Advertisement
ಶಬರಿಮಲೆಗೆ ಜೈವಿಕ ಕಾರಣಗಳಿಂದ ಮಹಿಳೆಯರ ಪ್ರವೇಶವನ್ನು ನಿರಾಕರಿಸುವುದು ಹಾಗೂ ಪ್ರವೇಶ ನಿಷೇಧ ಸಂವಿಧಾನದ ಉಲ್ಲಂಘನೆ ಎಂಬ ಕುರಿತ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಜಸ್ಟೀಸ್ ಗಳಾದ ಫಾಲಿ ನಾರಿಮನ್, ಎಎಂ ಖಾನ್ ವಿಲ್ಕರ್, ಡಿವೈ ಚಂದ್ರಾಚೂಡ್ ಹಾಗೂ ಇಂದು ಮಲೋತ್ರಾ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ಕೈಗೆತ್ತಿಕೊಂಡಿದೆ.
Related Articles
Advertisement
ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದೊಳಗೆ ಮಹಿಳೆಯರ ಪ್ರವೇಶ ನಿಷೇಧಿಸಿರುವ ಸಂಪ್ರದಾಯವನ್ನು ಪ್ರಶ್ನಿಸಿ ಇಂಡಿಯನ್ ಯಂಗ್ ಲಾಯರ್ಸ್ ಅಸೋಸಿಯೇಶನ್ ಸುಪ್ರೀಂಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ಶಬರಿಮಲೆ ದೇವಾಲಯದೊಳಗೆ 10-50ವರ್ಷದೊಳಗಿನ ಮಹಿಳಾ ಭಕ್ತರಿಗೆ ದೇವಾಲಯದೊಳಕ್ಕೆ ಪ್ರವೇಶ ನೀಡುವ ಬಗ್ಗೆ ಕೇರಳ ಸರ್ಕಾರ, ತಿರುವಾಂಕೂರ್ ದೇವಸ್ವಂ ಮಂಡಳಿ, ಶಬರಿಮಲೆಯ ಮುಖ್ಯ ಅರ್ಚಕ ಹಾಗೂ ಪಟ್ಟಣಂತಿಟ್ಟಾ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಬೇಕೆಂದು ಪಿಐಎಲ್ ನಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಈ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಪಂಚಸದಸ್ಯರ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿತ್ತು. ಎಲ್ಲಾ ವಯಸ್ಸಿನ ಮಹಿಳೆಯರೂ ಶಬರಿಮಲೆ ದೇವಾಲಯ ಪ್ರವೇಶಿಸುವ ನಿಲುವಿಗೆ ಕೇರಳ ಸರ್ಕಾರ ಬೆಂಬಲ ಸೂಚಿಸಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ 4ನೇ ಬಾರಿ ತನ್ನ ನಿಲುವನ್ನು ಬದಲಿಸುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ಮಿಶ್ರಾ ಹೇಳಿದರು. ಗುರುವಾರ ಮತ್ತೆ ವಿಚಾರಣೆ ಮುಂದುವರಿಯಲಿದೆ.