Advertisement

ಸಾಗರ: ಹೆದ್ದಾರಿ ಅಗಲೀಕರಣ; 50 ಕ್ಕೂ ಹೆಚ್ಚು ಮರಗಳ ಸ್ಥಳಾಂತರ ಸಾಧ್ಯ

05:06 PM Jan 27, 2022 | Team Udayavani |

ಸಾಗರ: ರಾಷ್ಟ್ರೀಯ ಹೆದ್ದಾರಿ ಎನ್‌ಎಚ್ 206 ಅಗಲೀಕರಣ ಸಂದರ್ಭದಲ್ಲಿ ಮರಗಳನ್ನು ಕಡಿತಲೆ ಮಾಡದೆ ಅವುಗಳನ್ನು ಸ್ಥಳಾಂತರಗೊಳಿಸುವ ನಿಟ್ಟಿನಲ್ಲಿ ಶಾಸಕರ ನಿರ್ದೇಶನದಂತೆ ಪರಿಶೀಲನೆ ನಡೆಸಲಾಗಿದೆ. ಸುಮಾರು 300 ಮರಗಳನ್ನು ಪರಿಶೀಲನೆ ನಡೆಸಿದ್ದು, ಈ ಪೈಕಿ 50ಕ್ಕೂ ಹೆಚ್ಚು ಮರಗಳನ್ನು ಸ್ಥಳಾಂತರಿಸಲು ಸಾಧ್ಯವಿದೆ ಎಂದು ಬೆಂಗಳೂರಿನ ಏಷ್ಯಾ ಲ್ಯಾಂಡ್‌ಸ್ಕೇಪ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಂ.ಬಿ. ಪ್ರಭಾಕರನ್ ತಿಳಿಸಿದರು.

Advertisement

ಈ ಕುರಿತು ಬುಧವಾರ ಸಮೀಕ್ಷೆ ನಡೆಸಿದ ನಂತರ ಪ್ರವಾಸಿ ಮಂದಿರದಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಗುರುವಾರ ಸಭೆ ನಡೆಸಿ ಮಾತನಾಡಿದ ಅವರು, ಹಲಸು, ನೇರಲೆ ಮರಗಳನ್ನು ಸ್ಥಳಾಂತರ ಮಾಡಲು ಬರುವುದಿಲ್ಲ. ನಂದಿ, ಮಾವು, ಆಲ, ಬಸರಿ, ಗುಲ್‌ಮೋಹರ್ ಮರಗಳನ್ನು ಒಂದು ಸ್ಥಳದಿಂದ ಬೇರು ಸಹಿತ ಕಿತ್ತು ಮತ್ತೊಂದು ಸ್ಥಳದಲ್ಲಿ ಪ್ಲಾಂಟೇಷನ್ ಮಾಡಲು ಅವಕಾಶವಿದೆ. ಇದಕ್ಕೂ ಕೆಲವು ನಿಯಮಗಳಿದ್ದು ಅದನ್ನು ಪರಿಶೀಲಿಸಬೇಕಾಗುತ್ತದೆ. ಅಗಲೀಕರಣ ಸಂದರ್ಭದಲ್ಲಿ ಕಡಿಯಬೇಕಾದ ಮರಗಳನ್ನು ಪರಿಶೀಲನೆ ನಡೆಸಿ ಗುರುತಿಸಿಕೊಳ್ಳಲಾಗಿದ್ದು, ಇನ್ನೊಮ್ಮೆ ಶಾಸಕರು ಮತ್ತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಸ್ಥಳಾಂತರಿಸುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಈ ನಡುವೆ ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ಬೆಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಮುಖ್ಯ ಇಂಜಿನೀಯರ್‌ರನ್ನು ಭೇಟಿ ಮಾಡಿ ಎನ್‌ಎಚ್ 206ರ ಚತುಷ್ಪಥ ನಿರ್ಮಾಣ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳಲ್ಲಿರುವ ಮರಗಳನ್ನು ಸಾಧ್ಯವಾದಷ್ಟು ಉಳಿಸಿಕೊಂಡು, ಕಾಮಗಾರಿ ನಡೆಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು. ಎನ್‌ಎಚ್ ಅಧಿಕಾರಿಗಳಲ್ಲದೆ ಸಾಗರ ಎಪಿಎಂಸಿ ಅಧ್ಯಕ್ಷ ಚೇತನ್ ರಾಜ್ ಕಣ್ಣೂರು, ಬಿಜೆಪಿ ಪ್ರಮುಖರಾದ ಲೋಕನಾಥ್ ಬಿಳಿಸಿರಿ, ಗೌತಮ್ ಇತರರು ಇದ್ದರು.

ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಪ್ರಮೋದ್ ಡಿ.ಆರ್., ಉಪವಲಯ ಅರಣ್ಯಾಧಿಕಾರಿ ಅಶೋಕ್ ಕುಮಾರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈಶ್ವರಪ್ಪ ಜಿ., ಸುನಿಲ್ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next