Advertisement

ಬಿಡಿಎಗೆ 15 ಸಾವಿರ ಕೋಟಿ ಸಂಗ್ರಹದ ಗುರಿ: ವಿಶ್ವನಾಥ್

08:13 PM Nov 30, 2021 | Team Udayavani |

ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಸುಮಾರು 10 ರಿಂದ 15 ಸಾವಿರ ಕೋಟಿ ರೂಪಾಯಿ ಕ್ರೋಢೀಕರಿಸಿ ನಗರದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪಾಲುದಾರರಾಗಲಿದ್ದೇವೆ ಎಂದು ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ.

Advertisement

ಪ್ರಾಧಿಕಾರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದಾದ್ಯಂತ ಬಿಡಿಎಗೆ ಸೇರಿದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಸ್ವತ್ತು ಇದೆ. ನಾನಾ ಕಾರಣಗಳಿಂದಾಗಿ ಇಂತಹ ಸ್ವತ್ತು ಪರರ ವಶದಲ್ಲಿದೆ. ಈ ಸ್ವತ್ತನ್ನು ಬಿಡಿಎ ವಶಪಡಿಸಿಕೊಂಡು ಸಾರ್ವಜನಿಕರ ಅನುಕೂಲಕ್ಕಾಗಿ ನಿವೇಶನಗಳನ್ನಾಗಿ ಮಾಡಿ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಿದರು.

ಸಾವಿರಾರು ನಾಗರಿಕರಿಗೆ ನಿವೇಶನಗಳನ್ನು ನೀಡುವ ಮೂಲಕ ಪ್ರಾಧಿಕಾರ ಅವರಿಗೆ ಸ್ವಂತ ಮನೆಗಳನ್ನು ನಿರ್ಮಿಸಿಕೊಳ್ಳಲು ನೆರವಾಗಿದೆ. ಇನ್ನೂ ಸಾವಿರಾರು ಜನರಿಗೆ ನಿವೇಶನಗಳನ್ನು ಹಂಚಿಕೆ ಮಾಡುವ ಸಾಮರ್ಥ್ಯ ಸಂಸ್ಥೆಗಿದ್ದು, ಈ ಪ್ರಕ್ರಿಯೆಯನ್ನು ಹಂತಹಂತವಾಗಿ ಕೈಗೊಳ್ಳಲಾಗುತ್ತದೆ ಎಂದರು.

15 ಸಾವಿರ ಕೋಟಿ ಸಂಗ್ರಹದ ಗುರಿ
ಬಿಡಿಎಗೆ ಸೇರಿದ ಸಾವಿರಾರು ನಿವೇಶನಗಳನ್ನು ಪತ್ತೆ ಮಾಡುವ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ನ್ಯಾಯಾಲಯದ ಆದೇಶದಂತೆ ಇಂತಹ ನಿವೇಶನಗಳನ್ನು ಬಿಡಿಎ ಮರು ವಶಕ್ಕೆ ಪಡೆದುಕೊಂಡು ಹರಾಜು ಹಾಕುವ ಮೂಲಕ ಆರ್ಥಿಕ ಸಂಪನ್ಮೂಲವನ್ನು ಕ್ರೋಢೀಕರಿಸಲಿದೆ. ಹೀಗೆ ಮುಂದಿನ ಒಂದು ವರ್ಷದ ಅವಧಿಯಲ್ಲಿ 10 ರಿಂದ 15 ಸಾವಿರ ಕೋಟಿ ರೂಪಾಯಿ ಸಂಗ್ರಹ ಮಾಡುವ ನಿರೀಕ್ಷೆ ಇದೆ. ಈ ಮೂಲಕ ಸಂಸ್ಥೆಯನ್ನು ಆರ್ಥಿಕ ಸ್ವಾವಲಂಬಿಯನ್ನಾಗಿ ಮಾಡುವುದಲ್ಲದೇ, ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗೆ ಮತ್ತಷ್ಟು ಕೊಡುಗೆಯನ್ನು ನೀಡಲಿದೆ ಎಂದು ತಿಳಿಸಿದರು.

ಕೆಲವು ಸಿಬ್ಬಂದಿಯಿಂದ ಇತ್ತೀಚಿನ ದಿನಗಳಲ್ಲಿ ಕೆಟ್ಟ ಹೆಸರು ಬಂದಿದೆ. ಇದನ್ನು ತೊಡೆದು ಹಾಕುವ ಶಕ್ತಿ ನಮ್ಮಲ್ಲಿದೆ. ಈ ಕಪ್ಪು ಚುಕ್ಕೆ ಬಂದಿದೆ ಎಂಬ ಕಾರಣಕ್ಕೆ ಯಾರೂ ಎದೆಗುಂದಬಾರದು. ಅದನ್ನು ಮೆಟ್ಟಿ ನಿಂತು ಸಂಸ್ಥೆಗೆ ಮತ್ತೆ ಒಳ್ಳೆಯ ಹೆಸರನ್ನು ತಂದು ನಾಗರಿಕ ಸ್ನೇಹಿ ಸಂಸ್ಥೆಯನ್ನಾಗಿ ಮಾಡುವ ಸಂಕಲ್ಪವನ್ನು ಈ ಶುಭ ಸಂದರ್ಭದಲ್ಲಿ ತೆಗೆದುಕೊಳ್ಳೋಣ ಎಂದು ಹೇಳಿದರು.

Advertisement

ಇದನ್ನೂ ಓದಿ : ಗುರುದ್ವಾರದಲ್ಲಿ ಪೋಸ್‌ ಕೊಟ್ಟು ಪಜೀತಿಗೆ ಸಿಲುಕಿದ ಪಾಕ್‌ ಮಾಡೆಲ್‌

ಸಿಬ್ಬಂದಿಗೆ ಸುಸಜ್ಜಿತ ಕಲ್ಯಾಣಮಂಟಪ
ಇದೇ ವೇಳೆ, ಇತರೆ ಇಲಾಖೆಗಳ ಸಿಬ್ಬಂದಿಗೆ ಇರುವ ರೀತಿಯಲ್ಲಿ ಬಿಡಿಎ ಸಿಬ್ಬಂದಿಗಾಗಿ ಒಂದು ಸುಸಜ್ಜಿತವಾದ ಕಲ್ಯಾಣಮಂಟಪವನ್ನು ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಜಾಗ ಗುರುತಿಸುವ ಪ್ರಕ್ರಿಯೆ ಆರಂಭವಾಗಿದ್ದು, ಮುಂದಿನ ಒಂದೂವರೆ ವರ್ಷದಲ್ಲಿ ಕಲ್ಯಾಣಮಂಟಪ ನಿರ್ಮಾಣವಾಗಲಿದೆ ಎಂದು ವಿಶ್ವನಾಥ್ ತಿಳಿಸಿದರು.

ಆಯುಕ್ತ ಎಂ.ಬಿ.ರಾಜೇಶ್ ಗೌಡ ಅವರು ಮಾತನಾಡಿ, ಬಿಡಿಎಯನ್ನು ಸಾರ್ವಜನಿಕ ಸ್ನೇಹಿ ಸಂಸ್ಥೆಯಾಗಿ ಮಾಡುವ ಜವಾಬ್ದಾರಿ ಎಲ್ಲರ ಮೇಲಿದ್ದು, ಇದಕ್ಕಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ರಾಕೇಶ್ ಸಿಂಗ್ ಅವರಿಂದ ಧ್ವಜಾರೋಹಣ
ಬೆಳಗ್ಗೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಧ್ವಜಾರೋಹಣ ನೆರವೇರಿಸಿದರು. ಸಮಾರಂಭದಲ್ಲಿ ಬಿಡಿಎ ನೌಕರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಜಿ.ಎಂ.ಶಿವಶಂಕರ್ ಸೇರಿದಂತೆ ಪದಾಧಿಕಾರಿಗಳು, ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.

ಗಾಯಕರಾದ ಆಯುಕ್ತ!
ರಾಜ್ಯೋತ್ಸವ ಸಮಾರಂಭದಲ್ಲಿ ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ವೇಳೆ, ಆಯುಕ್ತ ಎಂ.ಬಿ.ರಾಜೇಶ್ ಗೌಡ ಅವರು ನಾಲ್ಕೈದು ಕನ್ನಡ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next