Advertisement
ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಜಿಲ್ಲಾ ಕೇಂದ್ರ ಗ್ರಂಥಾಲಯದ ಅಡಿಯಲ್ಲಿ ಸಾಗರದಲ್ಲಿ ಎರಡು ಶಾಖೆಗಳು ಕೆಲಸ ಮಾಡುತ್ತಿವೆ. ನಗರದ ಕೋರ್ಟ್ ರಸ್ತೆಯಲ್ಲಿ ಮುಖ್ಯ ಖಾಸಗಿ ಬಸ್ ನಿಲ್ದಾಣದಿಂದ ಕೂಗಳತೆಯ ದೂರದಲ್ಲಿ ದಶಕಗಳಿಂದ ಒಂದು ಶಾಖೆ ಕಾರ್ಯ ನಿರ್ವಹಿಸುತ್ತಿದ್ದರೆ ನಗರದ ಹೊರವಲಯದ ಅಣಲೆಕೊಪ್ಪದಲ್ಲಿ ನಾಲ್ಕು ವರ್ಷಗಳ ಈಚೆಗೆ ಇನ್ನೊಂದು ಗ್ರಂಥಾಲಯ ಶಾಖೆ ಆರಂಭಗೊಂಡಿದೆ.
Related Articles
11 ವಾರಪತ್ರಿಕೆಗಳು, 8 ಪಾಕ್ಷಿಕಗಳು ಹಾಗೂ 19 ಮಾಸಿಕ ಈಗ ಇಲ್ಲಿ ಸಿಗುತ್ತಿವೆ. ಗ್ರಂಥಾಲಯದಲ್ಲಿ 56 ಸಾವಿರ ಪುಸ್ತಕಗಳು ಇವೆ. ಅದೃಷ್ಟಕ್ಕೆ ಗ್ರಂಥಾಲಯಕ್ಕೆ ದೈನಿಕಗಳನ್ನು ಓದಲು ಸ್ವಲ್ಪ ಸಂಖ್ಯೆಯ ಜನರು ಓದಲು ಬರುತ್ತಿದ್ದಾರೆ. 4,791 ಸದಸ್ಯರು ಇದ್ದರೂ ಪ್ರಸ್ತುತ ಕೇವಲ 200 ಜನ ಸದಸ್ಯರು ಮಾತ್ರ ಗ್ರಂಥಾಲಯದ ಪ್ರಯೋಜನ ಪಡೆಯುತ್ತಿದ್ದರು ಉಳಿದವರು ವಿಮುಖರಾಗಿರುವುದು ಬೇಸರದ ವಿಷಯ.
Advertisement
ಬೇರೆ ಸಮಸ್ಯೆಗಳೂ ಇವೆ!: ಪುಸ್ತಕಗಳ ಲೋಕದ ಗ್ರಂಥಾಲಯ ಇವತ್ತಿಗೂ ಈ ಆಧುನಿಕ ಕಾಲದ ತಾಂತ್ರಿಕತೆಯನ್ನು ತನ್ನದಾಗಿಸಿಕೊಂಡಿಲ್ಲ. ಇಲ್ಲಿನ ಪ್ರತಿಯೊಂದು ಮಾಹಿತಿ, ದಾಖಲೆ ಕಡತ, ಫೈಲ್‌ಗಳಲ್ಲಿ ಇದೆಯೇ ವಿನಃ ಕಂಪ್ಯೂಟರ್ ತಂತ್ರಜ್ಞಾನದ ನೆರವಿನಿಂದ ಡೇಟಾ ಸಂಗ್ರಹಿಸುವ ಕೆಲಸ ಆಗಿಲ್ಲ. ಪುಸ್ತಕಗಳಲ್ಲಿ ಕಾದಂಬರಿಗಳು ಲೇಖಕರ ಪ್ರಕಾರವಾಗಿ ಹಾಗೂ ಸೃಜನೇತರ ಪುಸ್ತಕಗಳನ್ನು ವಿಷಯಾಧಾರಿತವಾಗಿ ಸಂಗ್ರಹಿಸುವ ಪ್ರಯತ್ನ ಮಾಡಲಾಗಿದೆ. ಆದರೂ ಓದುಗನೋರ್ವನಿಗೆ ತಾನು ಬಯಸಿದ ಪುಸ್ತಕವನ್ನು ಹುಡುಕುವುದು ಸುಲಭವಲ್ಲ. ಕಂಪ್ಯೂಟರ್ ಡೇಟಾ ವ್ಯವಸ್ಥೆ ಇದ್ದಿದ್ದರೆ ಯಾವ ಅಲ್ಮೆರಾದಲ್ಲಿ ಯಾವ ಪುಸ್ತಕ ಇದೆ ಎಂಬ ಮಾಹಿತಿಯನ್ನು ಒಂದು ಕ್ಲಿಕ್‌ನಲ್ಲಿ ನೋಡಿ ಹುಡುಕಿಕೊಳ್ಳಬಹುದಿತ್ತು. ಗ್ರಂಥಾಲಯದ ಖಾಯಂ ಓದುಗರಾದ ಜಿತೇಂದ್ರ ಹಿಂಡೂಮನೆ ಹೇಳುವಂತೆ ಸರ್ಕಾರದ ವ್ಯವಸ್ಥೆ ಆಗಿರುವುದರಿಂದ ಪುಸ್ತಕಗಳಲ್ಲಿಯೂ ಕಸ ಜಾಸ್ತಿ. ಅವುಗಳಲ್ಲಿ ಉತ್ತಮವಾದುದನ್ನು ಆರಿಸಿಕೊಳ್ಳುವುದು ತುಸು ಸಾಹಸದ ಕೆಲಸ!
ಗ್ರಂಥಾಲಯದ ಕಟ್ಟಡ ಸಾಕಷ್ಟು ಹಳೆಯದಾಗಿರುವುದರಿಂದ ಇಂದಿನ ಅವಶ್ಯಕತೆಗಳಿಗೆ ಪೂರಕವಾದ ಹೊಸ ಕಟ್ಟಡ ನಿರ್ಮಾಣವಾಗಬೇಕು. ಆಗ ಪುಸ್ತಕಗಳನ್ನು ವಿಭಾಗವಾರು ಸಂಗ್ರಹಿಸಲು ಅನುಕೂಲವಾಗುತ್ತದೆ. ಇಂದು ಪ್ರತಿ ವರ್ಷ ಸಾವಿರದಿಂದ ಸಾವಿರದೈನೂರು ಪುಸ್ತಕಗಳು ಹೊಸದಾಗಿ ಸೇರ್ಪಡೆಯಾಗುತ್ತವೆ. ಈ ಹಿನ್ನೆಲೆಯಲ್ಲಿ ಇಲಾಖೆ ಮುಂದೆ ಹೊಸ ಕಟ್ಟಡ ನಿರ್ಮಾಣದ ಪ್ರಸ್ತಾವನೆ ಇದೆ ಎಂದು ಮೇಲ್ವಿಚಾರಕಿ ನಿರ್ಮಲಾ ತಿಳಿಸುತ್ತಾರೆ.
ಗ್ರಂಥಾಲಯ ಇರುವ ಜಾಗದ ಕಾರಣಕ್ಕಾಗಿಯೇ ಇಲ್ಲಿಗೆ ಬರುವ ಜನರಿಗೆ ಕೆಲ ಮಟ್ಟಿನ ಸಮಸ್ಯೆ ಉಂಟಾಗುತ್ತಿದೆ. ದೊಡ್ಡ ಸಂಖ್ಯೆಯ ಜನ ಈ ರಸ್ತೆಗೇ ಬರುವುದರಿಂದ ವಾಹನಗಳನ್ನು ಗ್ರಂಥಾಲಯದ ಎದುರು ಪಾರ್ಕ್ ಮಾಡುವುದು ಸಾಮಾನ್ಯವಾಗಿದೆ. ಇದರಿಂದ ಲೈಬ್ರರಿಗೆ ಬರುವವರಿಗೆ ಸಮಸ್ಯೆ ಆಗುತ್ತದೆ. ಕೊನೆ ಪಕ್ಷ ಗ್ರಂಥಾಲಯದ ಗೇಟ್ ಎದುರಾಗಿ ವಾಹನಗಳನ್ನು ನಿಲ್ಲಿಸದಂತೆ ನಿರ್ಬಂಧ ಹೇರಬೇಕಾದ ಅಗತ್ಯವಿದೆ ಎಂದು ರಾಘವೇಂದ್ರ ಸಾಗರ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.