ಬೆಂಗಳೂರು: ಕೇಂದ್ರ ಸರಕಾರವು 13 ಪ್ರಮುಖ ನದಿಗಳನ್ನು ಪುನರುಜ್ಜೀವಗೊಳಿಸುವ ಕೈಗೊಂಡಿರುವ ಯೋಜನೆಗೆ ಈಶಾ ಪ್ರತಿಷ್ಠಾನದ ಮುಖ್ಯಸ್ಥ ಸದ್ಗುರು ಶುಭ ಹಾರೈಸಿದ್ದು, ಇದಕ್ಕೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ನಿಮ್ಮ ಶುಭ ಹಾರೈಕೆಗೆ ಕೃತಜ್ಞತೆಗಳು. ನಮಗೆ ನಿಮ್ಮ ದೂರದೃಷ್ಟಿ, ಮಾರ್ಗದರ್ಶನ ಹಾಗೂ ಪರಿಸರಕ್ಕೆ ಸಂಬಂಧಿಸಿ ನೀವು ಮಾಡುತ್ತಿರುವ ಎಲ್ಲ ಕ್ರಮಗಳು ಪ್ರೇರಣೆಯಾಗಿವೆ ಎಂದು ಸಚಿವರು ಹೇಳಿದ್ದಾರೆ.
ಸದ್ಗುರು ನೇತೃತ್ವದಲ್ಲಿ ನಡೆಯುತ್ತಿರುವ “ರ್ಯಾಲಿ ಫಾರ್ ರಿವರ್’ ನಮ್ಮ ಯೋಜನೆಗೆ ಸ್ಫೂರ್ತಿಯಾಗಿದೆ. ಇದರ ಆಧಾರದಲ್ಲಿಯೇ ಸರಕಾರವು ನದಿಗಳ ಪುನರುಜ್ಜೀವನ ಯೋಜನೆಗೆ ಡಿಪಿಆರ್ ಸಿದ್ಧಪಡಿಸಿದೆ ಎಂದು ಸಚಿವರು ತಿಳಿಸಿದ್ದಾರೆ.
ರ್ಯಾಲಿ ಫಾರ್ ರಿವರ್‌ಗೆ ಮಾನ್ಯತೆ ನೀಡಿ, ಅದರ ಅಂಶಗಳನ್ನು ನದಿಗಳ ಪುನರುಜ್ಜೀವನ ಯೋಜನೆಯಲ್ಲಿ ಸೇರಿಸಿರುವ ಸರಕಾರದ ಕ್ರಮವನ್ನು ಸದ್ಗುರು ಸ್ವಾಗತಿಸಿದ್ದಾರೆ.
ನದಿಗಳ ರಕ್ಷಣೆ ಉದ್ದೇಶದಲ್ಲಿ ರ್ಯಾಲಿ ಫಾರ್ ರಿವರ್ ಅಭಿಯಾನವನ್ನು ಸದ್ಗುರು ಅವರು 2017ರ ಸೆ. 3ರಂದು ಆರಂಭಿಸಿದ್ದರು. ಭಾರತದ ನದಿಗಳ ಪುನರುಜ್ಜೀವನ ಸಂಬಂಧಿಸಿ ಕರಡು ನೀತಿಯನ್ನು ಕೂಡ ಸದ್ಗುರು ಅವರು 2017ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಿಸಿದ್ದರು. ಅದನ್ನು ಕೇಂದ್ರ ಸರಕಾರ ಪೂರಕವಾಗಿ ಪರಿಗಣಿಸಿ ಹೊಸ ಯೋಜನೆ ರೂಪಿಸಿದೆ.