Advertisement

Sagara: ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಅಗತ್ಯ ನ್ಯಾಯ ಒದಗಿಸಲು ಬದ್ಧ; ಮಧು ಬಂಗಾರಪ್ಪ

06:53 PM Oct 03, 2024 | Shreeram Nayak |

ಸಾಗರ: ಹಲವು ವರ್ಷಗಳಿಂದ ಭೂಮಿ ಸಮಸ್ಯೆ ಎದುರಿಸುತ್ತಿರುವ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಅಗತ್ಯ ನ್ಯಾಯ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.

Advertisement

ತಾಲೂಕಿನ ಶರಾವತಿ ಹಿನ್ನೀರಿನ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಆರಂಭವಾದ ನವರಾತ್ರಿ ಉತ್ಸವಕ್ಕೆ ಗುರುವಾರ ಚಾಲನೆ ನೀಡಿದ ಮಾತನಾಡಿದ ಅವರು, ಶರಾವತಿ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಒದಗಿಸುವುದಕ್ಕೂ ಸರ್ಕಾರ ಬದ್ಧ. ನಮ್ಮ ಸರ್ಕಾರ ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ಅಂದಿನಿಂದಲೂ ಇದೆ. ಈಗಾಗಲೇ ಸಂತ್ರಸ್ತರ ಸಮಸ್ಯೆ ಬಗ್ಗೆ ಸಮಗ್ರವಾಗಿ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ಅಗತ್ಯ ಕ್ರಮಕ್ಕೆ ಮನವಿ ಮಾಡಲಾಗಿದೆ. ಮುಳುಗಡೆ ಸಂತ್ರಸ್ತರ ರೈತರಿಗೆ ನಮ್ಮ ಅವಧಿಯಲ್ಲಿ ನಾನು ಅಧಿಕಾರ ವಹಿಸಿಕೊಂಡ ಬಳಿಕ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಘೋಷಿಸಿದರು.

ಸಿಗಂದೂರು ಧರ್ಮಾಧಿಕಾರಿ ಡಾ. ಎಸ್. ರಾಮಪ್ಪ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಶಾಲೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಸಂದೇಶ ನೀಡಿದ್ದರು. ಇಂದು ಅವರ ಆಶಯದಂತೆ ಸಿಗಂದೂರು ಕ್ಷೇತ್ರದ ಧರ್ಮಾಧಿಕಾರಿಗಳು ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ಯೋಜನೆ ಹಮ್ಮಿಕೊಂಡಿದ್ದಾರೆ. ರಾಜ್ಯಾದ್ಯಂತ ಸರ್ಕಾರಿ ಶಾಲೆಗಳ ಉಳಿವಿಗೆ ದೇವಾಲಯದ ಈ ಕಾರ್ಯ ಮಾದರಿಯಾಗಬೇಕು. ಮುಂದಿನ ದಿನಗಳಲ್ಲಿ ಈ ಯೋಜನೆಯು ರಾಜ್ಯಾದ್ಯಂತ ವಿಸ್ತರಣೆಯಾಗಲಿ ಎಂದು ಒತ್ತಾಯಿಸಿದರು.

ಭೂ ಮಂಜೂರಾತಿಗೆ ರೈತರ 70 ವರ್ಷಗಳ ದಾಖಲೆ ಕೇಳುತ್ತಿರುವುದು ಸರಿಯಲ್ಲ, ಶರಾವತಿ ಮುಳುಗಡೆ ಸಂತ್ರಸ್ತರಿಗೆ ಈ ನಿಯಮವನ್ನು ಸಡಿಲಿಸಿ ವಿಶೇಷ ಪ್ಯಾಕೇಜ್ ಮೂಲಕ ಅನುಭವದ ಮಿತಿಯನ್ನು ಕನಿಷ್ಠ 25 ವರ್ಷಗಳಿಗೆ ಇಳಿಕೆ ಮಾಡಬೇಕು. ಇದರಿಂದ ಸಾವಿರಾರು ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಹೇಳಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಡೋಲು ಬಡಿದು ಭಕ್ತಾದಿಗಳಿಗೆ ದಸರಾ ಹಬ್ಬದ ಶುಭಾಶಯಗಳನ್ನು ಹೇಳಿದರು. ಈ ವೇಳೆ ರತ್ನಾಕರ ಹೋನಗೋಡು, ಪ್ರಸನ್ನ ಕುಮಾರ, ಶ್ರೀದೇವಿ ರಾಮಚಂದ್ರ, ಸತ್ಯನಾರಾಯಣ ಜಿ.ಟಿ., ಸರಸ್ವತಿ ಗಣಪತಿ, ಮಂಜಪ್ಪ ಮರಸ, ಅರುಣ್ ಪ್ರಸಾದ್, ಯೋಗರಾಜ ಯಮಗಳಲೆ, ಶ್ರೀ ಕ್ಷೇತ್ರದ ಕಾರ್ಯದರ್ಶಿ ರವಿಕುಮಾರ್ ಎಚ್.ಆರ್. ಇತರರು ಇದ್ದರು.

Advertisement

ದೇವಿಗೆ ವಿಶೇಷ ಪೂಜೆ: ನವರಾತ್ರಿ ಉತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಚಂಡಿಕಾ ಹವನ, ದೇವಿಗೆ ಮಹಾಭಿಷೇಕ, ಪಂಚಾಮೃತ ಅಭಿಷೇಕ, ಪಾರಾಯಣ, ನವ ಚಂಡಿಕಾ ಹವನ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಅರ್ಚಕ ರಘುಪತಿ ಭಟ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next