Advertisement

Sagara: ಹೊಸ ಲೇಔಟ್‌ಗೆ ಅವಕಾಶ ಬೇಡ; ಬೇಳೂರು ತಾಕೀತು

05:12 PM Jun 12, 2024 | Kavyashree |

ಸಾಗರ: ತಾಲೂಕಿನಲ್ಲಿ ಹೊಸದಾಗಿ ಲೇಔಟ್ ಮಾಡಲು ಯಾರೂ ಅವಕಾಶ ಕೊಡಬೇಡಿ. ಲೇಔಟ್ ಮಾಡುವಾಗ ಕಾನೂನು ಪಾಲನೆ ಮಾಡುತ್ತಿಲ್ಲ. ಸೂಕ್ತ ಸೌಲಭ್ಯವನ್ನು ಒದಗಿಸುತ್ತಿಲ್ಲ. ಖಾಸಗಿ ಲೇಔಟ್‌ನವರು ಹಣ ಮಾಡಿಕೊಳ್ಳಲು ಇದನ್ನು ದಂಧೆ ಮಾಡಿಕೊಂಡಿದ್ದು ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಶಾಸಕ, ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ಇಲ್ಲಿನ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಬುಧವಾರ ಪಿಡಿಓ ಮತ್ತು ಮೆಸ್ಕಾಂ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೆಸ್ಕಾಂ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದೆ. ಒಂದೊಮ್ಮೆ ನಿಮಗೆ ಕೆಲಸ ಮಾಡಲು ಆಗದೆ ಇದ್ದರೆ ಬೇರೆ ಕಡೆ ವರ್ಗಾವಣೆ ಮಾಡಿಸಿಕೊಳ್ಳಿ. ಜನರ ಫೋನ್ ಎತ್ತದೆ, ಅವರಿಗೆ ಸೇವೆ ನೀಡದೆ ಇರುವವರು ನಮ್ಮ ತಾಲೂಕಿನಲ್ಲಿ ಇರುವುದು ಬೇಡ ಎಂದರು.

ಕೆಲ ಕಡೆಗಳಲ್ಲಿ ಮೆಸ್ಕಾಂ ಕಾಮಗಾರಿ ವಿಳಂಬವಾಗಿದ್ದು, ಅಂತಹ ಗುತ್ತಿಗೆದಾರನನ್ನು ಬದಲಾಯಿಸಿ ಹೊಸಬರಿಗೆ ನೀಡಿ. ಆನಂದಪುರ, ತ್ಯಾಗರ್ತಿ ಭಾಗದ ಮೆಸ್ಕಾಂ ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ ಎನ್ನುವ ದೂರು ಇದ್ದು ತಕ್ಷಣ ನಿಮ್ಮ ವರ್ತನೆ ಸರಿಪಡಿಸಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಬಿರುಬೇಸಿಗೆ ನಡುವೆಯೂ 24 ಗಂಟೆ ವಿದ್ಯುತ್ ನೀಡಿದ ಹೆಗ್ಗಳಿಕೆ ಕಾಂಗ್ರೆಸ್ ಸರ್ಕಾರದ್ದು. ಹಿಂದಿನ ಬಿಜೆಪಿ ಸರ್ಕಾರ ಡ್ಯಾಂಗಳೆಲ್ಲಾ ಭರ್ತಿಯಾಗಿದ್ದರೂ ಲೋಡ್‌ ಶೆಡ್ಡಿಂಗ್ ಮಾಡಿತ್ತು. ಉಚಿತ ವಿದ್ಯುತ್ ನಡುವೆಯೂ ನಾವು ಸಮರ್ಪಕ ವಿದ್ಯುತ್ ಕೊಡಲು ಯಶಸ್ವಿಯಾಗಿದ್ದೇವೆ. ಮಳೆ ಜಾಸ್ತಿಯಾಗುತ್ತಿರುವುದರಿಂದ ಅಲ್ಲಲ್ಲಿ ಮರ ಬೀಳುವುದು, ರಸ್ತೆ ಮೋರಿ ಕುಸಿತ, ಮನೆ ಕುಸಿಯುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.

Advertisement

ಮನೆ ಕುಸಿದು ಬಿದ್ದರೆ ತಕ್ಷಣ ಗ್ರಾ.ಪಂ. ನಿಂದ 10 ಸಾವಿರ ರೂ. ಪರಿಹಾರ ಕೊಡಿ. ಸಂತ್ರಸ್ತರಿಗೆ ಬಾಡಿಗೆ ಮನೆ ಮಾಡಿಕೊಡುವುದರ ಜೊತೆಗೆ ಅವರಿಗೆ ಸೂಕ್ತ ಸೌಲಭ್ಯ ಒದಗಿಸಿ. ರಸ್ತೆಯಲ್ಲಿ ಮರ ಬಿದ್ದರೆ ಅರಣ್ಯ ಇಲಾಖೆಯವರು ಬರುವ ತನಕ ಕಾಯದೆ ಸ್ಥಳೀಯರನ್ನು ಬಳಸಿಕೊಂಡು ಗ್ರಾ.ಪಂ. ನಿಂದ ತೆರವುಗೊಳಿಸಿ. ಮಳೆಗಾಲ ಮುಗಿಯುವ ತನಕ ಯಾರೂ ರಜೆ ಹಾಕದೆ ಸಾರ್ವಜನಿಕರ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ತಾಲೂಕಿನಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಡೆಂಗ್ಯೂ ಸೊಳ್ಳೆಯನ್ನು ತಿನ್ನುವ ಮೀನುಮರಿ ಇರುವುದಾಗಿ ತಾಲೂಕು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ದಕ್ಷಿಣ ಕನ್ನಡದಲ್ಲಿ ಈ ಪ್ರಯೋಗ ಯಶಸ್ವಿಯಾಗಿದ್ದು ಸಾಗರ ತಾಲೂಕಿನಲ್ಲೂ ನದಿ, ಕೆರೆಕಟ್ಟೆಗಳಲ್ಲಿ ಮೀನುಮರಿ ಬಿಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.

ಜೊತೆಗೆ ಎಲ್ಲಾ ಪಂಚಾಯತ್ ವ್ಯಾಪ್ತಿಯಲ್ಲೂ ಸೊಳ್ಳೆ ನಿಯಂತ್ರಿಸಲು ಕಡ್ಡಾಯವಾಗಿ ಔಷಧಿ ಸಿಂಪಡಿಸಲು ಸೂಚನೆ ನೀಡಲಾಗಿದೆ. ಜನರು ಆಡಳಿತ ನೀಡುವ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಹೇಳಿದರು.

ಹಾಲಪ್ಪ ಅನುದಾನ ತಂದಿಲ್ಲ: ಕಳೆದ ಒಂದು ವರ್ಷದಲ್ಲಿ ನಾನು ತಂದಿರುವ ಅನುದಾನಕ್ಕೂ, ಹಿಂದಿನ ಶಾಸಕ ಹಾಲಪ್ಪ ತಂದಿರುವ ಅನುದಾನಕ್ಕೂ ವ್ಯತ್ಯಾಸವಿದ್ದು, ನನ್ನ ಅವಧಿಯಲ್ಲಿ ಅತಿ ಹೆಚ್ಚು ಅನುದಾನ ತಂದಿದ್ದು ಚರ್ಚೆಗೆ ಸಿದ್ದನಿದ್ದೇನೆ. ಹಿಂದಿನ ಶಾಸಕರು ಕಾಮಗಾರಿ ಮಂಜೂರು ಮಾಡಿಸಿದ್ದರೇ ವಿನಾ ಅನುದಾನ ತಂದಿರಲಿಲ್ಲ. ನಾನು ಹೆಚ್ಚುವರಿ ಅನುದಾನ ತಂದಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಎರಡು ತಿಂಗಳು ಕಾಮಗಾರಿ ನಡೆಯಲಿಲ್ಲ. ಮಳೆಗಾಲ ಮುಗಿದ ನಂತರ ಎಲ್ಲ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ನಗರಸಭೆಗೆ ವಿಶೇಷ ಅನುದಾನದಡಿ ೨೫ ಕೋಟಿ ರೂ. ಮಂಜೂರಾಗಿದೆ ಎಂದು ಹೇಳಿದರು.

ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಗುರುಕೃಷ್ಣ ಶೆಣೈ, ಮೆಸ್ಕಾಂನ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್, ಉದ್ಯೋಗಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಮಹ್ಮದ್ ಹನೀಫ್ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next