ಸಾಗರ: ಪ್ರೀತಿಸಿದ ಯುವಕ ಮದುವೆಯಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಯುವತಿಯೋರ್ವಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮುತ್ತಲ್‌ಬೈಲಿನಲ್ಲಿ ನಡೆದಿದೆ.
ಮುತ್ತಲ್‌ಬೈಲಿನ ಅಮೃತಾ(21) ಆತ್ಮಹತ್ಯೆ ಮಾಡಿಕೊಂಡ ಯುವತಿ. ನಗರದ ಇಂದಿರಾಗಾಂಧಿ ಕಾಲೇಜಿನಲ್ಲಿ ಓದುತ್ತಿರುವಾಗಲೇ ಎರಡು ವರ್ಷಗಳ ಹಿಂದೆ ತೆಪ್ಪಗೋಡಿನ ಯುವಕ ವಿಜಯಕುಮಾರ್ ಜೊತೆ ಪ್ರೀತಿಸಲಾರಂಭಿಸಿದ್ದಾಳೆ. ಯುವತಿಯು ಪ್ರೀತಿಸಿದ ಯುವಕನೊಂದಿಗೆ ಮದುವೆ ಮಾಡಿಕೊಳ್ಳಲು ಹೇಳಿದಾಗ ಯುವಕ ನಿರಾಕರಿಸಿದ್ದಾನೆ.
ಈ ಹಿನ್ನೆಲೆಯಲ್ಲಿ ಯುವತಿ ತನ್ನ ಮನೆಯಲ್ಲಿ ಜೂನ್ 27 ರಂದು ವಿಷ ಸೇವಿಸಿದ್ದಾಳೆ. ತಕ್ಷಣ ಯುವತಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾಳೆ. ಈ ಕುರಿತು ಯುವತಿಯ ತಂದೆ ನಿಂಗಪ್ಪ ಯುವಕನ ವಿರುದ್ಧ ಸಾಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.