Advertisement

Sagara: ಕರ್ತವ್ಯ ಮಾಡಲು ಇಷ್ಟ ಇಲ್ಲ ಎಂದರೆ ಬೇರೆಡೆ ಹೋಗಿ; ಶಾಸಕ ಗೋಪಾಲಕೃಷ್ಣ ಬೇಳೂರು

04:13 PM Oct 29, 2024 | Poornashri K |

ಸಾಗರ: ವೈದ್ಯರು ಸಮಯಪಾಲನೆ ಕಡ್ಡಾಯವಾಗಿ ಮಾಡಬೇಕು. ಎಷ್ಟೋ ಹೊತ್ತಿಗೆ ಕರ್ತವ್ಯಕ್ಕೆ ಬರುವುದು, ಹೋಗುವುದು ಮಾಡಲು ಸರ್ಕಾರಿ ಆಸ್ಪತ್ರೆ ಛತ್ರವಲ್ಲ. ಸಮಯಪಾಲನೆ, ಕರ್ತವ್ಯ ನಿರ್ಲಕ್ಷ್ಯ ಮಾಡುವ ವೈದ್ಯರ ವರ್ತನೆ ಸಹಿಸುವುದಿಲ್ಲ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

Advertisement

ಇಲ್ಲಿನ ಉಪವಿಭಾಗೀಯ ಆಸ್ಪತ್ರೆಯಲ್ಲಿ ಮಂಗಳವಾರ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಉತ್ತಮ ಹೆಸರು ಇದೆ. ಅದನ್ನು ಹಾಳು ಮಾಡಬೇಡಿ. ಎಲ್ಲಾ ವೈದ್ಯ ಸಿಬ್ಬಂದಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ಒಂದಿಬ್ಬರು ಮಾಡುವ ತಪ್ಪಿನಿಂದ ಇಡೀ ವ್ಯವಸ್ಥೆ ಮೇಲೆ ಕೆಟ್ಟ ಹೆಸರು ಬರುವಂತೆ ಮಾಡಬೇಡಿ ಎಂದರು.

ವೈದ್ಯರಾದ ಡಾ. ನಾಗೇಂದ್ರಪ್ಪ, ಡಾ. ಸುರೇಶ್ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ನಿಮ್ಮಿಬ್ಬರ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿದೆ. ನಿಮಗೆ ಕರ್ತವ್ಯ ಮಾಡಲು ಇಷ್ಟ ಇಲ್ಲ ಎಂದರೆ ಬೇರೆ ಕಡೆ ವರ್ಗಾವಣೆ ಮಾಡಿಸಿಕೊಂಡು ಹೋಗಿ. ನಾಗೇಂದ್ರಪ್ಪ ಹಿಂದೆ ಉತ್ತಮವಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಯಾಕೋ ಅವರ ವರ್ತನೆ ಬದಲಾಗಿದ್ದು ಮಹಿಳಾ ರೋಗಿಯ ಮೇಲೆ ಹಲ್ಲೆ ಮಾಡಿರುವ ದೂರು ಇದೆ. ವೈದ್ಯರನ್ನು ಆನಂದಪುರಕ್ಕೆ ವರ್ಗಾವಣೆ ಮಾಡಿ, ಅಲ್ಲಿನ ಮಹಿಳಾ ವೈದ್ಯೆಯನ್ನು ಇಲ್ಲಿಗೆ ವರ್ಗಾಯಿಸುವಂತೆ ಸೂಚನೆ ನೀಡಿದರು.

ಆಸ್ಪತ್ರೆಯ ಮೂವರು ನರ್ಸ್ ಮತ್ತು ಮೂರ‍್ನಾಲ್ಕು ಗ್ರೂಪ್ ಡಿ ನೌಕರರ ಬಗ್ಗೆ ದೂರುಗಳಿವೆ. ಅವರು ತಮ್ಮ ವರ್ತನೆ ಸರಿಮಾಡಿಕೊಳ್ಳದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಜರುಗಿಸಲಾಗುತ್ತದೆ. ಆಸ್ಪತ್ರೆಯಲ್ಲಿ ಕಣ್ಣಿನ ವೈದ್ಯರು, ಫಿಜಿಶಿಯನ್ ಕೊರತೆ ಇದ್ದು, ತಕ್ಷಣ ಭರ್ತಿ ಮಾಡುವುದು, ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಬಗ್ಗೆ ಆರೋಗ್ಯ ಸಚಿವರಲ್ಲಿ ಮನವಿ ಮಾಡಲಾಗಿದೆ. ಸರ್ಕಾರದಿಂದ ನೇಮಕವಾಗಿರುವ ಆರೋಗ್ಯ ರಕ್ಷಾ ಸಮಿತಿಯನ್ನು ವೈದ್ಯಸಿಬ್ಬಂದಿಗಳು ಗೌರವದಿಂದ ನೋಡಬೇಕು. ಆಸ್ಪತ್ರೆ ಅಭಿವೃದ್ಧಿಗೆ ಅವರ ಸಲಹೆಯನ್ನು ಪಡೆಯಬೇಕು. ನಮ್ಮ ತಾಲೂಕು ಅಲ್ಲದೆ ಹೊರ ಜಿಲ್ಲೆ, ತಾಲೂಕಿನಿಂದ ಪ್ರತಿದಿನ ಸಾವಿರಕ್ಕೂ ಹೆಚ್ಚು ರೋಗಿಗಳು ಬರುತ್ತಿದ್ದು ಅವರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಟರಾಜ್, ಸಿವಿಲ್ ಸರ್ಜನ್ ಡಾ. ಕೆ.ಪರಪ್ಪ, ತಹಶೀಲ್ದಾರ್ ಚಂದ್ರಶೇಖರ ನಾಯ್ಕ್, ಡಿವೈಎಸ್‌ಪಿ ಗೋಪಾಲಕೃಷ್ಣ ನಾಯ್ಕ್, ಪೌರಾಯುಕ್ತ ಎಚ್.ಕೆ. ನಾಗಪ್ಪ, ಮಂಜುಳಾ ಭಜಂತ್ರಿ, ನಗರಸಭೆ ಸದಸ್ಯರಾದ ಮಧುಮಾಲತಿ, ಗಣಪತಿ ಮಂಡಗಳಲೆ, ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next