ 50 ರೂ.ಗಿಂತ ಹೆಚ್ಚು ಪಡೆಯುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜಾತ್ರೆಗೆ ಸಹಕಾರ ನೀಡುವಂತೆ ಮನವಿ
ನಗರದ ಮಾರಿಕಾಂಬಾ ಜಾತ್ರೆ ಫೆ. 7ರಿಂದ 15ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಮನರಂಜನಾ ಚಟುವಟಿಕೆಯನ್ನು ಒಳಗೊಂಡಂತೆ ನಡೆಯಲಿದ್ದು ಭಕ್ತಾದಿಗಳು ಜಾತ್ರೆ ಯಶಸ್ಸಿಗೆ ಸಹಕರಿಸುವಂತೆ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್‌.ನಾಗೇಂದ್ರ ತಿಳಿಸಿದರು. ಸೋಮವಾರ ದೇವಾಲಯದ ಪ್ರಾಂಗಣದಲ್ಲಿ ಮಾಹಿತಿ ನೀಡಿ ಮಾತನಾಡಿದ ಅವರು, 6ರಂದು ರಾತ್ರಿ ಚಿಕ್ಕಮ್ಮನನ್ನು ಹೊರಡಿಸುವ ಶಾಸ್ತ್ರ ನಡೆಯಲಿದೆ. 7ರ ಬೆಳಗ್ಗೆ 2ಕ್ಕೆ ಮಹಾಗಣಪತಿ ದೇವಸ್ಥಾನದಲ್ಲಿ ಮಾಂಗಲ್ಯ ಪೂಜೆ ನಡೆಯಲಿದೆ. ಬೆಳಗ್ಗೆ 5ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ಅಮ್ಮನವರಿಗೆ ದೃಷ್ಟಿ ಇಡುವುದು, ಮಾಂಗಲ್ಯಧಾರಣೆ, ನಂತರ ಅಮ್ಮನವರ ದರ್ಶನ ಇರುತ್ತದೆ ಎಂದರು.

ರಾತ್ರಿ 10ಕ್ಕೆ ಪೋತರಾಜನಿಂದ ಚಾಟಿ ಸೇವೆ ಇರುತ್ತದೆ. ನಂತರ ಹೆಣ್ಣು ಒಪ್ಪಿಸುವ ಶಾಸ್ತ್ರ ನಡೆಯಲಿದ್ದು, ರಾತ್ರಿ ದೇವಿಯ ದಂಡಿನ ಮೆರವಣಿಗೆ ವಿವಿಧ ಕಲಾತಂಡಗಳ ಪಾಲ್ಗೊಳ್ಳುವಿಕೆ ಮೂಲಕ ನಡೆಯಲಿದೆ. 8ರ ಬೆಳಗ್ಗೆ ಮಾರಿಕಾಂಬಾ ದೇವಿಯ ಗಂಡನ ಮನೆಯಲ್ಲಿ ಅಮ್ಮನವರ ಪ್ರತಿಷ್ಠಾಪನೆ ನೆರವೇರಲಿದ್ದು, ಎಂಟು ದಿನಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಇರುತ್ತದೆ ಎಂದರು. ಸಂಚಾಲಕರಾದ ರವಿನಾಯ್ಡು ಮಾತನಾಡಿ, 8ರಂದು ಸಂಜೆ 7ಕ್ಕೆ ಗಾಂಧಿ  ಮೈದಾನದಲ್ಲಿರುವ ಕಲಾವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಸಕ ಎಚ್‌.ಹಾಲಪ್ಪ ಹರತಾಳು, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಟಿ.ಎಸ್‌.ನಾಗಾಭರಣ ಪಾಲ್ಗೊಳ್ಳಲಿದ್ದಾರೆ.

ಸಮಿತಿ ಅಧ್ಯಕ್ಷ ಕೆ.ಎನ್‌.ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ 5ರಿಂದ ಮಾರಿಕಾಂಬಾ ವೇದಿಕೆಯಲ್ಲಿ ಸ್ಥಳೀಯ ಮತ್ತು ರಾಜ್ಯಮಟ್ಟದ ವಿವಿಧ ತಂಡಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, 15ರಂದು ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ನಡೆಯಲಿದೆ ಎಂದರು. ಫೆ. 7ರಂದು ಸಂಜೆ 5ಕ್ಕೆ ನೆಹರೂ ಮೈದಾನದಲ್ಲಿ ವಸ್ತುಪ್ರದರ್ಶನ ಉದ್ಘಾಟನೆಯಾಗಲಿದೆ. ಫೆ. 10ರಂದು ಮಧ್ಯಾಹ್ನ 3ಕ್ಕೆ ಸಂತ ಜೋಸೆಫರ ಶಾಲೆ ಎದುರಿನ ಮೈದಾನದಲ್ಲಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದ್ದು, ಶಾಸಕ ಎಚ್‌.ಹಾಲಪ್ಪ ಹರತಾಳು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು. ಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ಬಿ. ಗಿರಿಧರ ರಾವ್‌, ಉಪಾಧ್ಯಕ್ಷ ಸುಂದರ ಸಿಂಗ್‌, ಸಹ ಕಾರ್ಯದರ್ಶಿ ಎಸ್‌.ವಿ. ಕೃಷ್ಣಮೂರ್ತಿ, ಖಜಾಂಚಿ ನಾಗೇಂದ್ರ ಕುಮಟಾ, ಲೋಕೇಶಕುಮಾರ್‌, ಪುರುಷೋತ್ತಮ್‌, ಉಮೇಶ್‌ ಚೌಟಗಿ, ತಾರಾಮೂರ್ತಿ, ಕೆ.ಸಿ.ನವೀನ್‌, ಬಾಲಕೃಷ್ಣ ಗುಳೇದ್‌ ಇನ್ನಿತರರು ಇದ್ದರು.

ಜಾತ್ರೆಗೆ ಬಿಗಿ ಬಂದೋಬಸ್ತ್‌

ಸಾಗರದ ಮಾರಿಕಾಂಬಾ ಜಾತ್ರೆಯ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ಸಂಪೂರ್ಣ ಬಂದೋಬಸ್ತ್ಗೆ ಪರಿಪಕ್ವವಾದ ಕಾರ್ಯಯೋಜನೆಯನ್ನು ಎಎಸ್‌ಪಿ ರೋಹನ್‌ ಜಗದೀಶ್‌ ನೇತೃತ್ವದಲ್ಲಿ ರೂಪಿಸಿದೆ. ಈಗಾಗಲೇ 500 ಜನ ಪೊಲೀಸ್‌ ಸಿಬ್ಬಂದಿಯನ್ನು ಇದಕ್ಕಾಗಿ ನಿಯೋಜಿಸಿದ್ದು, ಸೋಮವಾರ ಸಂಜೆಯಿಂದಲೇ ಇವರು ಕಾರ್ಯೋನ್ಮುಖರಾಗಲಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿ ಕಾರಿ ಜಿ.ಕೆ. ಮಿಥುನ್‌ಕುಮಾರ್‌ ತಿಳಿಸಿದರು. ಮಾರಿಕಾಂಬಾ ದೇವಸ್ಥಾನ ಪ್ರದೇಶಕ್ಕೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದ ನಂತರದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿ, 500 ಜನ ಪೊಲೀಸ್‌ ಸಿಬ್ಬಂದಿ ಜೊತೆ ಅ ಧಿಕಾರಿಗಳ ವರ್ಗ ಮೇಲ್ವಿಚಾರಣೆ ನಡೆಸಲಿದೆ. ಹೆಚ್ಚುವರಿಯಾಗಿ ಪೊಲೀಸ್‌ ಬಲ ಬೇಕೆನಿಸಿದರೂ ನಿಯೋಜನೆ ಮಾಡಲು ನಾವು ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದರು.

ಜನದಟ್ಟಣೆಯಾಗಿ ಸಮಸ್ಯೆಯಾಗಬಹುದು ಎಂಬುದರ ಬಗ್ಗೆ ನಮಗೆ ಅಂದಾಜಿದೆ. ಈ ಸಮಯದಲ್ಲಿ ವ್ಯತ್ಯಯಗಳನ್ನು ತಪ್ಪಿಸಲು 56 ಕಡೆಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ದೇವಾಲಯದ ಒಳಗಡೆಯಲ್ಲಿಯೂ ದೇವಸ್ಥಾನದ ವ್ಯವಸ್ಥಾಪಕ ಸಮಿತಿ ಕ್ಯಾಮೆರಾಗಳನ್ನು ಹಾಕಿದೆ. ನಮ್ಮ ಇಲಾಖೆ ಕೂಡ ಜಾತ್ರೆಯ ಸಂದರ್ಭದಲ್ಲಿ ಆಮೂಲಾಗ್ರವಾದ ವಿಡಿಯೋ ರೆಕಾರ್ಡಿಂಗ್‌ ನಡೆಸುವುದಕ್ಕೆ
ಯೋಜನೆಗಳನ್ನು ಹಾಕಿಕೊಂಡಿದೆ ಎಂದರು. ಈ ಬಾರಿ ವಾಹನಗಳ ಪಾರ್ಕಿಂಗ್‌ಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಸೊರಬ, ಜೋಗ ಹಾಗೂ ಶಿವಮೊಗ್ಗ ಭಾಗದಿಂದ ಬರುವ ವಾಹನಗಳಿಗೆ ಆಯಾ ಭಾಗದಲ್ಲಿಯೇ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸಲಾಗಿದೆ. ಈ ಸ್ಥಳಗಳು ಜಾತ್ರೆಯ ಸ್ಥಳದಿಂದ 400ರಿಂದ 500 ಮೀಟರ್‌ ದೂರದಲ್ಲಿರುತ್ತವೆ.

ಈ ಸ್ಥಳಗಳಿಗೆ ಪ್ರತಿ 10 ನಿಮಿಷಕ್ಕೊಮ್ಮೆಯಂತೆ ಫೀಡರ್‌ ಬಸ್‌ಗಳ ಸಂಚಾರ ಇರುತ್ತದೆ. ಜಾತ್ರಾ ಸಮಿತಿ ಹಾಗೂ ಕೆಎಸ್‌ಆರ್‌ಟಿಸಿ ಸೇರಿದಂತೆ ಇಲಾಖೆ ಮಾತುಕತೆ ನಡೆಸಿದ್ದು ಈ ಬಸ್‌ ವ್ಯವಸ್ಥೆ ಉಚಿತವಾಗಿರುತ್ತದೆಯೋ, ಕನಿಷ್ಠ ಟಿಕೆಟ್‌ ನದಾಗಿರುತ್ತದೆಯೋ ಎಂಬುದು ನಿಗದಿಗೊಳ್ಳಲಿದೆ. ಒಂದೊಮ್ಮೆ ಹೆಚ್ಚುವರಿ ಬಸ್‌ ಬೇಕಾಗುತ್ತದೆ ಎಂದರೆಅದನ್ನು ಒದಗಿಸಲು ಕೂಡ ಮಾತುಕತೆ ನಡೆದಿದೆ ಎಂದರು.

„ಮಾ.ವೆಂ.ಸ.ಪ್ರಸಾದ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next