ಸಾಗರ: ನೇರ ಪಾವತಿ ಪೌರ ಕಾರ್ಮಿಕರು ಮತ್ತು ಹೊರಗುತ್ತಿಗೆ ವಿಭಾಗದ ಎಲ್ಲ ನೌಕರರನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ನಗರಸಭೆ ಎದುರು ನೇರಪಾವತಿ ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಶುಕ್ರವಾರ ಆರಂಭಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್, ನೇರಪಾವತಿ ಪೌರ ಕಾರ್ಮಿಕರು ಮತ್ತು ಹೊರಗುತ್ತಿಗೆ ಪೌರ ಕಾರ್ಮಿಕರು ಉದ್ಯೋಗ ಅಭದ್ರತೆಯಲ್ಲಿರುವಂತೆ ಆಗಿದೆ. ಸರ್ಕಾರಕ್ಕೆ ಅನೇಕ ಬಾರಿ ನಮ್ಮನ್ನು ಖಾಯಂಗೊಳಿಸುವಂತೆ ಮನವಿ ಸಲ್ಲಿಸಲಾಗಿದ್ದರೂ ಸರ್ಕಾರ ಇದಕ್ಕೆ ಸ್ಪಂದಿಸದೆ ಇರುವುದು ಖಂಡನೀಯ. ಸರ್ಕಾರ ತಕ್ಷಣ ನೇರಪಾವತಿ ಪೌರ ಕಾರ್ಮಿಕರು ಮತ್ತು ಹೊರಗುತ್ತಿಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಂಪ್ಯೂಟರ್ ಆಪರೇಟರ್, ನೀರು ಸರಬರಾಜುದಾರರು, ಕಸದ ವಾಹನ ಚಾಲಕರು, ಒಳಚರಂಡಿ ವಿಭಾಗದ ನೌಕರರು ಸೇರಿದಂತೆ ಎಲ್ಲರನ್ನೂ ಖಾಯಂಗೊಳಿಸಬೇಕು. ಇಲ್ಲವಾದಲ್ಲಿ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಸಂಘದ ಮಾಜಿ ಅಧ್ಯಕ್ಷ ತಂಗರಾಜ್ ಮಾತನಾಡಿ, ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೇರಪಾವತಿ ಪೌರ ಕಾರ್ಮಿಕರು, ಹೊರಗುತ್ತಿಗೆ ವಿಭಾಗದ ನೌಕರರಿಗೆ ನಿಶ್ಚಿತವಾದ ವೇತನವಿಲ್ಲ. ಜೀವನ ಭದ್ರತೆಗೆ ಬೇಕಾದ ಯಾವುದೇ ಸೌಲಭ್ಯ ಇಲ್ಲವಾಗಿದೆ. ಹಾಲಿ ಕೊಡುತ್ತಿರುವ ವೇತನದಿಂದ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು
.
ಸಂಘದ ಸದಸ್ಯ ರಾಜು, ಸದಸ್ಯೆ ಚೇತನಾ ಮಾತನಾಡಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕಾಮರಾಜ ಎ., ಗೌರವಾಧ್ಯಕ್ಷ ಎಂ.ಮುತ್ತು, ಪ್ರಮುಖರಾದ ದೇವರಾಜ್, ನಾಗರಾಜ್ ವಿ., ವೀರಾ ಆರ್., ಸಿ.ಮೂರ್ತಿ, ರಾಜೇಂದ್ರ, ಮಹೇಶ್ ಎಂ., ತಂಗರಾಜ್, ಸಿ.ಮಣಿಕಂಠ, ರಾಘವೇಂದ್ರ, ಸತೀಶ್, ಮುರುಗೇಶ್, ಆನಂದ್ ಬಾಳೆಕೊಪ್ಪ, ಸುರೇಶ್, ಚೆಲುವಿ, ಸುಲೋಚನಾ ಇನ್ನಿತರರು ಹಾಜರಿದ್ದರು