ಸಾಗರ: ನನ್ನ ಜೀವಿತಾವಧಿಯಲ್ಲಿಯೇ ಅತ್ಯಂತ ಕೆಟ್ಟ ದಿನಗಳು ಇದಾಗಿದೆ. ಬೆಂಗಳೂರಿನಂತಹ ಸದಾ ಜನಜಂಗುಳಿ, ವಾಹನ ದಟ್ಟಣೆಯಿಂದ ಕೂಡಿರುತ್ತಿದ್ದ ಮಹಾನಗರ ಮೌನವಾಗಿ ಮಲಗಿರುವುದೇ ಕೋವಿಡ್ ಗಂಭೀರತೆಗೆ ಸಾಕ್ಷಿಯಾಗಿದೆ. ಮಾರಕ
ಕೋವಿಡ್ ಜಗತ್ತಿಗೆ ಪಾಠ ಕಲಿಸಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಇಲ್ಲಿನ ಜೆಪಿ ನಗರದಲ್ಲಿ ಬುಧವಾರ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ವಿಭಾಗದಿಂದ ನೀಡಲಾದ ಸುಮಾರು 3 ಲಕ್ಷ ರೂ. ವೆಚ್ಚದ ದಿನಸಿ ಕಿಟ್
ವಿತರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೋಟ್ಯಂತರ ಜನರು ಉದ್ಯೋಗವಿಲ್ಲದೆ ನಿರುದ್ಯೋಗಿ ಗಳಾಗಿದ್ದಾರೆ. ಅಂತಹವರ ನೆರವಿಗೆ ಉಳ್ಳವರು ಬರಬೇಕು. ಹಸಿವು ನೀಗಿಸುವುದು ಪುಣ್ಯದ ಕೆಲಸ ಎಂದರು.
ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ನಾಗರಾಜ್ ಸ್ವಾಮಿ ಮಾತನಾಡಿ, ನಾನೊಬ್ಬ ಕಾರ್ಮಿಕನ ಮಗ. ಕಾರ್ಮಿಕರ ಕಷ್ಟ ಏನೆಂದು ನನಗೆ ಚೆನ್ನಾಗಿ ಗೊತ್ತು. ಉದ್ಯೋಗವಿಲ್ಲದಿದ್ದರೆ ಕಾರ್ಮಿಕರ ಕುಟುಂಬ ಉಪವಾಸದಲ್ಲಿ ದಿನಕಳೆಯ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸುವುದು ನಮ್ಮ ಆದ್ಯಕರ್ತವ್ಯ ಎಂದು ಕಡುಬಡವರಾಗಿರುವ ಕಾರ್ಮಿಕ ಕುಟುಂಬಗಳನ್ನು ಗುರುತಿಸಿ ವಿತರಿಸಲಾಗುತ್ತಿದೆ ಎಂದು ಹೇಳಿದರು. ಜಿಪಂ ಸದಸ್ಯೆ ಅನಿತಾಕುಮಾರಿ, ಮಹಾಬಲ ಕೌತಿ, ಎಚ್.ಬಿ. ರಾಘವೇಂದ್ರ, ಲೋಹಿತ್ ಸಿರಿವಾಳ ಇನ್ನಿತರರು ಇದ್ದರು.