ನವದೆಹಲಿ: ಭಾರತದ ಮಾಜಿ ವೇಗದ ಬೌಲರ್ ಎಸ್.ಶ್ರೀಶಾಂತ್ ಬುಧವಾರ ಎಲ್ಲ ಮಾದರಿಯ ಕ್ರಿಕೆಟಿಗೆ ವಿದಾಯ ಘೋಷಿಸಿದರು. ಇದೊಂದು ಸೂಕ್ತ ಹಾಗೂ ಗೌರವಯುತ ನಿರ್ಧಾರವಾಗಿದೆ ಎಂಬುದಾಗಿ 39 ವರ್ಷದ ಶ್ರೀಶಾಂತ್ ಹೇಳಿದರು.
ಶ್ರೀಶಾಂತ್ 2005-2011ರ ಅವಧಿಯಲ್ಲಿ ಭಾರತದ ಪರ 27 ಟೆಸ್ಟ್, 53 ಏಕದಿನ ಹಾಗೂ 10 ಟಿ20 ಪಂದ್ಯಗಳನ್ನಾಡಿದ್ದಾರೆ. ಕ್ರಮವಾಗಿ 87, 75 ಹಾಗೂ 7 ವಿಕೆಟ್ ಉರುಳಿಸಿದ್ದಾರೆ. 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯನೆಂಬುದು ಶ್ರೀಶಾಂತ್ ಪಾಲಿನ ಹೆಗ್ಗಳಿಕೆ. 2011ರಲ್ಲಿ ಕೊನೆಯ ಸಲ ಭಾರತವನ್ನು ಪ್ರತಿನಿಧಿಸಿದ್ದರು.
2013ರ ಐಪಿಎಲ್ ವೇಳೆ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದರು ಎಂಬ ಆರೋಪದ ಕಾರಣ ಬಿಸಿಸಿಐ ಶ್ರೀಶಾಂತ್‌ಗೆ ಆಜೀವ ನಿಷೇಧ ವಿಧಿಸಿತ್ತು. ಬಳಿಕ 2020ರ ಸೆಪ್ಟೆಂಬರ್‌ನಲ್ಲಿ ಈ ನಿಷೇಧದಿಂದ ಮುಕ್ತರಾಗಿದ್ದರು.
ನನ್ನನ್ನು ಬೆಂಬಲಿಸಿದ, ಮರಳಿ ದೇಶೀಯ ಕ್ರಿಕೆಟ್‌ನಲ್ಲಿ ಆಡುವಂತಾಗಲು ನೆರವು ನೀಡಿದ ಎಲ್ಲರಿಗೂ ಕೃತಜ್ಞತೆಗಳು. ದೇಶವನ್ನು ಪ್ರತಿನಿಧಿಸಿದ್ದು ನನ್ನ ಪಾಲಿನ ಹೆಮ್ಮೆಯ ಕ್ಷಣ. ಯಾವುದೇ ಪಶ್ಚಾತ್ತಾಪವಾಗಲೀ, ದುಃಖವಾಗಲೀ ಇಲ್ಲದೆ ಪ್ರಥಮ ದರ್ಜೆ ಕ್ರಿಕೆಟಿಗೆ ವಿದಾಯ ಹೇಳುತ್ತಿದ್ದೇನೆ. ಕ್ರಿಕೆಟ್ ಕೋಚಿಂಗ್ ನಡೆಸುವುದು ನನ್ನ ಯೋಜನೆ ಎಂಬುದಾಗಿ ಶ್ರೀಶಾಂತ್ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ದೇಶೀಯ ಕ್ರಿಕೆಟಿಗೆ ಮರಳಿದ ಶ್ರೀಶಾಂತ್ ಈ ಬಾರಿ ಕೇರಳ ಪರ ರಣಜಿ ಲೀಗ್ ಪಂದ್ಯವನ್ನಾಡಿ 2 ವಿಕೆಟ್ ಕೆಡವಿದ್ದರು. ಆದರೆ ಕೇರಳ ನಾಕೌಟ್ ಪ್ರವೇಶಿಸಲು ವಿಫಲವಾಯಿತು. ಹೀಗಾಗಿ ಶ್ರೀಶಾಂತ್ ನಿವೃತ್ತಿ ನಿರ್ಧಾರ ಮಾಡಿದರು ಎನ್ನಲಾಗುತ್ತಿದೆ.