ಬೆಂಗಳೂರು: ಬನ್ನೇರುಘಟ್ಟ ಜೈವಿಕ ರಾಷ್ಟ್ರೀಯ ಉದ್ಯಾನವನ ಹಾಗೂ ಮೈಸೂರು ಮೃಗಾಲಯ ಸೇರಿ ರಾಜ್ಯದ 9 ಮೃಗಾಲಯ ಹಾಗೂ ಪ್ರಾಣಿ ಸಂಗ್ರಹಾಲಯಗಳಲ್ಲಿರುವ ಒಟ್ಟು 5,247 ಪ್ರಾಣಿ, ಪಕ್ಷಿಗಳ ರಕ್ಷಣೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕೋವಿಡ್-19 ವೈರಸ್ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.
ಈ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಸರ್ಕಾರದ ಪರ ವಕೀಲರು ಗುರುವಾರ ಲಿಖೀತ ಹೇಳಿಕೆ ಸಲ್ಲಿಸಿ ಈ ಮಾಹಿತಿ ನೀಡಿದರು.
ಕರ್ನಾಟಕ ಮೃಗಾಲಯ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಎಲ್ಲಾ 9 ಮೃಗಾಲಯ ಹಾಗೂ ಪ್ರಾಣಿ ಸಂಗ್ರಹಾಲಯಗಳಲ್ಲಿ ಮಾ.15ರಿಂದ ಏ.14ರವರೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಈ ಮೃಗಾಲಯಗಳಲ್ಲಿ 2,825 ಸಸ್ತನಿಗಳು, 1,703 ಪಕ್ಷಿಗಳು ಮತ್ತು 717 ಸರೀಸೃಪಗಳು ಸೇರಿದಂತೆ ಒಟ್ಟು 5,247 ವನ್ಯಜೀವಿಗಳಿವೆ. ಇದಲ್ಲದೇ, 51 ಹುಲಿ, 33 ಸಿಂಹ, 96 ಚಿರತೆ, 15 ಕಾಡುಬೆಕ್ಕು ಸೇರಿದಂತೆ 308 ಅಪರೂಪದ ಪ್ರಾಣಿಗಳಿವೆ. ಅವುಗಳ ರಕ್ಷಣೆಗೆ ಮತ್ತು ಕೋವಿಡ್-19 ಸೋಂಕು ಹರಡದಂತೆ ಎಲ್ಲಾ ಜೈವಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇನ್ನೂ ಆನೆ ಶಿಬಿರಗಳಲ್ಲಿ ಮಾವುತರು ಹಾಗೂ ಕಾವಾಡಿಗರ ಮೂಲಕ ಆನೆಗಳಿಗೆ ಕೋವಿಡ್-19 ಸೋಂಕು ತಗುಲದಂತೆ ಕ್ರಮ ಜರುಗಿಸಲಾಗಿದೆ. ಮೃಗಾಲಯದಲ್ಲಿ ಪ್ರಾಣಿಗಳ ವಾಸಸ್ಥಾನ ಸ್ವಚ್ಛಗೊಳಿಸಿ, ಸ್ಯಾನಿಟೈಸ್ ಮಾಡಲಾಗುತ್ತಿದೆ, ರೋಗನಿರೋಧಕ ಔಷಧಿ ಕೊಡಲಾಗುತ್ತಿದೆ. ಪ್ರವೇಶದ್ವಾರದಲ್ಲಿ ರೋಗಾಣು ನಿರೋಧಕ ದ್ರಾವಣ ಪ್ರತಿದಿನ ಸಿಂಪಡಿಸಲಾಗುತ್ತಿದೆ. ಮೃಗಾಲಯ ಸಿಬ್ಬಂದಿಗೆ ಕೋವಿಡ್-19 ಸೂಕ್ತ ಜಾಗೃತಿ ಮೂಡಿಸಲಾಗುತ್ತಿದೆ. ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್ ನೀಡಲಾಗಿದೆ ಎಂದು ಸರ್ಕಾರದ ಪರ ವಕೀಲರು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮಾಹಿತಿ ನೀಡಿದರು.