ಸಾಗರ : ಸಾಗರ ಉಪವಿಭಾಗ ವ್ಯಾಪ್ತಿಯ ಸಾಗರ, ಹೊಸನಗರ, ಸೊರಬ ಹಾಗೂ ಶಿಕಾರಿಪುರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಖಾಸಗಿ ಲೇಔಟ್ ನಿರ್ಮಾಣಕ್ಕಾಗಿ ನಿಯಮ ಬಾಹಿರವಾಗಿ ಹಾಗೂ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಸಲಾಗುತ್ತಿದ್ದು, ಈ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಸ್ವಾನ್ ಆಂಡ್ ಮ್ಯಾನ್ ಸಂಸ್ಥೆಯ ಕಾರ‍್ಯದರ್ಶಿ, ಪರಿಸರ ಬರಹಗಾರ ಅಖಿಲೇಶ್ ಚಿಪ್ಪಳಿ ಉಪವಿಭಾಗಾಧಿಕಾರಿ ಕಚೇರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.
ನಗರಕ್ಕೆ ಹತ್ತಿರವಿರುವ ಹಳ್ಳಿಗಳಲ್ಲಿನ ಗುಡ್ಡಗಳನ್ನು ಹಿಟಾಚಿಯಂತಹ ಯಂತ್ರಗಳನ್ನು ಬಳಸಿ ನಾಶ ಮಾಡುತ್ತಿರುವುದು ತೀರಾ ಹೆಚ್ಚಾಗಿದೆ. ಮುಖ್ಯವಾಗಿ ಕಂದಾಯ ಇಲಾಖೆಯ ಸುರ್ಪಯಲ್ಲಿರುವ ಗುಡ್ಡಬೆಟ್ಟಗಳೇ ಈ ಲೇಔಟ್ ಮಾಫಿಯಾಗಳ ಗುರಿಯಾಗಿವೆ. ಪ್ರತಿನಿತ್ಯ ಸಾವಿರಾರು ಲಾರಿಗಳು ಮಲೆನಾಡಿನ ಗುಡ್ಡಗಳನ್ನು ನೆಲಸಮ ಮಾಡುತ್ತಿವೆ. ಹಗಲೂ ರಾತ್ರಿ ಈ ಅಕ್ರಮ ದಂಧೆ ನಡೆಯುತ್ತಿದ್ದು, ಮಳೆಗಾಲದಲ್ಲಿ ಗುಡ್ಡ ಕುಸಿತದ ಭೀತಿ ಜನಸಾಮಾನ್ಯರಲ್ಲಿ ಆವರಿಸಿದೆ. ಇಂತಹ ಅಕ್ರಮಗಳನ್ನು ನಿಯಂತ್ರಿಸಲು ಕ್ರಮ ಅಗತ್ಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮಣ್ಣು, ಮರಳು ಇತ್ಯಾದಿಗಳನ್ನು ಸಾಗಿಸುವ ಪ್ರತಿ ಲಾರಿ, ಟಿಪ್ಪರ್, ಟ್ರ್ಯಾಕ್ಟರ್, ಮಿನಿ ಟ್ರ್ಯಾಕ್ಟರ್, ಲಗ್ಗೇಜ್ ಆಟೋ, ಟಿಲ್ಲರ್ರುಗಳಿಗೆ ಕಡ್ಡಾಯ ಜಿಪಿಎಸ್ ಅಳವಡಿಸುವಂತೆ ಸೂಚನೆ ನೀಡಬೇಕು. ನಿಯಮಿತವಾಗಿ ಅವುಗಳ ಚಲನೆಯನ್ನು ಗಮನಿಸಬೇಕು. ಉಪವಿಭಾಗದ ವ್ಯಾಪ್ತಿಯಲ್ಲಿನ ಪ್ರತಿ ಹಿಟಾಚಿ ಅಥವಾ ಜೆಸಿಬಿ ಮಾಲೀಕರಿಗೆ ತಮ್ಮ ಯಂತ್ರಗಳನ್ನು ಕಡ್ಡಾಯವಾಗಿ ನೊಂದಣಿ ಮಾಡಿಸುವಂತೆ ಸೂಚಿಸಬೇಕು. ಅಂತಹ ಯಂತ್ರಗಳು ಕೆಲಸ ಮಾಡುವ ಜಾಗದ ಮಾಹಿತಿಯನ್ನು ಸ್ಥಳೀಯ ಆಡಳಿತಕ್ಕೆ ಕಡ್ಡಾಯವಾಗಿ ನೀಡಬೇಕು. ಈ ಅಂಶಗಳನ್ನು ಪರಿಗಣಿಸಿ, ಮಲೆನಾಡಿನ ಗುಡ್ಡ ಬೆಟ್ಟಗಳನ್ನು ಸಂರಕ್ಷಿಸಲು ಸೂಕ್ತ ಕ್ರಮ ಕೈಗೊಳ್ಳಲು ಮನವಿಯಲ್ಲಿ ಆಗ್ರಹಿಸಲಾಗಿದೆ.
ಇದನ್ನೂ ಓದಿ : ಯುಎಇಯಿಂದ ಭಾರತದ ಗೋಧಿಯ ರಫ್ತು ಮತ್ತು ಮರು-ರಫ್ತು ಸ್ಥಗಿತ