ಸಾಗರ: ಅರ್ಜಿ, ದೂರವಾಣಿ ಕರೆ, ಮುಖತಃ ಭೇಟಿಗಳಿಂದ ಆಗದ ಸಾರ್ವಜನಿಕ ಕೆಲಸವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಸರ್ಕಾರಿ ಅಧಿಕಾರಿಗಳು ಎಚ್ಚೆತ್ತು ಸರಿಪಡಿಸಿದ ಘಟನೆ ನಗರದಲ್ಲಿ ನಡೆದಿದೆ.
ಮುರಿದು ಬೀಳುವ ಸ್ಥಿತಿಯಲ್ಲಿದ್ದ ವಿದ್ಯುತ್ ಕಂಬದ ಕುರಿತ ಫೋಟೋ ಮಾಹಿತಿ ಬಂದ 24 ಘಂಟೆಯಲ್ಲಿ ಕಂಬವನ್ನು ಬದಲಿಸಿ ಹೊಸ ಕಂಬದ ಅಳವಡಿಕೆಯಾಗಿದೆ.
ಸಾಮಾಜಿಕ ಜಾಲತಾಣ ಫೇಸ್‌ಬುಕ್ ನಲ್ಲಿ ನಗರದ ಗಣೇಶ್ ಗಟ್ಟಿ ಎಂಬುವವರು ಗಾಢ ಬಿರುಕು ಕಾಣಿಸಿದ ವಿದ್ಯುತ್ ಕಂಬದ ಫೋಟೋವನ್ನು ಅಪ್‌ಲೋಡ್ ಮಾಡಿ, ನಗರದ ಅಗ್ರಹಾರದ ಆಟೋ ನಿಲ್ದಾಣದ ಪಕ್ಕದಲ್ಲಿರುವ ವಿದ್ಯುತ್ ಕಂಬಕ್ಕೆ ಅಪರಿಚಿತ ವಾಹನ ಡಿಕ್ಕಿಯಾಗಿ ಕಂಬ ಬಿರುಕು ಬಿಟ್ಟಿರುವ ಘಟನೆ ನಡೆದು ತಿಂಗಳು ಕಳೆಯುತ್ತ ಬಂದಿದೆ. ವಿದ್ಯುತ್ ಕಂಬದ ಮೂಲಕ ಅಧಿಕ ಶಕ್ತಿಯ ವಿದ್ಯುತ್ ಸರಬರಾಜು ಆಗುತ್ತಿದೆ. ಜನನಿಬಿಡಿ ಜಾಗ ಹಾಗೂ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಇರುವ ಕಂಬ ಯಾವ ಸಂದರ್ಭದಲ್ಲಿ ಸಂಪೂರ್ಣವಾಗಿ ಕುಸಿದರೂ ಅಪಾಯ ಉಂಟಾಗಬಹುದು ಎಂದು ಎಚ್ಚರಿಸಿದ್ದರು.
ಸ್ವಾರಸ್ಯವೆಂದರೆ, ಮೆಸ್ಕಾಂ ಅಧಿಕಾರಿಗಳು ನಾಗರಿಕರ ಫೇಸ್‌ಬುಕ್ ಅಹವಾಲನ್ನು ತಕ್ಷಣ ಗಮನಿಸಿದ್ದಾರೆ. ಕೂಡಲೇ ಕಾರ್ಯಚರಣೆಗಿಳಿದ ಅವರು ಅಗ್ರಹಾರ ಸರ್ಕಲ್‌ನ ಕಂಬವನ್ನು ಬದಲಿಸಿ ಹೊಸ ಕಂಬ ಅಳವಡಿಸಿದ್ದಾರೆ. ಅಷ್ಟೇ ಅಲ್ಲ, ಫೇಸ್‌ಬುಕ್, ವಾಟ್ಸ್‌ಆ್ಯಪ್‌ನಲ್ಲಿ ಮೆಸ್ಕಾಂನ ಎಇಇ ವಿನಯಕುಮಾರ್ ಎಂಬುವವರು ಪ್ರತಿಕ್ರಿಯಿಸಿ, ಈಗ ಬಿರುಕು ಕಾಣಿಸಿದ ವಿದ್ಯುತ್ ಕಂಬವನ್ನು ಬದಲಿಸಲಾಗಿದೆ ಎಂಬ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.
ಮುದ್ರಣ ಮಾಧ್ಯಮದ ಜೊತೆಗೆ ಸಾರ್ವಜನಿಕ ಸಮಸ್ಯೆಗಳ ಇತ್ಯರ್ಥಕ್ಕೆ ಹೊಸ ಹೊಸ ತಂತ್ರಜ್ಞಾನಗಳು ನೆರವು ಸಿಗುತ್ತಿರುವುದು ಅನುಕೂಲಕರ ಎಂದು ವಿನೋಬಾ ನಗರದ ಯೋಗೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.