ಇಂಡಿ: ಪಟ್ಟಣದ ಪುರಸಭೆ ಅಧೀನದಲ್ಲಿರುವ ಸಾತಪುರ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಸುಮಾರು 35ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಘಟನೆ ರವಿವಾರ ನಡೆದಿದೆ.
ಬಹುತೇಕರು ಅಶಕ್ತಿ, ವಾಂತಿ, ಭೇದಿಯಿಂದ ಬಳಲುತ್ತಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪುರಸಭೆ ನೀರು ಸರಬರಾಜು ಮಂಡಳಿಯವರು ಗ್ರಾಮಕ್ಕೆ ಭೇಟಿ ನೀಡಿದ್ದು ಇಂಡಿ ಪಟ್ಟಣಕ್ಕೆ ಮತ್ತು ಸಾತಪುರ ಗ್ರಾಮಕ್ಕೆ ಒಂದೇ ನೀರು ಸರಬರಾಜು ಆಗುತ್ತದೆ. ಅದಲ್ಲದೆ ಕೆಲವೇ ದಿನಗಳ ಹಿಂದೆ ಸಾತಪುರದಲ್ಲಿರುವ ನೀರಿನ ಓವರ್ ಹೆಡ್ ಟ್ಯಾಂಕ್ ಸ್ವಚ್ಛಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಾತಪುರ ಗ್ರಾಮಕ್ಕೆ ಆಂಬ್ಯುಲೆನ್ಸ್ ಕಳುಹಿಸಿ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾದೆ ಎಂದು ಆಸ್ಪತ್ರೆ ವೈದ್ಯಾ ಧಿಕಾರಿ ಡಾ| ರಾಜೇಶ ಕೋಳೆಕರ ತಿಳಿಸಿದ್ದಾರೆ. ಶಾಸಕ ಯಶವಂತರಾಯಗೌಡ ಪಾಟೀಲ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಡಾ| ಕಲ್ಲೇಶಿ ಭಜಂತ್ರಿ, ಡಾ| ಪವಾರ, ಡಾ| ಬಾಗವಾನ, ಡಾ| ವಿಫುಲ್ ಕೋಳೆಕರ ರೋಗಿಗಳ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. 35 ಜನರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ರಾಜೇಶ ಕೋಳೆಕರ ತಿಳಿಸಿದ್ದಾರೆ. ನೀರನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪುರಸಭೆ ಮಾಹಿತಿ ನೀಡಿದೆ.