ಸಾಗರ: ತಾಲೂಕಿನ ಸಿಗಂದೂರು ಚೌಡಮ್ಮದೇವಿ ಕೃಪಾಪೋಷಿತ ಯಕ್ಷಗಾನ ಮೇಳದ ಭಾಗವತರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೆ.ಜಿ. ವೇಣುಗೋಪಾಲ ಕೆಳಮನೆ(44) ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದ ಹಿನ್ನೆಲೆ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.
ಮೃತರು ತಂದೆ, ಭಾಗವತ ಕೆ.ಜಿ.ರಾಮರಾವ್, ತಾಯಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.
ಕಲಾವಿದರ ಕುಟುಂಬದ ಕುಡಿಯಾಗಿದ್ದ ವೇಣುಗೋಪಾಲ ಉಡುಪಿಯ ಕಲಾಕೇಂದ್ರದಲ್ಲಿ ಭಾಗವತಿಕೆ ಸೇರಿದಂತೆ ಯಕ್ಷಗಾನದ ಸಾಂಪ್ರದಾಯಿಕ ಶಿಕ್ಷಣ ಪಡೆದಿದ್ದರು. ಈ ಹಿಂದೆ ಸಾಲಿಗ್ರಾಮ ಮೇಳದ ಭಾಗವತರಾಗಿಯೂ ಕೆಲಸ ಮಾಡಿದ್ದರು. ಕೆಲಕಾಲ ಉಡುಪಿ ಕಲಾಕೇಂದ್ರದಲ್ಲಿ ಗುರುಗಳಾಗಿಯೂ ಕೆಲಸ ಮಾಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಸಿಗಂದೂರು ಮೇಳದಲ್ಲಿ ಭಾಗವತರ ತಂಡದಲ್ಲಿ ಕೆಲಸ ಮಾಡಿದ್ದ ಅವರು ಬರಲಿರುವ ಋತುವಿನಿಂದ ಮೇಳದ ಮುಖ್ಯ ಭಾಗವತರಾಗಿ ಕಾರ್ಯ ನಿರ್ವಹಿಸುತ್ತಾರೆ ಎಂಬ ಮಾಹಿತಿ ಲಭ್ಯವಾಗಿತ್ತು.
ರಂಗ ಪ್ರದರ್ಶನ ಹಾಗೂ ಭಾಗವತಿಕೆಗಳೆರಡರಲ್ಲೂ ಅವರು ತಮ್ಮ ಛಾಪು ತೋರಿಸಿದ್ದರು. ಬಯಲಾಟದ ಪ್ರಸಂಗಗಳಿಗೂ ಭಾಗವತರಾಗಿ ಕಾರ್ಯ ನಿರ್ವಹಿಸುವ ಮೂಲಕ ಅವರು ಗಮನ ಸೆಳೆದಿದ್ದರು.
ಸೋಮವಾರ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆಯಲ್ಲಿ ಅಪಘಾತವಾಗಿ ತಲೆಗೆ ತೀವ್ರ ತರಹದ ಗಾಯಗಳಾಗಿತ್ತು. ಈ ಕಾರಣ ಶಿವಮೊಗ್ಗದ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ.