Advertisement

ಸಾಲುಮರದ ತಿಮ್ಮಕ್ಕ “ಪರಿಸರ ರಾಯಭಾರಿ’ಮತ್ತಷ್ಟು ಕಾರ್ಯಕ್ಕಾಗಿ ರಾಜ್ಯ ಸಚಿವ ಸ್ಥಾನಮಾನ-ಸಿಎಂ

06:49 PM Jun 30, 2022 | Team Udayavani |

ಬೆಂಗಳೂರು: ಸಾಲುಮರದ ತಿಮ್ಮಕ್ಕನವರು ಪರಿಸರ ಸಂರಕ್ಷಣೆಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ರಾಜ್ಯ ಸರ್ಕಾರದ ವತಿಯಿಂದ “ಪರಿಸರದ ರಾಯಭಾರಿ’ ಎಂಬ ವಿಶೇಷ ಪದವಿ ಹಾಗೂ ಮತ್ತಷ್ಟು ಪರಿಸರ ಸಂರಕ್ಷಣೆ ಕಾರ್ಯ ಕೈಗೊಳ್ಳಲು ನೆರವಾಗುವುದಕ್ಕಾಗಿ ರಾಜ್ಯ ಸಚಿವ ಸ್ಥಾನಮಾನ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

Advertisement

ತಿಮ್ಮಕ್ಕನವರ ಸೇವೆ ನಿರತಂರವಾಗಿ ಸಾಗಲಿ ಎಂಬ ಉದ್ದೇಶದಿಂದ ರಾಜ್ಯದೆಲ್ಲೆಡೆ ಎಲ್ಲೇ ಅವರು ಸಂಚರಿಸಿದರೂ ಸಹ ಅವರಿಗೆ ಸರ್ಕಾರದ ವತಿಯಿಂದಲೇ ವಾಹನ ವ್ಯವಸ್ಥೆ ಮಾಡಲಾಗುತ್ತದೆ. ಬೇರೆ ರಾಜ್ಯಗಳಿಗೆ ತೆರಳಿದರೂ ಕೂಡ ಸರ್ಕಾರದ ವತಿಯಿಂದಲೇ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುತ್ತದೆ. ತಿಮ್ಮಕ್ಕನವರ ಕೆಲಸ ಲಕ್ಷಾಂತರ ಜನರ ಬದುಕಿಗೆ ಈಗಾಗಲೇ ಪ್ರೇರಣೆಯಾಗಿದೆ. ಮತ್ತಷ್ಟು ಯುವರಿಗೆ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ವಾರ್ತಾ ಇಲಾಖೆ ವತಿಯಿಂದ ವೆಬ್‌ಸೈಟ್‌ ರಚಿಸಿ ವೆಬ್‌ ಸೀರೀಸ್‌ ಮಾಡಿ ತಿಮ್ಮಕ್ಕನವರ ಕೆಲಸವನ್ನು ಪ್ರಚಾರ ಮಾಡಲಾಗುತ್ತದೆ ಎಂದು ತಿಳಿಸಿದರು.

ಸಿದ್ಧಾರ್ಥ ಎಜುಕೇಷನ್‌ ಸೊಸೈಟಿ ಹಾಗೂ ಸಾಲುಮರದ ತಿಮ್ಮಕ್ಕ ಇಂಟರ್‌ ನ್ಯಾಷನಲ್‌ ಫೌಂಡೇಷನ್‌ ವತಿಯಿಂದ ಗುರುವಾರ ವಸಂತನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಹಮ್ಮಿಕೊಂಡಿದ್ದ “ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ 111ನೇ ಜನ್ಮದಿನ’ದ ಕಾರ್ಯಕ್ರಮದಲ್ಲಿ ತಿಮ್ಮಕ್ಕನವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ತಿಮ್ಮಕ್ಕ ನೆಲೆಸಿರುವ ಬಳ್ಳೂರು ಬಳಿ 10 ಎಕರೆ ಜಮೀನು ನೀಡಲಾಗುತ್ತಿದೆ. ಮುಂದಿನ 3-4 ದಿನಗಳಲ್ಲಿ ಸರ್ಕರಾದ ವತಿಯಿಂದ ಮಂಜೂರು ಮಾಡಲಾಗುತ್ತದೆ. ಬೆಂಗಳೂರಿನಲ್ಲಿ ಬಿಡಿಎ ನಿವೇಶನ ನೀಡಲಾಗಿದ್ದು, ಸುಮಾರು 6 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಡಲಾಗುತ್ತಿದೆ. ಇದರ ಜೊತೆಗೆ ಸೂರ್ಯನಗರದಲ್ಲಿ ವಸತಿ ಇಲಾಖೆ ವತಿಯಿಂದ ಮನೆ ಮಂಜೂರು ಮಾಡಲಾಗಿದೆ ಎಂದು ಹೇಳಿದರು.

ಯಾವುದೇ ಪದವಿ, ನೆರವು, ಅವಕಾಶಗಳು ಇಲ್ಲದೆ, ಧ್ಯೇಯವನ್ನಿಟ್ಟುಕೊಂಡು ಕಾಯಕನಿಷ್ಠೆಯಿಂದ ಸರ್ವರಿಗೂ ಒಳ್ಳೆಯದಾಗುವ ಕೆಲಸವನ್ನು ಮಾಡಿದರೆ, ಜಗತ್ತಿನಲ್ಲಿ ಬದಲಾವಣೆ ಮಾಡುವ ಪ್ರಭಾವಿಶಕ್ತಿಯಾಗಬಹುದು ಎಂಬುದಕ್ಕೆ ಸಾಲುಮರದ ತಿಮ್ಮಕ್ಕ ಸಾಕ್ಷಿಯಾಗಿದ್ದಾರೆ. ಇವರು ರಾಜ್ಯದವರಾಗಿರುವುದು ನಮ್ಮ ಸೌಭಾಗ್ಯ. ಹಸಿರು, ಪರಿಸರ ಮತ್ತು ಪರಿಸರದ ಶುದ್ಧೀಕರಣದ ವಿಚಾರದಲ್ಲಿ ತಿಮ್ಮಕ್ಕನನ್ನು ವೈಭವೀಕರಿಸಿ ಪ್ರಚಾರ ಮಾಡಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ವಸತಿ ಸಚಿವ ವಿ. ಸೋಮಣ್ಣ ಮಾತನಾಡಿ, ಮನುಕುಲಕ್ಕೆ ನೀರು, ನೆರಳು, ಉಸಿರು ನೀಡುವ ಮರಗಳೇ ನನ್ನ ಮಕ್ಕಳೆಂದು ಅಕ್ಕರೆಯಿಂದ ನೆಟ್ಟು ಬೆಳೆಸಿದ ವೃಕ್ಷಮಾತೆ. ಮುಂದಿನ ಪೀಳಿಗೆಗೆ ಪರಿಸರದ ಉಳಿವು ಎಷ್ಟು ಅವಶ್ಯಕ ಎಂಬುದನ್ನು ಸಮಾಜಕ್ಕೆ ತಿಳಿಸುತ್ತಿರುವ ಪ್ರೇಕರ ಶಕ್ತಿಯಾಗಿದ್ದಾರೆ ಎಂದು ಶ್ಲಾ ಸಿದರು.

11 ಮಂದಿಗೆ ನ್ಯಾಷನಲ್‌ ಗ್ರೀನರಿ ಪ್ರಶಸ್ತಿ:

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 11 ಸಾಧಕರಿಗೆ “ಸಾಲುಮರದ ತಿಮ್ಮಕ್ಕ ನ್ಯಾಷನಲ್‌ ಗ್ರೀನರಿ ಅವಾರ್ಡ್‌-2020′ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್‌. ಕಿರಣ್‌ಕುಮಾರ್‌, ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ, ಟಿವಿ 9 ಪ್ರಧಾನ ನಿರ್ಮಾಪಕ ರಂಗನಾಥ ಭಾರದ್ವಾಜ್‌, ಗ್ರೀನ್‌ ಇಂಡಿಯಾ ಚಾಲೆಂಜ್‌ ಸಂಸ್ಥಾಪಕರೂ ಆಗಿರುವ ತೆಲಂಗಾಣ ರಾಜ್ಯಸಭಾ ಸದಸ್ಯ ಸಂತೋಷ್‌ಕುಮಾರ್‌, ಆಂಧ್ರ ಪ್ರದೇಶದ ಪರಿಸರ ಸಂರಕ್ಷಕಿ ಸತ್ಯ ಮಾರ್ಗನಿ, ಬೇಲೂರಿನ 10 ರೂ. ವೈದ್ಯ ಖ್ಯಾತಿಯ ಡಾ. ಚಂದ್ರಮೌಳಿ, ಬೈಂದೂರು ಸಮಾಜ ಸೇವಕ ಡಾ. ಗೋವಿಂದ ಬಾಬು ಪೂಜಾರಿ, ಆಸ್ಟ್ರೇಲಿಯಾ ಕನ್ನಡ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸತೀಶ್‌ ಭದ್ರಣ್ಣ, ಚಿಕ್ಕಬಳ್ಳಾಪುರ ಸಮಾಜ ಸೇವಕ ಅಮರ್‌ ನಾಗೇಶ್‌ರಾವ್‌, ಬಾಲ ಪ್ರತಿಭೆ ಪುಟಾಣಿ ಜ್ಞಾನ ಗುರುರಾಜ್‌ ಮತ್ತು ಪೊಲೀಸ್‌ ಇಲಾಖೆಯ ಕೆ. ಶಿವಕುಮಾರ್‌ ಅವರಿಗೆ ಪ್ರಶಸ್ತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌, ಶಾಸಕರಾದ ರೇಣುಕಾಚಾರ್ಯ, ಕೆ.ಎಸ್‌. ಲಿಂಗೇಶ್‌, ಅದಮ್ಯ ಚೇತನ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌, ತಿಮ್ಮಕ್ಕನವರ ದತ್ತು ಪುತ್ರ ಬಳ್ಳೂರು ಉಮೇಶ್‌, ಸಾಲುಮರದ ತಿಮ್ಮಕ್ಕ ಪ್ರತಿಷ್ಠಾನದ ಪ್ರಭಾವತಿ ನಾಗೇಶ್‌ ಹಾಗೂ ನಿವೃತ್ತ ಐಎಎಸ್‌ ಅಧಿಕಾರಿ ನಾಗಲಾಂಬಿಕಾ ದೇವಿ ಉಪಸ್ಥಿತರಿದ್ದರು.

ಜೀವನದ ಕೊನೆಯವರೆಗೂ ಮಗುವಿನ ಮುಗ್ಧತೆ ಕಾಪಾಡಿಕೊಳ್ಳುವುದು ಮತ್ತು ಆತ್ಮಸಾಕ್ಷಿಯಾಗಿ ನಡೆದುಕೊಳ್ಳುವುದು ಬಹಳ ಕಷ್ಟದ ಕೆಲಸ. ಈ ಎರಡನ್ನೂ ಸಾಧಿಸಿದವರು ಮನುಷ್ಯರಲ್ಲ. ದೇವಮಾನವರಾಗುತ್ತಾರೆ. ಇಂತಹ ದೇವರ ಕೆಲಸವನ್ನು ಶುದ್ಧ ಅಂತಃಕರಣದಿಂದ ಸಾಲುಮರದ ತಿಮ್ಮಕ್ಕ ಮಾಡಿದ್ದಾರೆ.ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next