ಸಾಗರ: ಕೇಂದ್ರ ಮತ್ತು ರಾಜ್ಯ ಸರ್ಕಾರ ನೆರೆ ಪರಿಹಾರ ವಿತರಣೆ ಮಾಡುವಲ್ಲಿ ವೈಫಲ್ಯ ಹೊಂದಿರುವುದನ್ನು ಖಂಡಿಸಿ ಗುರುವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಹಿಂದೆಂದಿಗಿಂತಲೂ ಈ ಬಾರಿ ಅತಿವೃಷ್ಟಿಯಿಂದ ರಾಜ್ಯಾದ್ಯಂತ ವಿಪರೀತ ಹಾನಿಯಾಗಿದೆ. ಜನರು ಮನೆ-ಮಠ ಕಳೆದುಕೊಂಡು ಸಂಕಷ್ಟಮಯ ಜೀವನ ಅನುಭವಿಸುತ್ತಿದ್ದಾರೆ. ಮಲೆನಾಡು ಸೇರಿದಂತೆ ಉತ್ತರ ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿ ನೆರೆಯಿಂದ ಹಾನಿ ಉಂಟಾಗಿದ್ದರೂ ಸರ್ಕಾರ ಸಂತ್ರಸ್ತರ ನೋವಿಗೆ ಸ್ಪಂದಿಸದೆ ಇರುವುದು ಖಂಡನೀಯ ಎಂದರು.
ಇಂತಹ ತುರ್ತು ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ನೆರವು ನೀಡಬೇಕಾಗಿತ್ತು. ಆದರೆ ಕೇಂದ್ರ ಸರ್ಕಾರ ಈತನಕ ರಾಜ್ಯ ಸರ್ಕಾರಕ್ಕೆ ಪರಿಹಾರ ಮೊತ್ತವನ್ನು ವಿತರಣೆ ಮಾಡಿಲ್ಲ. ರಾಜ್ಯ ಸರ್ಕಾರ ಸಹ ನೆರೆ ಸಂತ್ರಸ್ತರ ನೆರವಿಗೆ ಈತನಕ ಬಂದಿಲ್ಲ. ನೆರೆಯಿಂದ ಹಾನಿಗೊಳಗಾದವರಿಗೆ ಮೂಲ ಸೌಲಭ್ಯವನ್ನು ಕಲ್ಪಿಸಲಿಲ್ಲ. ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಪಕ್ಷದ ವತಿಯಿಂದ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್. ಜಯಂತ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲ. ಸಂಚಾರಿ ಸಾರಿಗೆ ಸವಾರರಿಂದ ದಂಡ ವಸೂಲಿ ಮಾಡುವಲ್ಲಿ ತೋರಿಸುವಷ್ಟು ಆಸಕ್ತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಜನಸಾಮಾನ್ಯರ ನೋವಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ದಂಡ ವಸೂಲಿ ಹೆಸರಿನಲ್ಲಿ ಸರ್ಕಾರ ಜನರ ಸುಲಿಗೆಗೆ ಇಳಿದಿದೆ. ಕೇಂದ್ರದ ಆರ್ಥಿಕ ನೀತಿಯಿಂದ ಜನರು ಉದ್ಯೋಗ ಕಳೆದುಕೊಂಡು ಬೀದಿ ಪಾಲಾಗುತ್ತಿದ್ದಾರೆ. ಸುಮಾರು 10 ಲಕ್ಷ ಜನರು ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ರಾಜ್ಯದ ಜನರು ಅತಿವೃಷ್ಟಿಯಿಂದ ತುಂಬಾ ಸಮಸ್ಯೆ ಅನುಭವಿಸುತ್ತಿದ್ದಾರೆ. ಆದರೆ ನರೇಂದ್ರ ಮೋದಿ ಅವರು ಚಂದ್ರಯಾನ ನೋಡಲು ಬಂದರೇ ವಿನಃ ರಾಜ್ಯದ ನೆರೆ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೇಂದ್ರದಿಂದ ಹೆಚ್ಚಿನ ಪರಿಹಾರ ತರುವ ತಾಕತ್ತು ಇಲ್ಲ. ತಕ್ಷಣ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕೇಂದ್ರ ಸರ್ಕಾರ ತಕ್ಷಣ ರಾಜ್ಯದ ನೆರೆಹಾನಿಗೆ ಸಂಬಂಧಪಟ್ಟಂತೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಜಿಪಂ ಸದಸ್ಯ ಭೀಮನೇರಿ ಶಿವಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ಕುಗ್ವೆ ಮಾತನಾಡಿದರು. ಅನಿತಾ ಕುಮಾರಿ, ಕಲಸೆ ಚಂದ್ರಪ್ಪ, ಜ್ಯೋತಿ, ಮೈಕೆಲ್ ಡಿಸೋಜ, ಗಣಪತಿ ಮಂಡಗಳಲೆ, ಮಹಾಬಲೇಶ್ ಕೌತಿ, ರವಿಕುಮಾರ್ ಹುಣಾಲಮಡಿಕೆ, ಪ್ರಭಾವತಿ ಚಂದ್ರಕಾಂತ್, ಸವಿತಾ ದೇವರಾಜ್ ಇನ್ನಿತರರು ಇದ್ದರು.