Advertisement

ಶಾಲಾ ಮಕ್ಕಳ ಸುರಕ್ಷತೆಗೆ “ಸೇಫ್‌ ಸ್ಕೂಲ್‌ ಝೋನ್‌’ಯೋಜನೆ

12:56 AM Jan 07, 2020 | Sriram |

ಮಹಾನಗರ: ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಲಾ ವಠಾರಗಳು ಇನ್ನು ಮುಂದೆ ಸುರಕ್ಷತಾ ಶಾಲಾ ವಲಯಗಳಾಗಲಿವೆ. ನಗರದ ಮೂರು ಶಾಲೆಗಳ ವ್ಯಾಪ್ತಿಯಲ್ಲಿ ಮುಂದಿನ ಮೂರು ತಿಂಗಳೊಳಗೆ ಈ ಯೋಜನೆ ಪ್ರಾಯೋಗಿಕವಾಗಿ ಜಾರಿಗೊಳ್ಳಲಿದೆ.

Advertisement

ಅಭಿವೃದ್ಧಿ ಹೊಂದುತ್ತಿರುವ ನಗರದಲ್ಲಿ ವಾಹನದಟ್ಟಣೆಯ ಸಮಸ್ಯೆ ತೀವ್ರಗೊಂಡಿದೆ. ಪ್ರಮುಖ ರಸ್ತೆಗಳಲ್ಲಿ ದಿನವಿಡೀ ಟ್ರಾಫಿಕ್‌ ಕಿರಿಕಿರಿ ಉಂಟಾಗುತ್ತಿದೆ. ಅತಿವೇಗದ ವಾಹನ ಸಂಚಾರವೂ ರಸ್ತೆ ದಾಟಲು ಸಂಚಕಾರ ತಂದೊಡ್ಡುತ್ತಿದೆ. ಇದರ ನೇರ ಪರಿಣಾಮ ಉಂಟಾಗುವುದು ಶಾಲಾ ಮಕ್ಕಳ ಮೇಲೆ. ಶಾಲೆ ಇರುವೆಡೆಗಳಲ್ಲಿಯೂ ನಿರಂತರ ಅತಿ ವೇಗದ ವಾಹನ ಸಂಚಾರ ಇರುವುದರಿಂದ ಮಕ್ಕಳಿಗೆ ಆಗುತ್ತಿರುವ ಸಮಸ್ಯೆ ನಿವಾರಣೆಗಾಗಿ ಶಾಸಕ ಡಿ. ವೇದವ್ಯಾಸ ಕಾಮತ್‌ ಅವರು ಸುರಕ್ಷತಾ ಶಾಲಾ ವಲಯ (ಸೇಫ್‌ ಸ್ಕೂಲ್‌ ಝೋನ್‌) ಯೋಜನೆಯನ್ನು ಅನುಷ್ಠಾನಿಸಲು ಮುಂದಾಗಿದ್ದಾರೆ. ಶಾಲಾ ವಠಾರದಲ್ಲಿ ವಾಹನ ಚಾಲಕರಿಗೆ ಶಾಲೆ ಇದೆ ಎಂಬುದನ್ನು ಗುರುತಿಸುವಂತೆ ಮತ್ತು ಅಲ್ಲಿ ನಿಧಾನ ಚಾಲನೆ ಮಾಡಲು ಪ್ರೇರೇಪಿಸುವುದು ಈ ಯೋಜನೆಯ ಉದ್ದೇಶ.

ರಸ್ತೆಗೆ ವೈವಿಧ್ಯ ಬಣ್ಣ
ಶಾಲೆ ಇದೆ ಎಂಬುದು ದೂರದಿಂದ ಬರುವಾಗಲೇ ತಿಳಿಯುವಂತಾಗಲು ರಸ್ತೆಗೆ ಝೀಬ್ರಾ ಕ್ರಾಸಿಂಗ್‌ (ಬಿಳಿ ಬಣ್ಣ) ಬಳಿಯುವುದರೊಂದಿಗೆ ಹೆಚ್ಚುವರಿ ಬಣ್ಣಗಳ ಪೈಂಟಿಂಗ್‌, ಜಂಕ್ಷನ್‌ಗಳನ್ನು ಸಂಪರ್ಕಿಸುವ ನಾಲ್ಕೂ ಕಡೆಯ ರಸ್ತೆಗಳಿಗೂ ಈ ರೀತಿ ಪೈಂಟಿಂಗ್‌ ಮಾಡಲಾಗುತ್ತದೆ. ಸುಸಜ್ಜಿತ ಬ್ಯಾರಿಕೇಡ್‌, ಪಾರ್ಕಿಂಗ್‌ ಸಹಿತ ಶಾಲೆಯ ವ್ಯಾಪ್ತಿಯ ಎಲ್ಲ ರಸ್ತೆಗಳಲ್ಲಿಯೂ ವ್ಯವಸ್ಥಿತವಾಗಿ ಸೂಚನಾ ಫಲಕ, ನಾಮಫಲಕಗಳನ್ನು ಅಳವಡಿಸಲಾಗುತ್ತದೆ. ಫುಟ್‌ಪಾತ್‌ ವ್ಯವಸ್ಥೆ, ಸರಿಯಾದ ಟ್ರಾಫಿಕ್‌ ಸಿಗ್ನಲ್‌ ಅಳವಡಿಸುವುದು ಮಾಡಲಾಗುತ್ತದೆ. ಶಾಲಾ ವಠಾರಗಳಲ್ಲಿ ಇಂತಹ ವ್ಯವಸ್ಥೆಯನ್ನು ಮಾಡುವುದರಿಂದ ವಾಹನ ಚಾಲಕರಿಗೂ ಇಲ್ಲಿ ಶಾಲೆ ಇದೆ ಎಂಬುವುದು ಗೊತ್ತಾಗಿ ವೇಗ ಕಡಿಮೆ ಮಾಡುತ್ತಾರೆ. ಇದರಿಂದ ಶಾಲೆ ಮಕ್ಕಳು ರಸ್ತೆ ದಾಟಲು ಮತ್ತು ಓಡಾಡಲು ಸುಗಮವಾಗುತ್ತದೆ.

ಮೂರು ಶಾಲೆಗಳಲ್ಲಿ ಪ್ರಾಯೋಗಿಕ ಜಾರಿ
ಲೇಡಿಹಿಲ್‌ ವಿಕ್ಟೋರಿಯಾ, ಶಾರದಾ ವಿದ್ಯಾಲಯ, ಕೆನರಾ ಕಾಲೇಜು, ಸಂತ ಆ್ಯಗ್ನೆಸ್‌ ಶಾಲೆ, ಸೈಂಟ್‌ ಅಲೋಶಿಯಸ್‌ ಶಾಲೆ ಸಹಿತ ಹೆಚ್ಚು ಜನ ಓಡಾಟ ಇರುವ, ಹೆಚ್ಚು ಟ್ರಾಫಿಕ್‌ ಇರುವ ಕೆಲವು ಶಾಲಾ ವಠಾರಗಳಲ್ಲಿ ಸುರಕ್ಷತಾ ಶಾಲಾ ವಲಯ ಮಾಡುವ ಯೋಚನೆ ಇದೆ. ಮಾರ್ಚ್‌ ಅಥವಾ ಎಪ್ರಿಲ್‌ ತಿಂಗಳೊಳಗೆ ಮೂರು ಶಾಲೆಗಳ ವಠಾರದಲ್ಲಿ ಪ್ರಾಯೋಗಿಕವಾಗಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು. ಆದರೆ ಮೂರು ಶಾಲೆಗಳ ಆಯ್ಕೆ ಇನ್ನಷ್ಟೆ ನಡೆಯಬೇಕಿದೆ ಎಂದು ಶಾಸಕರು “ಉದಯವಾಣಿ-ಸುದಿನ’ಕ್ಕೆ ತಿಳಿಸಿದ್ದಾರೆ.

ಸಿಎಸ್‌ಆರ್‌ ಫಂಡ್‌ ನೀಡಲು ಮನವಿ
ಯೋಜನೆ ಅನುಷ್ಠಾನಕ್ಕೆ ಸರಕಾರಿ ಅನುದಾನ ಬಳಕೆಗೆ ಇರುವ ಸಾಧ್ಯತೆಗಳ ಬಗ್ಗೆ ಚರ್ಚಿಸಲಾಗುವುದು. ಕಾರ್ಪೊರೇಟ್‌ ಸಂಸ್ಥೆಗಳು ಕಾರ್ಪೊರೇಟ್‌ ಸಾಮಾಜಿಕ ಬದ್ಧತೆ ನಿಧಿಯಡಿ ಹಣಕಾಸಿನ ನೆರವು ನೀಡಲು ಮುಂದಾದರೆ ಹೆಚ್ಚು ಅನುಕೂಲ. ಈ ನಿಟ್ಟಿನಲ್ಲಿಯೂ ಪ್ರಯತ್ನಪಡಲಾಗುತ್ತಿದ್ದು, ಈಗಾಗಲೇ ಸಾಮಾಜಿಕ ತಾಣಗಳಲ್ಲಿ ಈ ಬಗ್ಗೆ ಸಂದೇಶ ರವಾನಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Advertisement

300 ಮೀ. ವ್ಯಾಪ್ತಿ
ರಸ್ತೆ ಬದಿಯಲ್ಲಿರುವ, ಪ್ರಮುಖ ಜಂಕ್ಷನ್‌ಗಳ ಸನಿಹವಿರುವ ಶಾಲೆಗಳ 300 ಮೀ. ವ್ಯಾಪ್ತಿಯನ್ನು ಸುರಕ್ಷತಾ ವಲಯವಾಗಿ ಮಾಡಲಾಗುತ್ತದೆ. ಶಾಲಾ ವಠಾರದಲ್ಲಿ ಸುರಕ್ಷತಾ ಶಾಲಾ ವಲಯ ಯೋಜನೆಯ ಯಶಸ್ಸು ನೋಡಿಕೊಂಡು ಮುಂದೆ ಆಸ್ಪತ್ರೆಗಳ ವಠಾರದಲ್ಲಿಯೂ ಇದನ್ನು ಅನುಷ್ಠಾನಗೊಳಿಸುವುದು ಶಾಸಕರ ಕನಸು.

ಹಂತಹಂತವಾಗಿ ಜಾರಿಗೆ ಚಿಂತನೆ
ನಗರದಲ್ಲಿ ವಾಹನದಟ್ಟಣೆ ಹೆಚ್ಚುತ್ತಿದೆ. ಪ್ರಮುಖ ರಸ್ತೆ, ಜಂಕ್ಷನ್‌ಗಳಲ್ಲಿರುವ ಶಾಲೆಗಳ ಮಕ್ಕಳಿಗೆ ಇದರಿಂದ ಸಮಸ್ಯೆಯಾಗುತ್ತಿದೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಾಲೆಗಳ 300 ಮೀ. ವಲಯದಲ್ಲಿ ಸುರಕ್ಷತಾ ಶಾಲಾ ವಲಯ ಮಾಡುವ ಯೋಜನೆಯಿದೆ. ಮುಂದಿನ ಮೂರು ತಿಂಗಳಲ್ಲಿ ಮೂರು ಶಾಲೆಗಳಲ್ಲಿ ಇದು ಪ್ರಾಯೋಗಿಕವಾಗಿ ಜಾರಿಗೊಳ್ಳಲಿದೆ. ಬಳಿಕ ಹಂತಹಂತವಾಗಿ ಮಂಗಳೂರು ದಕ್ಷಿಣ ವ್ಯಾಪ್ತಿಯ ಎಲ್ಲ ಶಾಲೆಗಳ ವಠಾರದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುವುದು.
 - ಡಿ. ವೇದವ್ಯಾಸ ಕಾಮತ್‌, ಶಾಸಕರು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ

-ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next