Advertisement

Sagar; ಕುವೆಂಪು ವಿವಿ ಪದವಿ ಪರೀಕ್ಷೆಗಳನ್ನು ಮುಂದೂಡಿ: ವಿದ್ಯಾರ್ಥಿಗಳ ಮನವಿ

06:40 PM Aug 17, 2023 | Team Udayavani |

ಸಾಗರ: ಕುವೆಂಪು ವಿಶ್ವವಿದ್ಯಾಲಯ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಸೆ.9 ರಿಂದ 11 ರವರೆಗೆ ನಿಗದಿಪಡಿಸಿರುವ ಪರೀಕ್ಷೆಯನ್ನು ಮುಂದೂಡಿ ಹೊಸ ವೇಳಾಪಟ್ಟಿಯನ್ನು ಪ್ರಕಟಿಸುವಂತೆ ಒತ್ತಾಯಿಸಿ ಗುರುವಾರ ಶಿವಮೊಗ್ಗ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಉಪವಿಭಾಗಾಧಿಕಾರಿಗಳ ಮೂಲಕ ಕುಲಪತಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ಕುರಿತು ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷ ಚಿನ್ಮಯ್ ಸಿ.ಎಂ., ಕುವೆಂಪು ವಿವಿ ವಿದ್ಯಾರ್ಥಿ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಅವೈಜ್ಞಾನಿಕ ನಿರ್ಧಾರವನ್ನು ತೆಗೆದುಕೊಂಡು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುವಲ್ಲಿ ವಿವಿ ರಾಜ್ಯಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಸೆ.9 ರಿಂದ 11 ರವರೆಗೆ ಅಂತಿಮ ಬಿಕಾಂನಿಂದ ಎಂಬಿಎಗೆ ಹೋಗುವ ವಿದ್ಯಾರ್ಥಿಗಳಿಗೆ ಪರೀಕ್ಷಾ ವೇಳಾಪಟ್ಟಿಯನ್ನು ವಿವಿ ಪ್ರಕಟಿಸಿದೆ. ಆದರೆ ಈ ದಿನಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಶಿಕ್ಷಣಕ್ಕೆ ಅನುಕೂಲವಾಗುವ ಪಿಜಿಸಿಇಟಿ ಪರೀಕ್ಷೆ ನಡೆಯುತ್ತಿದೆ ಎಂದರು.

ಪಿಜಿಸಿಇಟಿ ಪರೀಕ್ಷೆಯು ಹೆಚ್ಚಾಗಿ ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ನಡೆಯಲಿದೆ. ಪಿಜಿಸಿಇಟಿ ನಡೆಯುವ ದಿನಗಳಂದೇ ವಿವಿ ಅಂತಿಮ ಪದವಿಯ ಪರೀಕ್ಷೆ ವೇಳಾಪಟ್ಟಿ ಪ್ರಕಟ ಮಾಡಿದೆ. ಬಹುತೇಕ ವಿದ್ಯಾರ್ಥಿಗಳು ಪಿಜಿಸಿಇಟಿ ಪರೀಕ್ಷೆಗೆ ಪಾಲ್ಗೊಳ್ಳಬೇಕಾಗಿರುವುದರಿಂದ ಪದವಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ತಕ್ಷಣ ಘೋಷಣೆ ಮಾಡಿರುವ ಪರೀಕ್ಷೆಯನ್ನು ಮುಂದೂಡಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು. ಇಲ್ಲವಾದಲ್ಲಿ ಜಿಲ್ಲಾಧ್ಯಂತ ಹೋರಾಟ ರೂಪಿಸುವ ಜೊತೆಗೆ ವಿವಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಸ್ವಸ್ತಿಕ್, ಅಕ್ಷಯ ಡಿ.ಕೆ., ಮನೋಜ್ ಎಚ್.ಪಿ., ರಕ್ಷಿತ್ ಸಿ., ಜ್ಯೋತಿ ಎಂ., ಲಿಖಿತಾ ವಿ., ಸ್ವಾತಿ, ಧನ್ಯಶ್ರೀ, ಲತಾ, ಅಭಿರಾಮ್ ಜೆ.ಎಸ್. ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next