ಬೆಂಗಳೂರು: ಬಹು ನಿರೀಕ್ಷಿತ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ರಾಜಕೀಯ ನಾಯಕರು ಮತದಾರರ ಓಲೈಕೆ ಆರಂಭಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ರಾಜಕೀಯ ಪ್ರಚಾರದ ಹೊಸ ಅಸ್ತ್ರ. ಚುನಾವಣೆಗೆ ಮುನ್ನ ಜನರ ಅಭಿಮತ ತಿಳಿಯಲು ಪಕ್ಷಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಲಿಂಗ್ ಕೂಡಾ ಮಾಡುತ್ತವೆ. ಈಗ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಫೇಸ್ ಬುಕ್ ಪೋಲಿಂಗ್ ನಡೆಸಿ ಮುಜುಗರಕ್ಕೀಡಾಗಿದೆ.
ಬೆಂಗಳೂರು ಉತ್ತರ ಲೋಕಸಭಾ ವ್ಯಾಪ್ತಿಯ ಟಿ ದಾಸರಹಳ್ಳಿ ವಾರ್ಡ್ ನ ಫೇಸ್ ಬುಕ್ ಖಾತೆಯಲ್ಲಿ ಮಾರ್ಚ್ ಐದರಂದು ಈ ಪೋಲ್ ನಡೆಸಲಾಗಿದೆ. ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡರು ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸುವ ಸುಳಿವು ನೀಡಿರುವುದರಿಂದ ಈ ಪೋಲ್ ಮಾಡಲಾಗಿದೆ.
ಕ್ಷೇತ್ರದ ಹಾಲಿ ಸಂಸದ ಬಿಜೆಪಿಯ ಡಿ.ವಿ.ಸದಾನಂದ ಗೌಡರು ಮತ್ತು ಹೆಚ್.ಡಿ.ದೇವೇಗೌಡರ ಫೋಟೋಗಳನ್ನು ಹಾಕಿ, ಬೆಂಗಳೂರು ಉತ್ತರ ಲೋಕಸಭಾ ಚುಣಾವಣೆಯ ಅಭ್ಯರ್ಥಿಗಳಲ್ಲಿ ನಿಮ್ಮ ಆಯ್ಕೆ ಯಾರು ಎಂದು ಪ್ರಶ್ನೆ ಕೇಳಲಾಗಿದೆ.
ಇಲ್ಲಿಯವರೆಗೆ ಒಟ್ಟು 38 ಸಾವಿರ ಜನರು ಇದಕ್ಕೆ ವೋಟ್ ಮಾಡಿದ್ದು, ವಿಪರ್ಯಾಸವೆಂದರೆ ಜೆಡಿಎಸ್ ನಡೆಸಿದ ಪೋಲ್ ನಲ್ಲಿ ಬಿಜೆಪಿ ಅಭ್ಯರ್ಥಿ ಬಹುಮತ ಪಡೆದಿದ್ದಾರೆ. ಸದಾನಂದ ಗೌಡರು 64 % ಮತ ಪಡೆದರೆ, ದೇವೇಗೌಡರು ಪಡೆದಿರುವುದು 36 % ಮಾತ್ರ. ಇದಕ್ಕೆ ಸಾಕಷ್ಟು ಪ್ರತಿಕ್ರಿಯೆ ಗಳು ಕೂಡಾ ಬಂದಿದ್ದು, ಹೆಚ್ಚಿನವು ಬಿಜೆಪಿ ಪರವಾಗಿದೆ.