Advertisement

Sagara: ಸಿಗರೇಟ್ ಕಳ್ಳತನ ಪ್ರಕರಣ; ಅಂತರಾಜ್ಯ ಕಳ್ಳನ ಬಂಧನ

08:39 AM Mar 15, 2024 | Kavyashree |

ಸಾಗರ: ನಗರದ ಯುನೈಟೆಡ್ ಟ್ರೇಡಿಂಗ್ ಕಂಪನಿಯಲ್ಲಿ 2023ರ ಮೇ ತಿಂಗಳಲ್ಲಿ ನಡೆದಿದ್ದ 17 ಲಕ್ಷ ಮೊತ್ತದ ಸಿಗರೇಟ್ ತುಂಬಿದ್ದ ಬಾಕ್ಸ್ ಕಳವು ಪ್ರಕರಣದಲ್ಲಿ ಓರ್ವ ಅಂತರಾಜ್ಯ ಕಳ್ಳನನ್ನು ಬಂಧಿಸಿರುವ ಪೇಟೆ ಪೋಲಿಸರು 6 ಲಕ್ಷ ರೂ. ವಶ ಪಡಿಸಿಕೊಂಡು, ಉಳಿದ ಮೂವರಿಗೆ ಹುಡುಕಾಟ ನಡೆಸಿದ್ದಾರೆ.

Advertisement

ಪಿಎಸ್‌ಐಗಳಾದ ಮಹೇಶ ಕುಮಾರ್, ಸಂತೋಷ್ ಬಾಗೋಜಿ ಮತ್ತು ಲಕ್ಷ್ಮಣ ಮೊದಲಾದವರಿದ್ದ ತನಿಖಾ ತಂಡ ರಾಜಸ್ಥಾನದ ಜಾಲೂರು ಜಿಲ್ಲೆಯ ಮಾಂಡವಾಲ ಗ್ರಾಮದ ನಿವಾಸಿ ಜೀತೇಂದ್ರ ಕುಮಾರ್ (27)ನನ್ನು ದಸ್ತಗಿರಿ ಮಾಡಿ, ಸಿಗರೇಟ್ ಮಾರಾಟ ಮಾಡಿ ಹಂಚಿಕೊಂಡಿದ್ದ 6 ಲಕ್ಷ ರೂ.ವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ಹಿನ್ನೆಲೆ: ಕಳೆದ ವರ್ಷ ಮೇ 14ರಂದು ಸೊರಬ ರಸ್ತೆಯಲ್ಲಿರುವ ಅನುರಾಧಾ ಕಾಗೋಡುರವರಿಗೆ ಸೇರಿದ ಯುನೈಟೆಡ್ ಟ್ರೇಡಿಂಗ್ ಕಂಪೆನಿ ಕಟ್ಟಡದ ಹಿಂದಿನ ಬಾಗಿಲು ಒಡೆದು ಅಲ್ಲಿದ್ದ 17 ಲಕ್ಷ ಮೌಲ್ಯದ ಸಿಗರೇಟ್ ತುಂಬಿದ್ದ ಬಾಕ್ಸ್‌ಗಳನ್ನು ಕಳ್ಳತನ ಮಾಡಲಾಗಿತ್ತು. ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ಪ್ರಾರಂಭಿಸಿದ್ದ ಪೊಲೀಸರಿಗೆ ವಾಹನದ ನಂಬರ್ ದೊರೆತಿತ್ತು. ಇದರ ಜಾಡು ಹಿಡಿದು, ಮಾಲೀಕರನ್ನು ಪ್ರಶ್ನಿಸಿದಾಗ ಹುಬ್ಬಳ್ಳಿಯಲ್ಲಿ ಬಾಡಿಗೆಗೆ ಬಂದಿದ್ದ ರಾಜಸ್ಥಾನ ಮೂಲದ ಮೂವರು ಯುವಕರು ಕಾರನ್ನು ಪಡೆದು, ಮಾಲೀಕನನ್ನು ಹೋಟೆಲ್‌ನಲ್ಲಿ ಬಿಟ್ಟು ಸಾಗರಕ್ಕೆ ಬಂದು, ಕಳ್ಳತನ ಮಾಡಿ ಪರಾರಿಯಾಗಿದ್ದು ತಿಳಿದು ಬಂದಿದೆ.

ಕದ್ದಿದ್ದ ಸಿಗರೇಟನ್ನು ಮಾರಾಟ ಮಾಡಿ ಬಂದ ಹಣವನ್ನು ಎಲ್ಲರೂ ಹಂಚಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜಸ್ಥಾನ ಮೂಲದ ನಾಲ್ವರ ತಂಡ ರಾಜ್ಯದ ಬಿಜಾಪುರ, ಸಿಂಧಗಿ, ಸವದತ್ತಿ ಮೊದಲಾದೆಡೆಯೂ ಇದೇ ರೀತಿ ಹೋಲ್‌ಸೆಲ್ ಸಿಗರೇಟ್ ಮಾರಾಟ ಮಾಡುವವರನ್ನು ದೋಚಿರುವುದು ಇದೇ ವೇಳೆ ಪತ್ತೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next