Advertisement

ಸಾರ್ಕ್ ಸಭೆಗೆ ತಾಲಿಬಾನ್ ಗೆ ಆಹ್ವಾನ ನೀಡಿ; ಪಾಕ್ ಪಟ್ಟು, ಭಾರತವನ್ನು ಕೆಣಕಿದ ಟರ್ಕಿ

01:57 PM Sep 23, 2021 | Team Udayavani |

ವಿಶ್ವಸಂಸ್ಥೆ/ಕಾಬೂಲ್‌: ಸಾರ್ಕ್‌ ರಾಷ್ಟ್ರಗಳ ಒಕ್ಕೂಟದ ವಿದೇಶಾಂಗ ಸಚಿವರ ಸಭೆಯಲ್ಲಿ ಅಫ್ಘಾನಿಸ್ತಾನದಲ್ಲಿ ಸದ್ಯ ಆಡಳಿತ ದಲ್ಲಿರುವ ತಾಲಿಬಾನ್‌ ಸರ್ಕಾರಕ್ಕೆ ಆಮಂತ್ರಣ ನೀಡಬೇಕು ಪಾಕಿಸ್ತಾ ನ ಪಟ್ಟು ಹಿಡಿದಿದೆ. ಇದರಿಂದಾಗಿ ಸೆ.25ರಂದು ನ್ಯೂಯಾರ್ಕ್‌ ನಲ್ಲಿ ನಡೆಯಬೇಕಾಗಿದ್ದ ವಿದೇಶಾಂಗ ಸಚಿವರ ಸಭೆ ರದ್ದುಗೊಳಿಸಲಾಗಿದೆ.

Advertisement

ಇದೊಂದು ಅನೌಪಚಾರಿಕ ಸಭೆ ಎಂದು ಈಗಾಗಲೇ ನಿಗದಿಯಾಗಿತ್ತು. ಆದರೆ, ಪಾಕಿಸ್ತಾನ ಸರ್ಕಾರ ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್‌ ಸರ್ಕಾರದ ಪ್ರತಿನಿಧಿಗಳಿಗೆ ಈ ಸಭೆಗೆ ಆಹ್ವಾನ ನೀಡಬೇಕು ಎಂದು ಪಟ್ಟು ಹಿಡಿಯಿತು. ಅಶ್ರಫ್ ಘನಿ ನೇತೃತ್ವದ ನಿಕಟಪೂರ್ವ ಸರ್ಕಾರದ ಪ್ರತಿನಿಧಿಗಳಿಗೆ ಆಹ್ವಾನ ನೀಡಲೇಬಾರದು ಎಂದು ವಾದಿಸಿತು. ಈ ಮೂಲಕ ಅಲ್ಲಿಯೂ ಪಾಕಿಸ್ತಾನ ತನ್ನ ಕುತ್ಸಿತ ಬುದ್ಧಿಯನ್ನು ಬಿಡಲಿಲ್ಲ. ಪಾಕ್‌ ಪ್ರಸ್ತಾವನೆಗೆ ಭಾರತ ಸರ್ಕಾರ
ಪ್ರಬಲವಾಗಿ ಪ್ರತಿರೋಧ ಒಡ್ಡಿತು.

ಹೀಗಾಗಿ, ನೇಪಾಳ ವಿದೇಶಾಂಗ ಸಚಿವಾಲಯ ಸದಸ್ಯ ರಾಷ್ಟ್ರಗಳ ನಡುವೆ ಒಮ್ಮತಾಭಿಪ್ರಾಯದ ಕೊರತೆಯಿಂದ ಸೆ.25ರ ಸಭೆ ರದ್ದು ಮಾಡಲಾಗಿದೆ ಎಂದು ಹೇಳಿಕೆ ನೀಡಿತು. ಅಫ್ಘಾನಿಸ್ತಾನ ಸಾರ್ಕ್‌ ಒಕ್ಕೂಟದ ಇತ್ತೀಚಿನ ಸದಸ್ಯ ರಾಷ್ಟ್ರವಾಗಿದೆ. 2016ರಲ್ಲಿ ಕೂಡ ಉರಿಯ ಸೇನಾ ಕ್ಯಾಂಪ್‌ ಮೇಲೆ ದಾಳಿಯಾಗಿದ್ದ ಕಾರಣ ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಾಗಿದ್ದ ಸಮ್ಮೇಳನ ರದ್ದಾಗಿತ್ತು.

ಮತ್ತೆ ಕೆಣಕಿದ ಎರ್ಡೋಗನ್
ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ 76ನೇ ಅಧಿವೇಶನದಲ್ಲಿ ಟರ್ಕಿಯ ಅಧ್ಯಕ್ಷ ರೆಸೆಪ್‌ ತಯ್ಯಿಪ್‌ , ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ಭಾರತವನ್ನು ಕೆಣಕಿದ್ದಾರೆ. ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಅವರು, “ಕಾಶ್ಮೀರ ಸಮಸ್ಯೆಯನ್ನು ಇತ್ಯರ್ಥಗೊಳಿಸುವಲ್ಲಿ ಕಳೆದ 74 ವರ್ಷಗಳಿಂದ ಟರ್ಕಿ ವಹಿಸಿರುವ ಆಸ್ಥೆಗೆ ಈಗಲೂ ನಾವು ಬದ್ಧರಾಗಿದ್ದೇವೆ. ಕಾಶ್ಮಿರ ಸಮಸ್ಯೆಯ ಪಾಲುದಾರ ದೇಶಗಳನ್ನು ಕೂರಿಸಿಕೊಂಡು ಮಾತುಕತೆಯ ಮೂಲಕ ಬಗೆಹರಿಸಲು ಪ್ರಯತ್ನಿಸಲು ಟರ್ಕಿ ಸಿದ್ಧವಿದೆ’ ಎಂದಿದ್ದಾರೆ. ಕಳೆದ ವರ್ಷ ಕೂಡ ಅವರು ಇದೇ ವಿಚಾರ ಪ್ರಸ್ತಾಪಿಸಿದ್ದರು.

ಜೈಶಂಕರ್‌ ತಿರುಗೇಟು
ಟರ್ಕಿ ಅಧ್ಯಕ್ಷರ ದುಃಸ್ಸಾಹಸಕ್ಕೆ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಪರೋಕ್ಷವಾಗಿ ಟಾಂಗ್‌ ನೀಡಿದ್ದಾರೆ. 1974ರಲ್ಲಿ ಸೈಪ್ರಸ್‌ನ ಉತ್ತರ ಭಾಗವನ್ನು ಟರ್ಕಿ ಸ್ವಾಧೀನಪಡಿಸಿಕೊಂಡಿದೆ. ಆ ವಿವಾದ ಇನ್ನೂ ಇತ್ಯರ್ಥವಾಗಿಲ್ಲ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ನ್ಯೂಯಾರ್ಕ್‌ನಲ್ಲಿರುವ ಜೈಶಂಕರ್‌ ಸೈಪ್ರಸ್‌ನ ವಿದೇಶಾಂಗ ಸಚಿವ ನಿಕೋಸ್‌ ಕ್ರಿಸ್ಟೋಡುಲಿಡಸ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next