Advertisement

ನೀರು- ಪ್ರವಾಸಿಗರಿಲ್ಲದೆ ಜೋಗ ಭಣಭಣ!

07:40 PM Mar 14, 2020 | Naveen |

ಸಾಗರ: ಜಲವೈಭವ ಮಾಯವಾಗಿರುವ ಜೋಗ ಜಲಪಾತ ವೀಕ್ಷಣೆಗೆ ಪ್ರವಾಸಿಗರು ಬರಬಹುದಾದ ಅಲ್ಪಸ್ವಲ್ಪ ನಿರೀಕ್ಷೆಯನ್ನೂ ಕೊರೊನಾ ವೈರಸ್‌ ಹೊಸಕಿ ಹಾಕಿದೆ. ಸರ್ವಋತು ಜಲಪಾತದ ಭರವಸೆಯ ಜೋಗ ಪರಿಸರ ಈಗ ಸ್ಮಶಾನ ಮೌನ ಅನುಭವಿಸುತ್ತಿದೆ. ಈಗಾಗಲೇ ವರದಪುರದಲ್ಲಿ ಪ್ರವಾಸಿಗರಿಗೆ ಹಲವಾರು ನಿರ್ಬಂಧ ಹಾಕಿರುವ ನಿಟ್ಟಿನಲ್ಲಿ ಪ್ರವಾಸಿಗರ ಸಂಖ್ಯೆಯ ಮೇಲೆ ಈಗಾಗಲೇ ಪರಿಣಾಮ ಬೀರಲಾರಂಭಿಸಿದೆ.

Advertisement

ಕಳೆದ ವರ್ಷ ಈ ಭಾಗದ ಕಾರ್ಗಲ್‌, ಅರಲಗೋಡು ಮೊದಲಾದೆಡೆ ವ್ಯಾಪಕವಾಗಿ ಮಂಗನ ಕಾಯಿಲೆ ಹರಡಿದ ಹಿನ್ನೆಲೆಯಲ್ಲಿ ಜೋಗ ಜಲಪಾತದ ಕಡೆಗಿನ ಪ್ರವಾಸಕ್ಕೆ ಸರ್ಕಾರವೇ ಪ್ರವಾಸಿಗರನ್ನು ನಿರುತ್ತೇಜಕಗೊಳಿಸಿತ್ತು. ಈ ವರ್ಷ ಕೆಎಫ್‌ಡಿ ನಿಯಂತ್ರಣದಲ್ಲಿದ್ದು, ಪ್ರವಾಸೋದ್ಯಮ ಚಿಗುರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಅವತರಿಸಿರುವ ಕೊರೊನಾ ಪರಿಸ್ಥಿತಿಯನ್ನು ಬಿಗಡಾಯಿಸಿದೆ.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಕಾಲದಲ್ಲಿ, ಜೋಗ ಜಲಪಾತದ ನೀರನ್ನು ಪುನರ್ಬಳಕೆ ಮಾಡುವ ಯೋಜನೆಯಲ್ಲಿ ಪಾಲ್ಗೊಳ್ಳಲು ಕಂಪನಿಗಳು ಉತ್ಸುಕತೆ ತೋರಿಸಿವೆ. ಸುಮಾರು 300ರಿಂದ 400 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿಯಾಗುತ್ತದೆ. ಲಿಂಗನಮಕ್ಕಿ ಪ್ರದೇಶದ 60 ಎಕರೆ ಜಾಗದಲ್ಲಿ ಥೀಂ ಪಾರ್ಕ್‌ನ್ನು ಖಾಸಗಿಯವರ ಸಹಾಯದಿಂದ ನಿರ್ಮಾಣ ಮಾಡುವುದು, 100 ಕೋಟಿ ವೆಚ್ಚದಲ್ಲಿ ಅಕ್ವಾ ಪಾರ್ಕ್‌ ನಿರ್ಮಿಸುವುದು, ಜಲಪಾತದ ಸಾಗರ ಭಾಗದಿಂದ ಸಿದ್ದಾಪುರ ಭಾಗಕ್ಕೆ 4 ಕೋಟಿ ರೂ. ಜಿಪ್‌ ಲೈನ್‌ ಯೋಜನೆಯನ್ನು 500 ಮೀಟರ್‌ ವ್ಯಾಪ್ತಿಯಲ್ಲಿ ಅಳವಡಿಸುವುದು ಹಾಗೂ ಡಿಜಿಟಲ್‌ ಮಾದರಿಯ ಪ್ರವಾಸಿ ಮಾಹಿತಿ ಕೇಂದ್ರ ಆರಂಭಿಸಲಾಗುತ್ತದೆ ಎಂದು ಪುಂಖಾನುಪುಂಖವಾಗಿ ತಿಳಿಸಲಾಗಿತ್ತು.

ಜೋಗದಲ್ಲಿ ಕೇಬಲ್‌ ಕಾರ್‌ ಅಳವಡಿಸುವ ಯೋಜನೆ, ಫುಡ್‌ಕೋರ್ಟ್‌, ಗೆಸ್ಟ್‌ಹೌಸ್‌, ಮೂಲ ಸೌಕರ್ಯ, ಕೃತಕ ಬೀಚ್‌ ಮೊದಲಾದ ಸೌಲಭ್ಯಗಳನ್ನು ಅಳವಡಿಸಲು 12 ಕೋಟಿ ರೂ. ವೆಚ್ಚದ ಯೋಜನೆ, ಜೋಗ ಸುತ್ತಮುತ್ತಲಿನ 20 ಪ್ರವಾಸಿ ಸ್ಥಳಗಳ ಅಭಿವೃದ್ಧಿಗೆ ಸುಂಕದಮನೆಯಲ್ಲಿ 14.75 ಕೋಟಿ ರೂ. ವೆಚ್ಚದಲ್ಲಿ ಯೋಜನೆ, ಜೋಗದಲ್ಲಿನ ತ್ರೀ ಸ್ಟಾರ್‌ ಹೊಟೇಲ್‌ ಪುನರಾರಂಭ ಮೊದಲಾದ ತೀರ್ಮಾನಗಳು ಈ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದ ಅಂದಿನ ಎಸಿ ನಿತೇಶ್‌ ಪಾಟೀಲ್‌ರ ವರ್ಗಾವಣೆಯಾದ ನಂತರ ಚಿಗುರಿಯೇ ಇಲ್ಲ.

ಈ ನಡುವೆ ಶಾಸಕ ಹಾಲಪ್ಪ ಜೋಗ ಅಭಿವೃದ್ಧಿಗೆ ಜೋಗ ಅಭಿವೃದ್ಧಿ ಪ್ರಾಧಿಕಾರದ ಬದಲು ಮಂಡಳಿಯನ್ನು ರೂಪಿಸಬೇಕು ಎಂದು ಸರ್ಕಾರದ ಮಟ್ಟದಲ್ಲಿ ತೀವ್ರ ಒತ್ತಡ ಹೇರಿದ್ದರು. ಈ ಬಾರಿಯ ಬಜೆಟ್‌ನಲ್ಲಿ ಆ ಬಗ್ಗೆ ಸ್ಪಷ್ಟ ನೀತಿ ಹೊರಬರಲಿದೆ ಎಂಬ ಆಶಯವೂ ವ್ಯಕ್ತವಾಗಿತ್ತು. ಆದರೆ ಅಂತಿಮವಾಗಿ ಜೋಗದ ಅಭಿವೃದ್ಧಿಗೆ ಪ್ರಾಧಾನ್ಯತೆ ನೀಡಿ 500 ಕೋಟಿ ರೂ. ಗಳ ಅನುದಾನ ಘೋಷಣೆಯಾಗಿರುವುದೊಂದೇ ಸಾಧನೆಯಾಗಿದೆ. ಈ ಹಣ ಎಷ್ಟರಮಟ್ಟಗೆ ಜೋಗದ ಅಭಿವೃದ್ಧಿಗೇ ಬೀಳಲಿದೆ ಎಂಬುದನ್ನು ಕಾಲವೇ ಹೇಳಬೇಕಿದೆ.

Advertisement

ಜೋಗ- ಕಾರ್ಗಲ್‌ನ ಸ್ಥಳೀಯ ವ್ಯಾಪಾರಿಗಳು ಜೋಗ ಜಲಪಾತವನ್ನು ನಂಬಿಕೊಂಡಿದ್ದರೂ ಅವರ ವರ್ಷದ ಜೀವನ ಇಲ್ಲಿನ ಅಂಗಡಿ ಮುಂಗಟ್ಟುಗಳಿಂದ ಆಗದೆ ವರ್ಷದ ಒಂಬತ್ತು ತಿಂಗಳು ಬೇರೆ ಬೇರೆ ಉದ್ಯೋಗ ಮಾಡಬೇಕಾದ ಸ್ಥಿತಿಯಿದೆ. ರೈತರಂತೆ ನಾವೂ ಕೂಡ ಮಳೆಯನ್ನೇ ನಂಬಿಕೊಳ್ಳುವಂತೆ ಬಾಳುವಂತಾಗಿದೆ ಎಂಬುದು ಅವರ ಅಳಲಾದರೆ, ಉದ್ಯಮ, ಕಟ್ಟಡಗಳ ಅಭಿವೃದ್ಧಿಯನ್ನು ಆಧರಿಸಿ ಪ್ರಗತಿಯನ್ನು ಲೆಕ್ಕ ಹಾಕಲಾಗುತ್ತಿದೆ. ಹೊಸನಗರ, ತೀರ್ಥಹಳ್ಳಿಯಲ್ಲಿನ ಬರ ನೇರವಾಗಿ ಜೋಗ ಜಲಪಾತದ ಇಂದಿನ ಭಣಭಣ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂಬ ಪರಿಸರವಾದಿಗಳ ನಡುವೆ ಜೋಗ ಜಲಪಾತದ ತೆಳ್ಳಗಿನ ಕವಲುಗಳು ಪ್ರವಾಸೋದ್ಯಮದ ಸ್ಥಿತಿಯನ್ನು ಬಿಂಬಿಸುವಂತಿದೆ.

Advertisement

Udayavani is now on Telegram. Click here to join our channel and stay updated with the latest news.

Next