ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಮೈಸೂರು -ಬೆಂಗಳೂರು 275 ರಾಷ್ಟ್ರೀಯ ಹೆದ್ದಾರಿ ಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಹೆಸರನ್ನು ನಾಮಕರಣ ಮಾಡಲು ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಜನವರಿ 01 ರಂದು ಎಸ್.ಎಂ.ಕೃಷ್ಣ ಅವರು ಈ ಬಗ್ಗೆ ಪತ್ರ ಬರೆದಿದ್ದು, ಹೊಸತಾಗಿ ನಿರ್ಮಾಣಗೊಂಡಿರುವ ರಸ್ತೆಗೆ 1902 -1940ರ ವರೆಗೆ ಮೈಸೂರಿನ ಅರಸರಾಗಿದ್ದ ಒಡೆಯರ್ ಹೆಸರಿಡಲು ಮನವಿ ಮಾಡಿದ್ದಾರೆ.
ಅನೇಕ ಶತಮಾನಗಳ ಪರಂಪರೆ ಮತ್ತು ಪದ್ಧತಿಗಳಲ್ಲಿ ಸಮೃದ್ಧವಾಗಿರುವ ಮೈಸೂರು ಸಂಸ್ಕೃತಿಯನ್ನು ರೂಪಿಸಿದ, ಸಮುದಾಯ ಸಹ ಅಸ್ತಿತ್ವದ ಮಾನವೀಯ ಆವೃತ್ತಿಯನ್ನು ಬೆಳೆಸಿದವರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೃಷ್ಣರಾಜ ಸಾಗರ ಅಣೆಕಟ್ಟು ನಿರ್ಮಾಣ ಮಾಡಿದ್ದು ಜೀವಮಾನದ ಮಹತ್ಸಾಧನೆಯಾಗಿದೆ ಎಂದು ಬಣ್ಣಿಸಿದ್ದಾರೆ.
ಮಹಾರಾಜರ ಆಡಳಿತ ಅವಧಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಅವರನ್ನು ಎಲ್ಲರೂ ರಾಜಶ್ರೀ ಎಂದು ಕರೆಯುತ್ತಿದ್ದರು. ಆ ಹೆಸರನ್ನು ಅವರ ಆಡಳಿತಾತ್ಮಕ ಕಾರ್ಯ ವೈಖರಿಯನ್ನು ಮೆಚ್ಚಿ ಮಹಾತ್ಮ ಗಾಂಧೀಜಿ ಅವರೇ ನೀಡಿದ್ದರು ಎಂದು ಸುದೀರ್ಘ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.