ಅಂಕೋಲಾ : ಸಗಡಗೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಚಿರತೆ ದಾಳಿ ತಡೆಯಲು ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಚರ್ಚಿಸಿ ಸಿಡಿಮದ್ದು ಸಿಡಿಸಿ ಚಿರತೆ ಗ್ರಾಮದ ಕಡೆ ಬಾರದ ಹಾಗೇ ಮಾಡಲು ಕ್ರಮ ಕೈಗೊಂಡಿದ್ದಾರೆ.
ಕಳೆದ ಕೇಲವು ದಿನಗಳಿಂದ ದನಕರುಗಳನ್ನು ಹಿಡಿದು ತಿಂದಿದ್ದು, ಈ ಕುರಿತು ಸಾರ್ವಜನಿಕರು ಅರಣ್ಯ ಇಲಾಖೆಯ ಬಳಿ ಹೇಳಿಕೊಂಡಿದ್ದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ ವಲಯ ಅರಣ್ಯಾಧಿಕಾರಿ ಕೆ.ಡಿ.ನಾಯ್ಕ, ಉಪವಲಯ ಅರಣ್ಯಾಧಿಕಾರಿ ಸತೀಶ ಕಾಂಬಳೆ ಸಗಡಗೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿರತೆ ದಾಳಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯಿಂದ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಪ್ರತಿದಿನ ರಾತ್ರಿ ಸಂದರ್ಭದಲ್ಲಿ ಸಿಬ್ಬಂದಿಗಳು ಈ ಭಾಗದಲ್ಲಿ ಗಸ್ತಿನಲ್ಲಿರುತ್ತಾರೆ. ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಚಿರತೆಯನ್ನು ಹಿಡಿದು ಸ್ಥಳಾಂತರಿಸುವ ವಿಚಾರವಾಗಿ ಗ್ರಾಮಸ್ಥರ ಅಭಿಪ್ರಾಯವನ್ನು ತಿಳಿಸಲಾಗುವುದು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ ತಿಳಿಸಿದರು.
ಇದನ್ನೂ ಓದಿ :‘ಬಾರ್’ ಬೇಡ ಎಂದ ಮಹಿಳಾ ಮಣಿಗಳು, ಬೇಕು ಅಂತಾ ಧರಣಿ ನಡೆಸಿದ ಮದ್ಯಪ್ರಿಯರು
ಗ್ರಾ.ಪಂ. ಅಧ್ಯಕ್ಷೆ ಸೀತಾ ಗೌಡ, ಗ್ರಾ.ಪಂ.ಸದಸ್ಯ ಸುಬ್ಬಯ್ಯ ನಾಯಕ ಪ್ರಮುಖರಾದ ರಾಮು ನಾಯಕ, ದೇವರಾಯ ನಾಯಕ, ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಸಂದೀಪ ಗಾಂವಕರ ಉಪಸ್ಥಿತರಿದ್ದರು.