Advertisement

ಒಂದು ಪೈಸೆಯೂ ಪಡೆದಿಲ್ಲ; ಧರ್ಮಸ್ಥಳದಲ್ಲಿ ಮುದ್ದಹನುಮೇಗೌಡ

10:10 AM May 03, 2019 | Team Udayavani |

ಬೆಳ್ತಂಗಡಿ: ತುಮಕೂರು ಲೋಕಸಭಾ ಕಣದಿಂದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸಲ್ಲಿಸಿದ್ದ ನಾಮಪತ್ರ ವಾಪಸ್‌ ಪಡೆಯಲು ಮತ್ತು ಮೈತ್ರಿ ಅಭ್ಯರ್ಥಿ ಎಚ್‌.ಡಿ.ದೇವೇಗೌಡ ಅವರ ಪರ ಪ್ರಚಾರ ನಡೆಸಲು ಒಂದು ನಯಾ ಪೈಸೆಯನ್ನೂ ಪಡೆದಿಲ್ಲ ಎಂದು ಕಾಂಗ್ರೆಸ್‌ ಸಂಸದ ಮುದ್ದುಹನುಮೇಗೌಡ ಅವರು ಧರ್ಮಸ್ಥಳ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಹೇಳಿಕೆ ನೀಡಿದ್ದಾರೆ.

Advertisement

ಗುರುವಾರ ಬೆಳಗ್ಗೆ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಹೊರ ಬಂದ ಬಳಿಕ ಬೆಂಬಲಿಗರೊಂದಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಮುದ್ದುಹನುಮೇಗೌಡ , ನನ್ನ ಸ್ಥಾನ ಮೈತ್ರಿಗೆ ತ್ಯಾಗ ಮಾಡಿದ್ದರಿಂದ ನಾನು ನಾಮಪತ್ರ ಹಾಕಿದ್ದೆ.ಕ್ರಿಯಾಶೀಲನಾಗಿ ಕೆಲಸ ಮಾಡಿದರೂ ನನಗೆ ಅವಕಾಶ ಸಿಗಲಿಲ್ಲ. ಹೀಗಾಗಿ ನಾನು ಪುನಃ ಅವಕಾಶ ಬಯಸಿ ನಾಮಪತ್ರ ಸಲ್ಲಿಸಿದ್ದೆ ಎಂದರು.

ರಾಹುಲ್‌ ಗಾಂಧಿ, ವೇಣುಗೋಪಾಲ್‌, ಸಿದ್ದರಾಮಯ್ಯ, ಜಿ.ಪರಮೇಶ್ವರ್‌ ಮತ್ತು ದಿನೇಶ್‌ಗುಂಡೂರಾವ್‌ ಎಲ್ಲರೂ ಕೂಡ ಮೈತ್ರಿ ಅನಿವಾರ್ಯತೆ ಬಗ್ಗೆ, ಸ್ಥಾನ ಬಿಟ್ಟುಕೊಡುವ ಬಗ್ಗೆ , ರಾಷ್ಟ್ರ ಮತ್ತು ರಾಜ್ಯದ ಹಿತದ ಹಿನ್ನಲೆಯಲ್ಲಿ ತ್ಯಾಗ ಮಾಡಬೇಕೆಂದು ಮನವರಿಕೆ ಮಾಡಿದ ಹಿನ್ನಲೆಯಲ್ಲಿ ತ್ಯಾಗ ಮಾಡಿ , ಪ್ರಚಾರದಲ್ಲೂ ಭಾಗಿಯಾಗಿದ್ದೇನೆ.

ಚುನಾವಣೆ ಮುಗಿದ ಬಳಿಕ ಸಮಾಜದಲ್ಲಿ ಯಾವುದೇ ಮಾನ್ಯತೆ ಇಲ್ಲದ ಇಬ್ಬರು ವ್ಯಕ್ತಿಗಳ ನಡುವೆ ಸಂಭಾಷಣೆ ನಡೆಯುತ್ತದೆ. ಮೂರನೇ ವ್ಯಕ್ತಿಗಳು ಮಾತನಾಡಿದ್ದಕ್ಕೆ ಸಾಮಾಜಿಕ ತಾಣಗಳು ಮತ್ತು ಮಾಧ್ಯಮಗಳಲ್ಲಿ ಹೆಚ್ಚು ಪ್ರಾಮುಖ್ಯ ನೀಡಲಾಯಿತು. ಕೋಟಿ ಕೋಟಿ ಹಣದ ಡೀಲ್‌ ಆಗಿದೆ ಎನ್ನುವ ತಪ್ಪು ಸಂದೇಶ ರಾಜ್ಯದ ಜನತೆಗೆ ಹೊರಟು ಹೋಯಿತು.

ನನ್ನ ರಾಜಕೀಯ ಬೆಳವಣಿಗೆ ಸಹಿಸದೆ, ವಿಚಿದ್ರ ಮತ್ತು ವಿಕೃತ ಮನಸ್ಥಿತಿ ಇದ್ದವರು ಇದನ್ನು ಮಾಡಿದ್ದಾರೆ. ಅಂಥಹವರಿಗೆ ಭಗವಂತ ಒಳ್ಳೆಯ ಮನಸ್ಸು ಕೊಡಲಿ ಎಂದರು.

Advertisement

ಇದನ್ನು ನಾನು ಸ್ಪಷ್ಟ ಪಡಿಸಲೇ ಬೇಕಿತ್ತು. ಇವತ್ತು ರಾಜ್ಯದ ಜನ , ಪ್ರಪಂಚಾದ್ಯಂತ ನಂಬಿಕೆ ಇರುವ ಸ್ಥಾನದಲ್ಲಿ ನನ್ನ ಅಭಿಪ್ರಾಯವನ್ನು ಹಂಚಿಕೊಳ್ಳಬೇಕು ಎಂದು ಧರ್ಮಸ್ಥಳ ಆಯ್ದುಕೊಂಡೆ.

ನನ್ನ ರಾಜಕೀಯವನ್ನು ಮೊದಲಿನಿಂದಲೂ ನೋಡಿಕೊಂಡು ಬಂದವರಿಗೆ , ವಿಶ್ವಾಸವಿಟ್ಟುಕೊಂಡವರಿಗೆ ಅನುಮಾನದ ಛಾಯೆ ಬಂದು ನನ್ನನ್ನು ಅನುಮಾನದ ದೃಷ್ಟಿಯಿಂದ ನೋಡುವುದು ನಿಲ್ಲಬೇಕು ಎಂದು ಸ್ವಾಮಿಯ ಸನ್ನಿಧಾನದಲ್ಲಿ ನಿಂತಿದ್ದೇನೆ.

ದೇವರ ದರ್ಶನ ಮಾಡಿ ಬಂದಿದ್ದೇನೆ, ನಾಮಪತ್ರ ವಾಪಾಸ್‌ ಪಡೆಯಲಿಕ್ಕೆ ಅಥವಾ ಚುನಾವಣಾ ಪ್ರಕ್ರಿಯೆ ಯಲ್ಲಿ ಭಾಗವಹಿಸಲಿಕ್ಕೆ ಒಂದು ನಯಾ ಪೈಸೆ ಹಣವನ್ನು ಪಡೆದಿಲ್ಲ ಎನ್ನುವುದನ್ನು ಸ್ವಾಮಿಯ ಮುಂದೆ ರಾಜ್ಯದ ಜನರಿಗೆ ಹೇಳುತ್ತೇನೆ.

ನಾನೋಬ್ಬ ನ್ಯಾಯಾಂಗ ಹಿನ್ನಲೆಯಿಂದ ರಾಜಕಾರಣಕ್ಕೆ ಬಂದವ.ನನ್ನ ಚಾರಿತ್ರ್ಯ ಹರಣ ಮಾಡುವಂತ ಪ್ರಯತ್ನ ಮಾಡಿದವರಿಗೆ ಭಗವಂತಒಳ್ಳೆ ಯ ಮನಸ್ಸು ನೀಡಲಿ ಎಂದು ಹೇಳಿ ಭಾವುಕರಾದರು.

ಈ ವಿಚಾರವನ್ನುಅನಿವಾರ್ಯವಾಗಿ ಹೇಳಲೇ ಬೇಕಾಗಿರುವುದು ದುರಂತ.ಅದು ಆಗಬಾರದಿತ್ತು. ನನಗೂ ಕೂಡ ನೋವಾಗಿದೆ ಎಂದರು.

ನಾನು ಪ್ರಾಮಾಣಿಕವಾಗಿ ಇದ್ದೇನೆ ಎಂದು ಹೇಳಿಕೊಳ್ಳಲು ಇದ್ದದು ಇದೊಂದೆ ಮಾರ್ಗ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next