ತೇರದಾಳ: ಒಂದು ಕೈಯಲ್ಲಿ ಪೂಜೆಗಾಗಿ ಲಿಂಗ (ಧರ್ಮ ಪ್ರಸಾರ), ಇನ್ನೊಂದು ಕೈಯಲ್ಲಿ ಸಾಮಾಜಿಕ ಅಭಿವೃದ್ಧಿಗಾಗಿ ಶಿಕ್ಷಣ. ಹೀಗೆ ಹಿಡಿದ ಸ್ವಾಮಿಗಳಿಂದ ಮಾತ್ರ ಸಮಾಜ ಶೈಕ್ಷಣಿಕವಾಗಿ ಉದ್ಧಾರವಾಗಲು ಸಾಧ್ಯ. ಹಾಗೆಯೇ ಹಳಿಂಗಳಿ ಕಮರಿ ಮಠ ಶೈಕ್ಷಣಿಕ ಬೆಳವಣಿಗೆ ಧಾರ್ಮಿಕ ಕ್ಷೇತ್ರವಾಗಿ ಬೆಳೆದು ನಿಂತಿದೆ ಎಂದು ನಿಡಸೋಸಿ ಸಿದ್ಧಸಂಸ್ಥಾನ ಮಠದ ಜಗದ್ಗುರು ಪಂಚಮಲಿಂಗೇಶ್ವರ ಸ್ವಾಮೀಜಿ ಹೇಳಿದರು.
ಹಳಿಂಗಳಿ ಗ್ರಾಮದ ಕಮರಿ ಮಠದ ನೆರಳಲ್ಲಿ ಬೆಳೆದು ನಿಂತ ಸದ್ಗುರು ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ರಜತ ಮಹೋತ್ಸವ ನಿಮಿತ್ತ ಹಮ್ಮಿಕೊಂಡ ಹಳಿಂಗಳಿ ಬೆಳ್ಳಿ ಬೆಳಗು ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಕತ್ತಲೆಯಿಂದ ಕೂಡಿದ ಸಮಾಜದಲ್ಲಿ ಶಿಕ್ಷಣದ ಬೆಳಕು ಬೀರಲು ಮಠಗಳಿಂದ ಮಾತ್ರ ಸಾಧ್ಯ ಎಂದರು. ಶೈಕ್ಷಣಿಕ ಪರಂಪರೆಯಲ್ಲಿ ನಾಡಿನಲ್ಲಿ ಕಮರಿ ಮಠದ ಶಿವಾನಂದ ಅಜ್ಜನವರ ಶ್ರಮ ಅನನ್ಯ ಎಂದರು.
ಸ್ಮರಣ ಸಂಚಿಕೆ ಗ್ರಂಥ ಲೋಕಾರ್ಪಣೆ ಮಾಡಿದ ಇಳಕಲ್ ಗುರುಮಹಾಂತ ಶ್ರೀ, ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಎಸ್.ಆರ್. ಮನಹಳ್ಳಿ, ಷಟಸ್ಥಲ ಧ್ವಜಾರೋಹಣ ನೆರವೇರಿಸಿದ ಮರೆಗುದ್ದಿ ನಿರುಪಾಧಿಧೀಶ ಸ್ವಾಮೀಜಿ, ಅಧ್ಯಕ್ಷತೆ ವಹಿಸಿದ್ದ ಓಲೆಮಠ ಚನ್ನಬಸವ ಶ್ರೀ ಮಾತನಾಡಿ, ನಿಷ್ಠೆಯ ಕಠೊರ ಕಾಯಕದ ಮೂಲಕ ಶಿಕ್ಷಣ, ಅನ್ನದಾಸೋಹ ಕಲ್ಲು-ಗುಡ್ಡಗಳ ಬದಿಯಲ್ಲಿರುವ ಅನಕ್ಷರಸ್ಥ ಮಕ್ಕಳಿಗೆ ನೀಡಿ, ಗ್ರಾಮವೊಂದನ್ನು ಶೈಕ್ಷಣಿಕವಾಗಿ ಶ್ರೀಮಂತ ನಗರವನ್ನಾಗಿಸಿದ ಶಿವಾನಂದ ಶ್ರೀಗಳ ಸಾಧನೆ ಗುರುತಾಗಿ 25 ವರ್ಷಗಳ ಸಾರ್ಥಕ ಸೇವೆ ಪ್ರತಿಫಲವೇ ಈ ಹಳಿಂಗಳಿ ಬೆಳ್ಳಿಬೆಳಗು ಕಾರ್ಯಕ್ರಮ ಎಂದರು.
ಇದಕ್ಕೂ ಮೊದಲು ವೇದಿಕೆ ಮೇಲೆ ಇಪ್ಪತ್ತೈದು ವಿರಕ್ತ ಮಠಾಧಿಧೀಶರ ಪಾದಪೂಜೆ ಮಾಡಲಾಯಿತು. ಓಲೆಮಠ ಚನ್ನಬಸವ ಶ್ರೀ ಮಾರ್ಗದರ್ಶನದಲ್ಲಿ ಅಶೋಕ ನರೋಡೆ ಸಂಪಾದಿಸಿದ ‘ಹಳಿಂಗಳಿಯ ಬೆಳ್ಳಿಬೆಳಗು’ 25 ವರ್ಷಗಳ ಸಾರ್ಥಕ ಸೇವೆಯ ಸ್ಮರಣ ಸಂಚಿಕೆ ಲೋಕಾರ್ಪಣೆಗೊಂಡಿತು.
ಹಳಿಂಗಳಿಯ ಶಿವಾನಂದ ಶ್ರೀ, ಚಿಕ್ಕೋಡಿ ಸಂಪಾದನಾ ಶ್ರೀ, ಅಮೀನಗಡ ಶಂಕರರಾಜೇಂದ್ರ ಶ್ರೀ, ಸೋಲ್ಲಾಪುರ ಸ್ವಾಮಿನಾಥ ಶ್ರೀ, ಮರೆಗುದ್ದಿ ಗುರುಪಾದ ಶ್ರೀ, ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯರು, ರಬಕವಿ ಗುರುದೇವ ಬ್ರಹ್ಮಾನಂದಾಶ್ರಮದ ಗುರುಸಿದ್ಧೇಶ್ವರ ಶ್ರೀ, ವಿರಕ್ತಮಠದ ಗುರುಮಹಾಂತ ಶ್ರೀ ಸೇರಿದಂತೆ ಶಾಸಕ ಸಿದ್ದು ಸವದಿ, ಮಾಜಿ ಸಚಿವೆ ಉಮಾಶ್ರೀ, ಎಸ್.ಆರ್. ಮನಹಳ್ಳಿ, ಬಿ.ಎ. ದೇಸಾಯಿ, ಬಾಬುಗೌಡ ಪಾಟೀಲ, ಸುರೇಶ ಅಕ್ಕಿವಾಟ, ಗ್ರಾಪಂ ಅಧ್ಯಕ್ಷ ಪರಪ್ಪ ಹಿಪ್ಪರಗಿ ಇದ್ದರು. ಸ್ವಾಗತಿ ಸಮಿತಿ ಅಧ್ಯಕ್ಷ ಶಾಸಕ ಸಿದ್ದು ಸವದಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿಯರು ಪ್ರಾರ್ಥಿಸಿದರು. ಎಂ.ಕೆ. ಮೇಗಾಡಿ ನಿರೂಪಿಸಿದರು. ಪ್ರಾಂಶುಪಾಲ ವೈ.ಎಚ್. ಅಲಾಸ್ ವಂದಿಸಿದರು.