Advertisement

ಸಚಿನ್‌ಗೆ ಐಸಿಸಿ ಹಾಲ್‌ ಆಫ್ ಫೇಮ್‌ ಗೌರವ

09:28 AM Jul 21, 2019 | Sriram |

ಲಂಡನ್‌: ಭಾರತದ ಬ್ಯಾಟಿಂಗ್‌ ದಂತಕತೆ ಸಚಿನ್‌ ತೆಂಡುಲ್ಕರ್‌ ಪ್ರತಿಷ್ಠಿತ “ಐಸಿಸಿ ಹಾಲ್‌ ಆಫ್ ಫೇಮ್‌’ ಗೌರವಕ್ಕೆ ಪಾತ್ರರಾಗಿದ್ದಾರೆ. ಗುರುವಾರ ರಾತ್ರಿ ನಡೆದ ಭವ್ಯ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಲಾಯಿತು.

Advertisement

ಸಚಿನ್‌ ತೆಂಡುಲ್ಕರ್‌ ಜತೆಗೆ ದಕ್ಷಿಣ ಆಫ್ರಿಕಾ ದ ಖ್ಯಾತ ವೇಗಿ ಅಲನ್‌ ಡೊನಾಲ್ಡ್‌ ಮತ್ತು ಆಸ್ಟ್ರೇಲಿಯದ 2 ವನಿತಾ ವಿಶ್ವಕಪ್‌ ವಿಜೇತ ತಂಡದ ಸದಸ್ಯೆ ಕ್ಯಾಥರಿನ್‌ ಫಿಟ್ಜ್ಪ್ಯಾಟ್ರಿಕ್‌ ಅವರೂ ಈ ಪ್ರಶಸ್ತಿಗೆ ಪಾತ್ರರಾದರು.

ಭಾರತದ 6ನೇ ಕ್ರಿಕೆಟಿಗ
ಸಚಿನ್‌ ತೆಂಡುಲ್ಕರ್‌ ಐಸಿಸಿ ಹಾಲ್‌ ಆಫ್ ಫೇಮ್‌ ಪ್ರಶಸ್ತಿಗೆ ಭಾಜನರಾದ ಭಾರತದ 6ನೇ ಕ್ರಿಕೆಟಿಗ. ಇವರಿಗೂ ಮುನ್ನ ಸುನೀಲ್‌ ಗಾವಸ್ಕರ್‌, ಬಿಷನ್‌ ಸಿಂಗ್‌ ಬೇಡಿ, ಕಪಿಲ್‌ದೇವ್‌, ಅನಿಲ್‌ ಕುಂಬ್ಳೆ ಮತ್ತು ದ್ರಾವಿಡ್‌ ಅವರಿಗೆ ಈ ಗೌರವ ಒಲಿದು ಬಂದಿತ್ತು.

“ಇದೊಂದು ಮಹಾನ್‌ ಗೌರವ. ಇಲ್ಲಿನ ಸಾಧಕರು ಮುಂದಿನ ಪೀಳಿಗೆಯ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿರುತ್ತಾರೆ. ಕ್ರಿಕೆಟಿನ ಪ್ರಗತಿಯಲ್ಲಿ ಇವರೆಲ್ಲರ ಪಾತ್ರ ಮಹತ್ತರವಾದುದು. ಇದರಲ್ಲಿ ನನ್ನದೂ ಒಂದು ಅಳಿಲು ಸೇವೆ’ ಎಂದು ಪ್ರಶಸ್ತಿ ಸ್ವೀಕರಿಸಿದ ಬಳಿಕ ಸಚಿನ್‌ ತೆಂಡುಲ್ಕರ್‌ ಪ್ರತಿಕ್ರಿಯಿಸಿದ್ದಾರೆ.

“ನನ್ನ ಸುದೀರ್ಘ‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಯಣದ ಹಾದಿಯಲ್ಲಿ ಅನೇಕರು ಬೆಂಬಲಕ್ಕೆ ನಿಂತಿದ್ದರು. ಇವರೆಲ್ಲರ ಪ್ರೋತ್ಸಾಹ ದೊಡ್ಡದು. ಹೆತ್ತವರು, ಸಹೋದರ ಅಜಿತ್‌, ಪತ್ನಿ ಅಂಜಲಿ ಅವರೆಲ್ಲ ನನ್ನ ಯಶಸ್ಸಿನ ಆಧಾರಸ್ತಂಭಗಳಾಗಿದ್ದರು. ರಮಾಕಾಂತ್‌ ಅಚೆÅàಕರ್‌ ಅವರಂಥ ಕೋಚ್‌ ದೊರಕಿದ್ದು ನನ್ನ ಅದೃಷ್ಟ. ಜತೆಗೆ ಅಭಿಮಾನಿಗಳು, ಕ್ರಿಕೆಟ್‌ ಮಂಡಳಿಗಳು, ಸಹ ಆಟಗಾರರು, ನಾಯಕರು… ಇವ ರ್ಯಾರನ್ನೂ ಮರೆಯುವಂತಿಲ್ಲ’ ಎಂದು ತೆಂಡುಲ್ಕರ್‌ ಹೇಳಿದರು. ಜತೆಗೆ ಈ ಪ್ರಶಸ್ತಿ ನೀಡಿದ ಐಸಿಸಿಗೆ ಕೃತಜ್ಞತೆ ಸಲ್ಲಿಸಿದರು.

Advertisement

46ರ ಹರೆಯದ ಸಚಿನ್‌ ತೆಂಡುಲ್ಕರ್‌ ನೂರಾರು ದಾಖಲೆಗಳೊಂದಿಗೆ ತಮ್ಮ ಕ್ರಿಕೆಟ್‌ ಬದುಕನ್ನು ರಂಜನೀಯಗೊಳಿಸಿದ ಕ್ರಿಕೆಟಿಗ. ಟೆಸ್ಟ್‌ (15,921 ರನ್‌) ಹಾಗೂ ಏಕದಿನಗಳೆ ರಡರಲ್ಲೂ (18,426) ಸರ್ವಾಧಿಕ ರನ್‌ ಗಳಿಸಿದ ಸಾಧನೆಗೆ ಇವರೇ ಅಧಿಪತಿ.

ಘಾತಕ ಬೌಲರ್‌ ಡೊನಾಲ್ಡ್‌
“ವೈಟ್‌ ಲೈಟ್ನಿಂಗ್‌’ ಎಂದೇ ಗುರುತಿಸಲ್ಪಡುತ್ತಿದ್ದ 52ರ ಹರೆಯದ ಅಲನ್‌ ಡೊನಾಲ್ಡ್‌ ವಿಶ್ವದ ಘಾತಕ ವೇಗಿಗಳಲ್ಲಿ ಒಬ್ಬರಾಗಿದ್ದರು. ಟೆಸ್ಟ್‌ನಲ್ಲಿ 330, ಏಕದಿನದಲ್ಲಿ 272 ವಿಕೆಟ್‌ ಉರುಳಿಸಿದ ಸಾಧನೆ ಇವರದಾಗಿದೆ. ದಕ್ಷಿಣ ಆಫ್ರಿಕಾ 1991ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಮರಳಿದ ಬಳಿಕ ಸಾಧಿಸಿದ ಅಮೋಘ ಯಶಸ್ಸಿನಲ್ಲಿ ಡೊನಾಲ್ಡ್‌ ಪಾತ್ರ ಸ್ಮರಣೀಯ. 2003ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿದಿದ್ದರು.

“ಸಿಹಿ ಸುದ್ದಿ ಹೊತ್ತ ಇ-ಮೇಲ್‌ ತೆರೆದಾಗ ಅರೆಕ್ಷಣ ಆಘಾತಗೊಂಡೆ. ಕೂಡಲೇ ನನ್ನ ನೆನಪು ಕ್ರಿಕೆಟಿನ ಆರಂಭದ ದಿನಗಳತ್ತ ಹೊರಳಿತು. ಸಾಗಿ ಬಂದ ಹಾದಿಯನ್ನು ಕಲ್ಪಿಸಿಕೊಳ್ಳುವಾಗ ಲಭಿಸುವ ಆನಂದ ಅಪಾರ. ಇಂಥದೊಂದು ಮಹಾನ್‌ ಗೌರವ ನೀಡಿದ ಐಸಿಸಿಗೆ ಕೃತಜ್ಞತೆಗಳು’ ಎಂಬುದಾಗಿ ಅಲನ್‌ ಡೊನಾಲ್ಡ್‌ ಹೇಳಿದರು. ಬಾಲ್ಯದ ಕೋಚ್‌, ಕ್ರಿಕೆಟಿಗ ಹ್ಯಾನ್ಸಿ ಕ್ರೋನ್ಯೆ ಅವರ ತಂದೆ, ಎವೀ ಕ್ರೋನ್ಯೆ ಅವರನ್ನು ಡೊನಾಲ್ಡ್‌ ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.

ವನಿತಾ ಕ್ರಿಕೆಟಿನ ವೇಗಿ
ಆಸ್ಟ್ರೇಲಿಯದ ಕ್ಯಾಥರಿನ್‌ ಫಿಟ್ಜ್ ಪ್ಯಾಟ್ರಿಕ್‌ ವನಿತಾ ಕ್ರಿಕೆಟಿನ ಖ್ಯಾತ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿದ್ದರು. ಇವರದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16 ವರ್ಷಗಳ ಸೇವೆ. 109 ಏಕದಿನಗಳಿಂದ 180 ವಿಕೆಟ್‌ ಹಾರಿಸಿದ್ದು ಆ ಕಾಲಕ್ಕೆ ವಿಶ್ವದಾಖಲೆಯಾಗಿತ್ತು. 13 ಟೆಸ್ಟ್‌ಗಳಿಂದ 60 ವಿಕೆಟ್‌ಗಳನ್ನೂ ಉರುಳಿಸಿದ್ದಾರೆ. ಆಸ್ಟ್ರೇಲಿಯದ 2 ವಿಶ್ವಕಪ್‌ ಗೆಲುವುಗಳಲ್ಲಿ (1997, 2005) ಕ್ಯಾಥರಿನ್‌ ಪಾತ್ರ ಮಹತ್ವದ್ದಾಗಿದೆ.

ತೆಂಡುಲ್ಕರ್‌ಗೆ ಪ್ರಶಸ್ತಿ ವಿಳಂಬವೇಕೆ?
ಸಾಧನೆಯ ಮಾನದಂಡದಲ್ಲಿ ಹಾಲ್‌ ಆಫ್ ಫೇಮ್‌ ಪ್ರಶಸ್ತಿ ಸಚಿನ್‌ ತೆಂಡುಲ್ಕರ್‌ಗೆ ವಿಳಂಬವಾಗಿ ನೀಡಲಾಯಿತೇ? ಇವರಿಗಿಂತ ಮೊದಲು ಅನಿಲ್‌ ಕುಂಬ್ಳೆ, ರಾಹುಲ್‌ ದ್ರಾವಿಡ್‌ಗೆ ಹೇಗೆ ಲಭಿಸಿತು? ಇಂಥ ಪ್ರಶ್ನೆಗಳು ಕ್ರಿಕೆಟ್‌ ಪ್ರಿಯರನ್ನು ಕಾಡುವುದು ಸಹಜ.

ಆದರೆ ಇದಕ್ಕೂ ಐಸಿಸಿಯಲ್ಲಿ ಸ್ಪಷ್ಟ ನಿಯಮವಿದೆ. ಕ್ರಿಕೆಟಿಗರು ನಿವೃತ್ತಿ ಘೋಷಿಸಿ 5 ವರ್ಷ ಪೂರ್ತಿಗೊಂಡ ಬಳಿಕವಷ್ಟೇ ಈ ಪ್ರಶಸ್ತಿಗೆ ಅರ್ಹರಾಗುತ್ತಾರೆ. ಅದರಂತೆ 2013ರಲ್ಲಿ ಕ್ರಿಕೆಟಿಗೆ ಗುಡ್‌ಬೈ ಹೇಳಿದ ತೆಂಡುಲ್ಕರ್‌, 2018ರ ಕೊನೆಯಲ್ಲಿ ಹಾಲ್‌ ಆಫ್ ಫೇಮ್‌ಗೆ ಅರ್ಹ ಅಭ್ಯರ್ಥಿಯಾಗಿದ್ದರು.

ಅನಿಲ್‌ ಕುಂಬ್ಳೆ ಮತ್ತು ರಾಹುಲ್‌ ದ್ರಾವಿಡ್‌ ಕ್ರಮವಾಗಿ 2015 ಮತ್ತು 2018ರಲ್ಲಿ ಈ ಗೌರವ ಸಂಪಾದಿಸಿದ್ದರು. ಕುಂಬ್ಳೆ, ದ್ರಾವಿಡ್‌ಗಿಂತ ಮೊದಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಆರಂಭಿಸಿದ್ದ ತೆಂಡುಲ್ಕರ್‌, ಇವರಿಬ್ಬರ ನಿವೃತ್ತಿ ಬಳಿಕವೇ ಕ್ರಿಕೆಟ್‌ನಿಂದ ದೂರ ಸರಿದಿದ್ದರು. ಕುಂಬ್ಳೆ 2008ರಲ್ಲಿ, ದ್ರಾವಿಡ್‌ 2012ರಲ್ಲಿ ಗುಡ್‌ಬೈ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next