Advertisement

ಸಿಂಗಾಪುರಕ್ಕೆ ಹಾರಿದ ಸಫಾಯಿ ಸಿಪಾಯಿಗಳು

12:30 PM Oct 12, 2017 | Team Udayavani |

ಬೆಂಗಳೂರು: ಅಧ್ಯಯನ ಪ್ರವಾಸಕ್ಕೆ ಸಿಂಗಾಪೂರಕ್ಕೆ ತೆರಳಲಿರುವ ಬಿಬಿಎಂಪಿ ಪೌರಕಾರ್ಮಿಕರ ತಂಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ವಿಧಾನಸೌಧದಲ್ಲಿ ಶುಭ ಕೋರಿ, ಅಧ್ಯಯನ ಪ್ರವಾಸ ಯಶಸ್ವಿಯಾಗಲಿ ಎಂದು ಹಾರೈಸಿದರು.

Advertisement

ಬಿಬಿಎಂಪಿಯ ದಕ್ಷಿಣ ವಲಯದ 39 ಪೌರ ಕಾರ್ಮಿಕರ ಹಾಗೂ 3 ಪರಿಸರ ಅಧಿಕಾರಿಗಳು ಸೇರಿ ಒಟ್ಟು 42 ಮಂದಿಯ ತಂಡ ನಾಲ್ಕು ದಿನಗಳ ಅಧ್ಯಯನ ಪ್ರವಾಸಕ್ಕೆ ಅ.24ರಂದು ಸಿಂಗಾಪೂರಕ್ಕೆ ತೆರಳಲಿದೆ. ಈ ತಂಡದ ಬೀಳ್ಕೊಡುಗೆಗಾಗಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ಸಿಎಂ ಪಾಲ್ಗೊಂಡು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ, ಪೌರಾಡಳಿತ ಸಚಿವ ಈಶ್ವರ್‌ ಖಂಡ್ರೆ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌, ಅರಣ್ಯ ಸಚಿವ ರಮಾನಾಥ್‌ ರೈ, ಎಂಎಸ್‌ಐಎಲ್‌ ಅಧ್ಯಕ್ಷ ಹಂಪನಗೌಡ ಬಾದರ್ಲಿ, ಮೇಯರ್‌ ಸಂಪತ್‌ರಾಜ್‌, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌, ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಸೇರಿದಂತೆ ನಗರಾಭಿವೃದ್ಧಿ, ಪೌರಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈಗಾಗಲೇ ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಂದ 5 ತಂಡಗಳಲ್ಲಿ 215 ಪೌರಕಾರ್ಮಿಕರು ವಿದೇಶಿ ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸದ ಸಂಘಟನೆ ಮತ್ತು ಸಹಕಾರಕ್ಕೆ ಕರ್ನಾಟಕದ ಸಿಟಿ ಮ್ಯಾನೇಜರ್ ಅಸೋಸಿಯೇಷನ್‌ ನೇಮಿಸಲಾಗಿದೆ. ಈ ಸಂಸ್ಥೆಯು ವಿಶ್ವ ಸಂಸ್ಥೆಯ ಅಂಗ ಸಂಸ್ಥೆಯಾಗಿರುವ “ವರ್ಲ್ಡ್ ಟಾಯೆಲೆಟ್‌ ಆರ್ಗನೈಝೇಷನ್‌’ ಜೊತೆ ಗೂಡಿ ಪ್ರವಾಸ ಸಂಘಟಿಸ ಲಿದೆ. ಎಂಎಸ್‌ಐಎಲ್‌ ಸಂಸ್ಥೆಯು ವೀಸಾ ಪ್ರಕ್ರಿಯೆ, ವಿಮಾನ ಪ್ರಯಾಣ, ವಸತಿ, ಊಟ ಹಾಗೂ ಇತರೆ ವ್ಯವಸ್ಥೆಯನ್ನು ನಿರ್ವಹಿಸುತ್ತಿದೆ. ಮಂತ್ರಿಗಳು, ಶಾಸಕರು, ಅಧಿಕಾರಿಗಳಿಗೆ ಮಾತ್ರ ಸಿಮೀತವಾಗಿದ್ದ ವಿದೇಶಿ ಅಧ್ಯಯನ ಪ್ರವಾಸದ ಅವಕಾಶವನ್ನು ಪೌರಕಾರ್ಮಿಕರಿಗೂ ಒದಗಿಸಲು ಸರ್ಕಾರ 2016ರಲ್ಲಿ ನಿರ್ಧರಿಸಿತ್ತು. ಅದರಂತೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಬಿಬಿಎಂಪಿಯಿಂದ ಒಟ್ಟು 1 ಸಾವಿರ ಪೌರ ಕಾರ್ಮಿಕರು ಹಾಗೂ ಇವರ ಜೊತೆಗೆ 40 ಅಧಿಕಾರಿಗಳ ತಂಡವನ್ನು ವಿವಿಧ ಹಂತಗಳಲ್ಲಿ ಅಧ್ಯಯನ ಪ್ರವಾಸಕ್ಕೆ ಕಳಿಸಲಾಗುತ್ತಿದೆ.

ಇದರಲ್ಲಿ ಬಿಬಿಎಂಪಿ 198 ವಾರ್ಡ್‌ಗಳಲ್ಲಿ ವಾರ್ಡ್‌ಗೆ ಒಬ್ಬರಂತೆ, 10 ಮಹಾನಗರ ಪಾಲಿಕೆಗಳಲ್ಲಿ ಒಂದು ಮಹಾನಗರ ಪಾಲಿಕೆಯಿಂದ ತಲಾ 6, 57 ನಗರಸಭೆಗಳಿಂದ ಒಂದು ನಗರಸಭೆಯಿಂದ ತಲಾ 4, 117 ಪುರಸಭೆಗಳಿಂದ ಒಂದು ಪುರಸಭೆಯಿಂದ ತಲಾ 3 ಹಾಗೂ 91 ಪಟ್ಟಣ ಪಂಚಾಯಿತಿಗಳಿಂದ ಒಂದು ಪಂಚಾಯಿತಿಯಿಂದ ತಲಾ 1-2 ಪೌರ ಕಾರ್ಮಿಕರನ್ನು ಪ್ರವಾಸಕ್ಕೆ ಕಳಿಸುವ ಯೋಜನೆ ರೂಪಿಸಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next