ಸಾಗರ: ನಾನು ಹಾಸ್ಟೆಲ್ ಒಂದರ ವಾರ್ಡನ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ತನ್ನ ಪ್ರಭಾವದಿಂದ ಕೆಲಸ ಕೊಡಿಸುವುದಾಗಿ ಹೇಳಿ ನಾಲ್ವರು ಮಹಿಳೆಯರನ್ನು ವಂಚಿಸಿದ ಘಟನೆ ನಗರದಲ್ಲಿ ನಡೆದಿದೆ.
ಶಿವಮೊಗ್ಗದ ಸುನೀಲ್ ಎಂಬಾತನಿಗೆ ಶಾಹಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಮಹಿಳೆಯರು ಪರಿಚಿತರಾಗಿದ್ದಾರೆ. ಅವರಿಗೆ ಸುನಿಲ್ ಸುಳ್ಳು ಹೇಳಿ, ನಾನು ಆನಂದಪುರದ ಯಡೇಹಳ್ಳಿಯಲ್ಲಿರುವ ಇಂದಿರಾಗಾಂಧಿ ವಸತಿ ಸಂಸ್ಥೆಯಲ್ಲಿ ಹಾಸ್ಟೆಲ್ ವಾರ್ಡನ್ ಆಗಿರುವೆ. ನಿಮಗೂ ಕೂಡ ಅದೇ ಸಂಸ್ಥೆಯಲ್ಲಿ ಕಂಪ್ಯೂಟರ್ ಆಪರೇಟರ್, ಹೌಸ್ ಕೀಪಿಂಗ್, ಅಡುಗೆ ಸಹಾಯಕರ ಕೆಲಸ ಕೊಡಿಸುತ್ತೇನೆಂದು ಆಮಿಷವೊಡ್ಡಿದ್ದಾನೆ.
ಮಾತಿನ ಮೋಡಿಗೆ ಸಿಲುಕಿಸಿ ಆ ನಾಲ್ವರು ಮಹಿಳೆಯರಿಂದ ಲಕ್ಷಾಂತರ ರೂ. ಹಣ ಪಡೆದಿದ್ದಾನೆ ಎನ್ನಲಾಗಿದೆ. ಈ ರೀತಿಯ ವಂಚನೆಯ ಪ್ರಕರಣದ ಹಿನ್ನೆಲೆಯಲ್ಲಿ ಬುಧವಾರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.