Advertisement

ಶಬರಿಮಲೆ ವಿವಾದ: 12ರಂದು ಪ್ರತಿಭಟನೆ

10:26 AM Nov 10, 2018 | Team Udayavani |

ಕಲಬುರಗಿ: ಕೇರಳದ ಶಬರಿಮಲೆ ಅಪ್ಪಯ್ಯ ಸ್ವಾಮಿ ದೇವಸ್ಥಾನ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ಕೊಟ್ಟಿರುವ ಸುಪ್ರೀಂಕೋರ್ಟ್‌ ತೀರ್ಪಿನ ವಿರುದ್ಧ ಕೇರಳ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು ಹಾಗೂ ಪ್ರತಿಭಟನೆಯಲ್ಲಿ ಬಂಧಿಸಲ್ಪಟಿರುವ ಸುಮಾರು ಎರಡು ಸಾವಿರ ಭಕ್ತರನ್ನು ಬಿಡುಗಡೆ ಮಾಡಬೇಕೆಂದು ಶಬರಿಮಲೆ ಪಾವಿತ್ರ ಉಳಿಸಿ ಹೋರಾಟ ಸಮಿತಿ ವತಿಯಿಂದ ನ.12ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಗುರುಸ್ವಾಮಿ ಕಾಶಿನಾಥ ಶಾನಭಾಗ ಮತ್ತು ಆರ್‌ಎಸ್‌ಎಸ್‌ ಮುಖಂಡ ಕೃಷ್ಣ ಜೋಶಿ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಜಂಟಿಯಾಗಿ ಮಾತನಾಡಿದ ಅವರು, 12 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 50 ವರ್ಷದೊಳಗಿನ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನ ಪ್ರವೇಶ ನಿಷಿದ್ಧ ಎನ್ನುವ ಪರಂಪರೆ ಇದೆ. ಆದರೆ, ಭಕ್ತರಲ್ಲದ ಕೆಲ ವ್ಯಕ್ತಿಗಳು ದೇಗುಲದ ಧಾರ್ಮಿಕ ನಂಬಿಕೆಗಳನ್ನು ಹಾಳು ಮಾಡುವ ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸುಮಾರು 800 ವರ್ಷಗಳ ಪರಂಪರೆ ಹೊಂದಿದೆ. ಸ್ತ್ರೀಯರನ್ನು ದೇಗುಲದ ಒಳಗಡೆ ಪ್ರವೇಶಕ್ಕೆ ಬಿಡುವುದಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಆಡಳಿತ ಮಂಡಳಿ ಕೆಲವು ಧಾರ್ಮಿಕ ನಿಯಮಗಳಿಗೆ ಬದ್ಧವಾಗಿದೆ. ಸ್ತ್ರೀಯರು ದೇಗುಲ ಪ್ರವೇಶಿಸದಂತೆ ಆಡಳಿತ ಮಂಡಳಿ ಎಲ್ಲೂ ಹೇಳಿಕೆ ನೀಡಿಲ್ಲ. ಆದರೆ, ಕೆಲವರು ದೇವಸ್ಥಾನವನ್ನು ಅಪವಿತ್ರಗೊಳಿಸಲು ಮಹಿಳೆಯರನ್ನು ಮುಂದೆ ಮಾಡಿ ಧಾರ್ಮಿಕ ಕಲಹ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.

ಶಬರಿಮಲೆ ಆಚರಣೆಗಳ ಬದಲಾವಣೆ ಮತ್ತು ಭಕ್ತರಿಗೆ ಅನುಕೂಲ ಕಲ್ಪಿಸುವುದು ದೇವಸ್ಥಾನ ಆಡಳಿತ ಮಂಡಳಿ ಕೆಲಸವಾಗಿದೆ. ಇದರಲ್ಲಿ ಭಕ್ತರಲ್ಲದ ವ್ಯಕ್ತಿಗಳ ವಾದವನ್ನು ಸುಪ್ರೀಂಕೋರ್ಟ್‌ ಮಾನ್ಯ ಮಾಡಿ ತೀರ್ಪು ನೀಡಿದೆ.

ಇದರಿಂದ ಬಹುಸಂಖ್ಯಾತ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗಿದೆ ಎಂದರು. ಸುಪ್ರೀಂಕೋರ್ಟ್‌ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವಂತೆ ಕೇರಳ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ, ಕೇರಳದ ಕಮ್ಯುನಿಸ್ಟ್‌ ಸರ್ಕಾರ ಭಕ್ತರ ಭಾವನೆಗಳಿಗೆ ಬೆಲೆ ಕೊಡದೆ, ನ್ಯಾಯಾಲಯದ ತೀರ್ಪನ್ನು ಅನುಷ್ಠಾನಗೊಳಿಸಲು ಮುಂದಾಗಿರುವುದು ಮತ್ತು ಕೆಲ ದಿನಗಳ ಹಿಂದೆ ಪ್ರತಿಭಟನೆ ವೇಳೆ ಭಕ್ತರ ಮೇಲೆ ಮೇಲೆ ಲಾಠಿ ಚಾರ್ಜ್‌ ಮಾಡಿ ಸುಮಾರು ಎರಡು ಸಾವಿರ ಭಕ್ತರನ್ನು ಬಂಧಿಸಿರುವುದು ಖಂಡನೀಯ ಎಂದರು. ಹೀಗಾಗಿ ನ.12ರಂದು ಬೆಳಗ್ಗೆ ನಗರದ ಸೂಪರ್‌ ಮಾರ್ಕೆಟ್‌ನಲ್ಲಿರುವ ಹನುಮಾನ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಸುಮಾರು 4ರಿಂದ 5 ಸಾವಿರ ಭಕ್ತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಎಂದರು. ಸಮಿತಿ ಅಧ್ಯಕ್ಷ ವಿಜಯಕುಮಾರ ದೇಶಮುಖ, ಕಾರ್ಯಾಧ್ಯಕ್ಷ ಪ್ರಭು ಹಾದಿಮನಿ, ಬಿಜೆಪಿ ಮುಖಂಡ ಚಂದು ಪಾಟೀಲ, ವಿಜಯಕುಮಾರ ಪುಲಾರಿ, ವಿದ್ಯಾಸಾಗರ ಶಾಬಾದಿ, ಚಂದ್ರಶೇಖರ ಬೆಣ್ಣೂರ, ಮಲ್ಲಿನಾಥ ಅವರಾದ, ಶಾಂತು ಬಿರಾದಾರ ಹಾಗೂ ಇತರರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next