Advertisement

ವೃದ್ದಾಶ್ರಮಗಳ ಹೆಚ್ಚಳ ಖೇದಕರ : ಸಿಎಂ ಬಸವರಾಜ ಬೊಮ್ಮಾಯಿ

05:48 PM Oct 01, 2022 | Team Udayavani |

ಬೆಂಗಳೂರು: ಆರೋಗ್ಯ ಬಹಳ ಮುಖ್ಯ. ಆರೋಗ್ಯ ಗಟ್ಟಿಯಾಗಿದ್ದರೆ ಎಲ್ಲ ಕೆಲಸಗಳನ್ನು ಮಾಡಬಹುದು. ಹೀಗಾಗಿ ಹಿರಿಯರ ಆರೋಗ್ಯಕ್ಕಾಗಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಹಿರಿಯ ನಾಗರಿಕರ ಸೇವಾಭತ್ಯೆಯನ್ನು ಹೆಚ್ಚಿಗೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಹೇಳಿದರು.

Advertisement

ಇದನ್ನೂ ಓದಿ: ಯಾತ್ರೆಗೆ ಇಷ್ಟು ಹಣ ಖರ್ಚು ಮಾಡುವ ರಾಹುಲ್ ಕೋವಿಡ್ ಸಮಯದಲ್ಲಿ ಎಲ್ಲಿದ್ದರು: ರೇಣುಕಾಚಾರ್ಯ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿರಿಯ ನಾಗರಿಕರ ಮಾಶಾಸನವನ್ನು ನಾನು ಮುಖ್ಯಮಂತ್ರಿಯಾದ ನಾಲ್ಕು ಗಂಟೆಯಲ್ಲಿ ಹೆಚ್ಚಿಗೆ ಮಾಡಿದ್ದೇನೆ. ಅಂಗವಿಕಲರ ಮಾಶಾಸನ ಹೆಚ್ಚಿಗೆ ಮಾಡಿದ್ದೇನೆ. ಅವರು ಸ್ವಾಭಿಮಾನದಿಂದ ಬದುಕುವಂತೆ ಮಾಡಲು ಮಾಶಾಸನ ಹೆಚ್ಚಳ ಮಾಡಿದ್ದೇನೆ. ಆರೋಗ್ಯ ಇಲಾಖೆಯಿಂದ 60 ವರ್ಷ ಆದವರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ವರ್ಷದಲ್ಲಿ ಎರಡು ಬಾರಿ ಮಾಡಲಾಗುತ್ತಿದೆ. ಈ ತಪಾಸಣೆಯ ವೇಳೆಯಲ್ಲಿ ಅವರಿಗೆ ಆರೋಗ್ಯ ತೊಂದರೆಯಿದ್ದರೆ, ಅದಕ್ಕೆ ಸರ್ಕಾರದ ವೆಚ್ಚದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ಅಲ್ಲದೇ ರಾಜ್ಯದಲ್ಲಿ ಉಚಿತವಾಗಿ ಕಣ್ಣಿನ ತಪಾಸಣೆಯನ್ನು ಮಾಡುತ್ತಿದ್ದೇವೆ. ಈ ಸಂದರ್ಭದಲ್ಲಿ ಶಸ್ತ್ರ ಚಿಕಿತ್ಸೆ ಹಾಗೂ ಕನ್ನಡಕ ನೀಡುವ ಮೂಲಕ ದೃಷ್ಠಿ ಸಮಸ್ಯೆ ನಿವಾರಣೆಗೆ ಕಾರ್ಯಕ್ರಮ ರೂಪಿಸಿದ್ದೇವೆ. ಕಿವಿ ಕೇಳಿಸದ ಹಿರಿಯ ನಾಗರೀಕರಿಗೆ 500 ಕೋಟಿ ರೂ. ವೆಚ್ಚದಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ನೀಡುವ ಕಾರ್ಯಕ್ರಮ ಮಾಡಿದ್ದೇವೆ. ವಯಸ್ಸಾದ ಮೇಲೆ ಡಯಾಲಿಸಸ್ ಗೆ ಹಿರಿಯರು ಹೋಗುತ್ತಾರೆ. ಹಿರಿಯ ನಾಗರೀಕರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಹೇಳಿ, 30 ಸಾವಿರ ಸೈಕಲ್ ಇತ್ತು. ಅದನ್ನು 60 ಸಾವಿರಕ್ಕೆ ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ಕ್ಯಾನ್ಸರ್ ಕಿಮಿಯೋಥೆರಪಿ ಎರಡು ಪಟ್ಟು ಹೆಚ್ಚಿಸಿದ್ದೇವೆ. 12 ಹೊಸ ಕ್ಯಾನ್ಸರ್ ಕೇಂದ್ರಗಳನ್ನು ಪ್ರಾರಂಭ ಮಾಡುತ್ತಿದ್ದೇವೆ ಎಂದರು.

ಸಮಾಜದಲ್ಲಿ ಮನುಷ್ಯನಿಗೆ ಹಲವಾರು ಹೆಸರು, ಬಿರುದುಗಳಿದ್ದಾವೆ. ಮಕ್ಕಳು, ಕಿರಿಯರು, ಯುವಕರು, ಹಿರಿಯರು ಹೀಗೆ ವಯಸ್ಸಿನ ಆಧಾರದ ಮೇಲೆ ನಾಮಕರಣ ಆಗುತ್ತದೆ. ಆದರೆ ನಮ್ಮ ಬದುಕಿನಲ್ಲಿ ನಾವು ಯಾವ ರೀತಿ ನಮ್ಮ ಜೀವನ ಶೈಲಿಯನ್ನು ನಡೆಸುತ್ತೇವೆ, ಅದರ ಮೇಲೆ ನಾವು ಹಿರಿಯರು, ಕಿರಿಯರು ಎಂಬುದು ನಿರ್ಧಾರ ಆಗುತ್ತದೆ. ನನಗಿಂತ ಹತ್ತಾರು ಜನರು ಹಿರಿಯರಿದ್ದಾರೆ. ಅವರ ಜೀವನಶೈಲಿ ಕ್ರೀಯಾಶೀಲ ಚಟುವಟಿಕೆಯಿಂದ ಕೂಡಿದೆ. ಅವರಿಗೆ ಯಾವತ್ತು ಹಿರಿಯರು ಎನ್ನಲು ಆಗುವುದಿಲ್ಲ. ಆ ರೀತಿಯಲ್ಲಿ ಅವರು ಕೆಲಸವನ್ನು ಮಾಡುತ್ತಾರೆ. ಅದಕ್ಕೆ ಉದಾಹರಣೆ ನಮ್ಮ ವಿ. ಸೋಮಣ್ಣ ಅವರು. ವಿ. ಸೋಮಣ್ಣ ಅವರಿಗೆ ಎಷ್ಟು ವಯಸ್ಸಾಗಿದೆ ಅನ್ನುವುದನ್ನು ನನಗೆ ಕಂಡು ಹಿಡಿಯಲು ಆಗಿಲ್ಲ. ಅವರು ಎಲ್ಲರದಲ್ಲೂ ಯುವಕರಿಗಿಂತ ಮುಂದೆ ಇರುತ್ತಾರೆ. ವಿಶ್ರಾಂತಿ ಇಲ್ಲದೇ ನಿರಂತರವಾಗಿ ಕೆಲಸ ಮಾಡುತ್ತಾರೆ. ಇಂತಹ ಅನೇಕ ಹಿರಿಯರು ನಮ್ಮ ಜೊತೆಗೆ ಇದ್ದಾರೆ. ಅತ್ಯಂತ ಕ್ರೀಯಾಶೀಲರಾಗಿ ಪಾದರಸದಂತೆ ಓಡಾಡುವ ಹಿರಿಯರು ಇದ್ದಾರೆ ಎಂದರು.

Advertisement

ಆದರೆ, ನಮ್ಮ ಯುವಕರು ಕಂಪ್ಯೂಟರ್ ಮತ್ತು ಐಪ್ಯಾಡ್ ಮುಂದೆ ಕುಳಿತರೆ ಅದನ್ನು ಬಿಟ್ಟು ಅಲುಗಾಡುವುದಿಲ್ಲ. ಎಷ್ಟರಮಟ್ಟಿಗೆ ವಸ್ಯನಿಗಳಾಗಿದ್ದಾರೆ ಎಂದರೆ, ಎಲ್ಲ ಕೆಲಸಗಳನ್ನು ಅದರ ಮುಂದೆಯೇ ಮಾಡುತ್ತಾರೆ. ಇದರಿಂದಾಗಿ ಕಿರಿಯರು ಮತ್ತು ಹಿರಿಯರ ಬಗ್ಗೆ ವಯಸ್ಸಿನ ಆಧಾರದ ಮೇಲೆ ಹೇಳಲಾಗುತ್ತದೆ. ನಮ್ಮನ್ನು ನಾವು ಅತ್ಯಂತ ಕ್ರೀಯಾಶೀಲರಾಗಿ ತೊಡಗಿಸಿಕೊಂಡರೆ, ನಮಗೆ ಮುಪ್ಪು, ಮುದುಕ, ಹಿರಿಯ ಎನ್ನುವ ಪದ ಬರುವುದಿಲ್ಲ ಎಂದರು.

ಜೀವನ ಚೈತನ್ಯ, ಜೀವನ ಶೈಲಿ ಮತ್ತು ಅನುಭವವನ್ನು ರೂಡಿ ಮಾಡಿಕೊಂಡರೆ ನಾವು ಕ್ರೀಯಾಶೀಲರಾಗಿರುವುದಕ್ಕೆ ಸಾಧ್ಯ. ಬಹಳಷ್ಟು ಜನರು ನಿವೃತ್ತಿ ಹೊಂದುತ್ತಿರಿ. ನಿವೃತ್ತಿ ಎನ್ನುವುದು ಸರ್ಕಾರ ಮಾಡಿರುವುದು. ನಿಮಗೆ ಕೆಲಸ ಮಾಡಲು ಆಗುವುದಿಲ್ಲ ಅಂತಲ್ಲ. ಯುವಕರಿಗೆ ಕೆಲಸ ಕೊಡಲು ಮಾಡಿರುತ್ತಾರೆ. ನಿವೃತ್ತಿಯಾದ ಮೇಲೂ ನೀವು ಕೆಲಸ ಮಾಡಬಹುದು. ಹೊಸ ಗುರಿ, ಹೊಸ ವಿಧಾನ, ಹೊಸ ಚೈತನ್ಯ ತುಂಬಿಕೊಳ್ಳಲು ಸಾಧ್ಯವಿದೆ ಎಂದರು.

ನಿವೃತ್ತ ಹಿರಿಯ ನಾಗರಿಕರ ಅನುಭವ ಬಳಕೆಗೆ ಅವಕಾಶ

ಎಲ್ಲ ದೇಶದಲ್ಲಿಯೂ ಕೂಡ ವಯಸ್ಸಾದ ಕ್ರೀಯಾಶೀಲ ಹಿರಿಯರಿದ್ದಾರೆ. ಅವರ ಅನುಭವ ಮತ್ತು ಶಕ್ತಿಯನ್ನು ಬಳಕೆ ಮಾಡುವುದು ಜಾಣತನ. ಹೀಗಾಗಿ ನಾನು ವಿಶ್ವ ಹಿರಿಯ ನಾಗರಿಕರ ದಿನದಂದು ಒಂದು ತೀರ್ಮಾನವನ್ನು ಮಾಡಿದ್ದೇನೆ. ಎಲ್ಲೆಲ್ಲಿ ಸಾಧ್ಯವಿದೆ ಅಲ್ಲಿ ಹಿರಿಯ ನಾಗರಿಕರ ಸೇವೆಯನ್ನು ಸರ್ಕಾರದ ಸಹಾಯ, ಸಲಹೆಗಳಿಗಾಗಿ ತೆಗೆದುಕೊಳ್ಳುವ ಕೆಲಸವನ್ನು ನಾವು ಮಾಡುತ್ತೇವೆ. ಇದರಿಂದ ಯಾವುದೇ ಯುವಕರಿಗೆ ತೊಂದರೆ ಆಗುವುದಿಲ್ಲ. ಖಾಲಿಯಾದ ಹುದ್ದೆಗಳಿಗೆ ಯುವಕರನ್ನೇ ತುಂಬುತ್ತೇವೆ. ಹಿರಿಯರ ಅನುಭವ ಬುತ್ತಿಯನ್ನು ನಾವು ಈ ನಾಡು ಕಟ್ಟಲು ಬಳಕೆ ಮಾಡಿಕೊಳ್ಳುತ್ತೇವೆ. ಇದರ ಸಲಹೆಯನ್ನು ನಾನು ನಮ್ಮ ಇಲಾಖೆಯ ಅಧಿಕಾರಿಗಳಿಗೆ ನೀಡಿ, ವಿಶೇಷವಾದ ಯೋಜನೆಯನ್ನು ರೂಪಿಸಲು ಸೂಚಿಸುತ್ತೇನೆ ಎಂದರು.

ವೃದ್ದಾಶ್ರಮಗಳ ಹೆಚ್ಚಳ ಖೇದಕರ

ರಾಜ್ಯದಲ್ಲಿ ವೃದ್ದಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ನನಗೆ ಖೇದಕರ ಎನಿಸುತ್ತಿದೆ.ಜನರು ವೃದ್ದಾಶ್ರಮಗಳಿಗೆ ಕಳುಹಿಸುತ್ತಿರುವುದು ಬಹಳ ನೋವಿನ ಸಂಗತಿ. ಸಮಾಜದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಹಿರಿಯರಿಂದ ಪಡೆದಿರುವುದನ್ನು ಅವರನ್ನು ನೋಡಿಕೊಳ್ಳುವ ಮೂಲಕ ತೀರಿಸಬೇಕು. ಎಲ್ಲದಕ್ಕಿಂತ ಮುಖ್ಯುವಾದದ್ದು ಮಾನವೀಯತೆ. ಮಾನವೀಯತೆಯಿಂದ ನಡೆದುಕೊಳ್ಳುವುದು ಮುಖ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಸಚಿವರಾದ ಹಾಲಪ್ಪ ಆಚಾರ್, ವಿ. ಸೋಮಣ್ಣ, ಶಂಕರ್ ಪಾಟೀಲ ಮುನೇನಕೊಪ್ಪ, ಶಾಸಕರಾದ ಉದಯ್ ಗರುಡಾಚಾರ್ಯ, ರವಿ ಸುಬ್ರಹ್ಮಣ್ಯ ಇತರರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next