ಬಾಗಲಕೋಟೆ : ರಾಜ್ಯದಲ್ಲಿದ್ದ ಸಮ್ಮಿಶ್ರ ಸರ್ಕಾರ ಕೆಡವಲು ನಮ್ಮ ಪಕ್ಷದ 13 ಜನ, ಜೆಡಿಎಸ್ ನ ಮೂವರು ಸೇರಿದಂತೆ ಹಲವರು ತಮ್ಮ ಕುಟುಂಬದವರನ್ನು ಬಿಟ್ಟು ಮುಂಬೈನಲ್ಲಿದ್ದರು. ತಿಂಗಳಾನುಗಟ್ಟಲೇ ಕುಟುಂಬ ಬಿಟ್ಟು ಇದ್ದಾಗ ಏನೇನಾಗಿದೆ ಯಾರಿಗೆ ಗೊತ್ತು ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ರಮೇಶ ಜಾರಕಿಹೋಳಿ ಸಿಡಿ ಕುರಿತ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು. ಸಿಡಿ ಪ್ರಕರಣದ ತನಿಖೆಯನ್ನು ಎಸ್ ಐ ಟಿಗೆ ಕೊಡಲಾಗಿದೆ. ಅದರ ಬದಲು ನಿವೃತ್ತ ನ್ಯಾಯಮೂರ್ತಿಗಳಿಂದ ಇದು ತನಿಖೆಯಾಗಬೇಕಿತ್ತು. ಸಿಡಿ ಪ್ರಕರಣದ ಹಿಂದೆ ಯಾವ ಮಹಾನ್ ನಾಯಕರಿದ್ದಾರೆ ಎಂಬುದು ತನಿಖೆಯಾಗಲಿದೆ. ಅದಕ್ಕೂ ಮುಂಚೆ ಬೇರೆ ಬೇರೆ ವ್ಯಕ್ತಿಗಳ ಹೆಸರು ಹೇಳುವುದು ಸರಿಯಾದ ಕ್ರಮವಲ್ಲ ಎಂದರು.
ಸಿಡಿ ಪ್ರಕರಣದಲ್ಲಿ ನಾವಿಲ್ಲ ಎಂದು ಕೆಲವರು ವಿಡೀಯೋ ಮೂಲಕ ಹೇಳಿಕೆ ಕೊಡುತ್ತಿದ್ದಾರೆ. ಈ ಪ್ರಕರಣದಲ್ಲಿ ತಳಕು ಹಾಕಿಕೊಂಡವರು ಎಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗದಷ್ಟು ಈ ಸರ್ಕಾರಕ್ಕೆ ಕಷ್ಟವೇನಲ್ಲ. ಹೇಳಿಕೆ ಕೊಟ್ಟವರ ವಿಡೀಯೋ ಎಲ್ಲಿಂದ ಅಪ್‌ಲೋಡ್ ಆಯಿತು ಪತ್ತೆ ಮಾಡಲಿ. ಅವರ ನಿಜವಾದ ಪಾತ್ರ ಏನು ಎಂಬುದು ತನಿಖೆ ಮಾಡಲಿ ಎಂದು ಹೇಳಿದರು.
ಇದು ಸಿ.ಡಿ ಸರ್ಕಾರ: ರಾಜ್ಯದಲ್ಲಿ ಇರುವುದು ಬಿಜೆಪಿ ಸರ್ಕಾರವೋ, ಸಿಡಿ ಸರ್ಕಾರವೋ ಎಂಬುದು ತಿಳಿಯುತ್ತಿಲ್ಲ. ಒಬ್ಬರ ಸಿಡಿ ಹೊರ ಬಂದ್ರೆ, ಸಚಿವ ಸಂಪುಟದ ಅರ್ಧದಷ್ಟು ಸಚಿವರು ಕೋರ್ಟ ಮೊರೆ ಹೋಗಿದ್ದಾರೆ. ಅವರ ಸಿಡಿ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಅವರೆಲ್ಲ ಮುಂದಿನ ಚುನಾವಣೆಯಲ್ಲಿ ಹೇಗೆ ಸ್ಪರ್ಧೆ ಮಾಡುತ್ತಾರೆ. ರಾಜಕೀಯ ನಾಯಕರು ಚಾಪೆಯ ಕೆಳಗೆ ನುಸುಳಿದರೆ, ಜನರು ರಂಗೋಲಿ ಕೆಳಗೆ ನುಸುಳುತ್ತಾರೆ. ಜನ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂದರು.
ಮುಂದೆ ಕಾಂಗ್ರೆಸ್ ಸರ್ಕಾರ :ನಮ್ಮ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮುಂದೆಯೂ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ. ಇದನ್ನು ಸ್ವಾಗತಿಸತ್ತೇನೆ. ಅವರು ಎಲ್ಲಿಯೇ ಸ್ಪರ್ಧೆ ಮಾಡಿದರೂ ಗೆಲುವು ಸಾಧಿಸುತ್ತಾರೆ. ಕಳೆದ ಬಾರಿ ಅವರು ಅತಿ ಕಡಿಮೆ ಮತಗಳಿಂದ ಗೆಲ್ಲಲ್ಲು ಕೆಲವು ಕಾರಣಗಳಿದ್ದವು. ಆಗ ಕೆಲ ವಿಷಯಗಳ ಮೇಲೆ ಚುನಾವನೆ ನಡೆದಿತ್ತು. ಮುಂಬರುವ ಚುನಾವಣೆಯಲ್ಲಿ ನಾವು ಗೆಲ್ಲುವುದಿಲ್ಲ ಎಂದು ಬಿಜೆಪಿ ನಾಯಕರೇ ನಮ್ಮ ಮುಂದೆ ಹೇಳುತ್ತಿದ್ದಾರೆ. ಹೀಗಾಗಿ ಮುಂದೆ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.