ಸಾಗರ: ಹಿಂದೆ ಕಾಂಗ್ರೆಸ್‌ನ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ರೈತರಿಗೆ ಉಪಕಾರಿಯಾಗಿದ್ದ ಯಶಸ್ವಿನಿ ಯೋಜನೆ ಜಾರಿಗೆ ತಂದಿದ್ದರು. ನಂತರ ಬಂದ ಸಿದ್ದರಾಮಯ್ಯನವರು ಯೋಜನೆ ರದ್ದುಗೊಳಿಸಿದರೆ ನಂತರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಯೋಜನೆ ಅನುಷ್ಠಾನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದ್ದರೂ ಈಡೇರಿಸಿರಲಿಲ್ಲ. ಇದೀಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ರೈತ ಯಶಸ್ವಿನಿ ಯೋಜನೆಗೆ ಪುನರ್ ಚಾಲನೆ ನೀಡಲು ಮನಸ್ಸು ಮಾಡಿದ್ದಾರೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಡಾ| ಆರ್.ಎಂ.ಮಂಜುನಾಥ ಗೌಡ ತಿಳಿಸಿದರು.
ನಗರದ ಸೌಪರ್ಣಿಕ ಸಭಾಂಗಣದಲ್ಲಿ ಶುಕ್ರವಾರ ರಾಜ್ಯ ಸಹಕಾರ ಮಹಾಮಂಡಲ, ಜಿಲ್ಲಾ ಸಹಕಾರಿ ಯೂನಿಯನ್, ಡಿಸಿಸಿ ಬ್ಯಾಂಕ್, ಸಹಕಾರ ಇಲಾಖೆ ಸೇರಿದಂತೆ ವಿವಿಧ ಸಹಕಾರಿ ಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ 66ನೇ ಅಖೀಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.
ರೈತ ಯಶಸ್ವಿನಿ ಯೋಜನೆಯಿಂದ ಲಕ್ಷಾಂತರ ರೈತರು ಮತ್ತು ಅವಲಂಬಿತ ಕುಟುಂಬಗಳಿಗೆ ಕಡಿಮೆ ವೆಚ್ಚದಲ್ಲಿ ಆರೋಗ್ಯ ಸೇವೆ ಪಡೆಯಲು ಸಾಧ್ಯವಿದೆ. ಇಂತಹ ಯೋಜನೆಗಳ ಅನುಷ್ಠಾನದ ಬಗ್ಗೆ ಸಹಕಾರ ಸಂಸ್ಥೆಗಳು ಧ್ವನಿ ಎತ್ತುವ ಅಗತ್ಯವಿದೆ. ಪ್ರಸ್ತುತ ಸಹಕಾರಿ ಚಳುವಳಿ ಜನರ ಚಳುವಳಿಯಾಗಿದ್ದು, ನಮ್ಮ ಸಮಸ್ಯೆಗಳನ್ನು ಸರ್ಕಾರದ ಎದುರು ಇಡುವಾಗ ಸಹಕಾರಿಗಳ ಧ್ವನಿ ಗಟ್ಟಿಯಾಗಿ ಮೊಳಗಬೇಕು ಎಂದು ತಿಳಿಸಿದರು.
ಸಹಕಾರಿ ಸಂಸ್ಥೆಗಳಲ್ಲಿ ರಾಜಕಾರಣ ಮತ್ತು ರಾಜಕೀಯ ಹಸ್ತಕ್ಷೇಪ ಬೇಡ ಎನ್ನುವ ಕಾಯ್ದೆ ಇದ್ದರೂ, ಕಾಲ ಕಾಲಕ್ಕೆ ರಾಜಕೀಯ ಹಸ್ತಕ್ಷೇಪ ನಡೆಯುತ್ತಿದೆ. ಇದರಿಂದಾಗಿ ಸಹಕಾರಿ ಸಂಸ್ಥೆಗಳು ನಿರೀಕ್ಷಿತ ಮಟ್ಟದ ಯಶಸ್ಸು ಗಳಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ರೈತರಿಗೆ 100 ಕೋಟಿಗೂ ಅಧಿಕ ಸಾಲದ ಅಗತ್ಯವಿದೆ. ಆದರೆ ಅದನ್ನು ಪೂರೈಸಲು ಸಾಧ್ಯವಾಗದ ಸ್ಥಿತಿ ಇದೆ. ಹಿಂದೆ ನಬಾರ್ಡ್ ರೈತರಿಗೆ ಹೆಚ್ಚಿನ ಆರ್ಥಿಕ ನೆರವು ನೀಡುತ್ತಿತ್ತು. ಈಗ ಬಾರ್ಡ್
ಸರ್ಕಾರದ ರಸ್ತೆ, ಸೇತುವೆ ಕಾಮಗಾರಿಗಳಿಗೆ ಸಾಲ ಸೌಲಭ್ಯ ನೀಡುತ್ತಿದೆಯೇ ವಿನಃ ರೈತರ ಏಳಿಗೆಗೆ ಬೇಕಾದ ಸೌಲಭ್ಯ ಕೊಡುತ್ತಿಲ್ಲ. ನಬಾರ್ಡ್ ಈ ನೀತಿ ಪ್ರಶ್ನಾರ್ಹವಾದದ್ದು. ಈ ಬಗ್ಗೆ ಸಹಕಾರಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ರೈತರಿಗೆ ಕೊಟ್ಟ ಸಾಲವನ್ನು ವಾಪಸ್ ಪಡೆಯಬಾರದು ಎಂದು ಸರ್ಕಾರಗಳು ಹೇಳುತ್ತಿವೆ. ಆದರೆ ಸರ್ಕಾರದಿಂದ ಸಾಲಮನ್ನಾ, ಬಡ್ಡಿಮನ್ನಾ ಘೋಷಣೆ ಮಾಡಿ ಅದು ಪಿಕಾರ್ಡ್ ಬ್ಯಾಂಕ್‌ಗಳಿಗೆ ತಲುಪಲು ಮೂರ್‍ನಾಲ್ಕು ವರ್ಷಗಳು ಹಿಡಿಯುತ್ತದೆ. ಈ ನಡುವೆ ಠೇವಣಿದಾರರ ವಿಶ್ವಾಸ ಗಳಿಸಿಕೊಳ್ಳಲು ಪಿಕಾರ್ಡ್ ಬ್ಯಾಂಕ್‌ಗಳು ಹರಸಾಹಸ ಪಡುವ ಜೊತೆಗೆ ಕೆಲವು ಪಿಕಾರ್ಡ್ ಬ್ಯಾಂಕ್‌ಗಳು ಮುಚ್ಚುವ ಸ್ಥಿತಿಯಲ್ಲಿಯೂ ಇದೆ. ಈ ಬಗ್ಗೆ ಸರ್ಕಾರ ಹೆಚ್ಚಿನ ನಿಗಾ ವಹಿಸಿ ಸಹಕಾರಿ ಚಳುವಳಿಯನ್ನು ಉಳಿಸುವ ಮತ್ತು ಮುಂದಕ್ಕೆ ಕೊಂಡೊಯ್ಯಲು ಬೇಕಾದ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ವಾಟಗೋಡು ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಸಂಘಗಳ ಅಧ್ಯಕ್ಷ ರಘುಪತಿ ರಾವ್ ಮತ್ತಿಕೊಪ್ಪ, ಕೃಷ್ಣಮೂರ್ತಿ ಭಂಡಾರಿ, ದೇವಪ್ಪ ಕೆ.ಸಿ., ಅನಿಲಕುಮಾರ್ ಕೆ.ಎಚ್., ಎಂ.ಕೆ.ದ್ಯಾವಪ್ಪ ಕೆಳದಿ, ವೀರೇಶ್ ಗೌಡ ಬರೂರು, ಈಶ್ವರ ನಾಯ್ಕ, ಆರ್.ಸುಮಾ, ಆರ್.ಪಿ. ಮಧುಸೂದನ್, ಶ್ರೀಧರ್ ಕೆ.ಎಸ್., ಸಹಕಾರ ಸಂಘಗಳ ಸಹಾಯಕ ನಿಬಂಧಕ ಜಿ. ವಾಸುದೇವ್ ಇದ್ದರು. ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಸಹಾಯಕ ನಿರ್ದೇಶಕ ವಿ.ಸಿ.ಸಿದ್ದಪ್ಪ ಸಹಕಾರಿ ತತ್ವ ಕುರಿತು ಉಪನ್ಯಾಸ ನೀಡಿದರು.
ವೀಣಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟೇಶ್ ಎಚ್. ಕೆ. ಸ್ವಾಗತಿಸಿದರು. ರಮೇಶ್ ಕೆ. ಮರತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುಮೂರ್ತಿ ಎ. ಅಭಿನಂದಿತರ ಕುರಿತು ಮಾತನಾಡಿದರು. ಜೈಕುಮಾರ್ ವಂದಿಸಿದರು. ಮಂಜುನಾಥ್ ನಿರೂಪಿಸಿದರು.